Holiday: ಮೂರು ದಿನ ದಿಢೀರ್ ರಜೆ ಘೋಷಿಸಿದ ಸರ್ಕಾರ
ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಭಾರತದ ಮೇಲೆ ಪಾಕಿಸ್ತಾನ ದಾಳಿ ಯತ್ನಗಳನ್ನು ನಡೆಸುತ್ತಿದೆ. ಗಡಿ ರಾಜ್ಯಗಳಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಭಾರತದ ಪ್ರದೇಶಗಳ ಮೇಲೆ ದಾಳಿ ನಡೆಸಲು ಮುಂದಾಗಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಹಲವು ರಾಜ್ಯಗಳಲ್ಲಿ ಎಲ್ಲ ಶಾಲೆಗಳು, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಅಲ್ಲಿನ ಸರ್ಕಾರಗಳು ರಜೆ ಘೋಷಿಸಿವೆ.
ಜಮ್ಮು ಮತ್ತು ಕಾಶ್ಮೀರದ ಸತ್ವಾರಿ, ಸಾಂಬಾ, ಆರ್‌ಎಸ್ ಪುರ ಮತ್ತು ಅರ್ನಿಯಾ ವಲಯಗಳಲ್ಲಿ ಎಂಟು ಕ್ಷಿಪಣಿಗಳನ್ನು ಉಡಾಯಿಸಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರಾಡಳಿತ ಪ್ರದೇಶ ಸರ್ಕಾರವು ಅಲ್ಲಿನ ಎಲ್ಲ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಎರಡು ದಿನಗಳ ಕಾಲ ಮುಚ್ಚುವಂತೆ ಆದೇಶಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರವಲ್ಲದೆ, ಪಂಜಾಬ್ ಸರ್ಕಾರ ಕೂಡ ಮುಂದಿನ ಮೂರು ದಿನಗಳವರೆಗೆ ರಾಜ್ಯದ ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ಆದೇಶಿಸಿದೆ. ಪರಿಸ್ಥಿತಿ ಮಿತಿಮೀರುತ್ತಿರುವ ಹಿನ್ನೆಲೆ ಪಂಜಾಬ್‌ನಾದ್ಯಂತ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಎಲ್ಲ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಮುಂದಿನ ಮೂರು ದಿನಗಳವರೆಗೆ ಸಂಪೂರ್ಣವಾಗಿ ಮುಚ್ಚಲ್ಪಡುತ್ತವೆ ಎಂದು ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಮಾಹಿತಿ ನೀಡಿದ್ದಾರೆ.
ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯವು ಮೇ 9, 10 ಮತ್ತು 12ರಂದು ನಡೆಯಬೇಕಿದ್ದ ಎಲ್ಲ ಪರೀಕ್ಷೆಗಳನ್ನು ಮುಂದೂಡಿದೆ. ಹೊಸ ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು ಎಂದು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ಪಂಜಾಬ್ ಮತ್ತು ಹರಿಯಾಣದ ರಾಜಧಾನಿಯಾದ ಚಂಡೀಗಢದಲ್ಲಿ ಶನಿವಾರದವರೆಗೆ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಹರಿಯಾಣದಲ್ಲಿ ಶುಕ್ರವಾರ ಮತ್ತು ಶನಿವಾರ ಪಂಚಕುಲದಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಡುತ್ತವೆ ಎಂದು ಹೇಳಿದೆ. ರಾಜಸ್ಥಾನ ಸರ್ಕಾರವೂ ಗಡಿಯಲ್ಲಿರುವ ಐದು ಜಿಲ್ಲೆಗಳ ಶಾಲೆಗಳನ್ನು ಮುಚ್ಚಿದೆ.

ಎಲ್ಲ ನಾಗರಿಕರು ಮನೆಯೊಳಗೆ ಮತ್ತು ಕಿಟಕಿಗಳಿಂದ ದೂರವಿರುವಂತೆ ಮತ್ತು ದೀಪಗಳನ್ನು ಆಫ್ ಮಾಡಿ ಮತ್ತು ಕಿಟಕಿ ಪರದೆಗಳನ್ನು ಬಿಡದಂತೆ ಪಂಜಾಬ್ ಜನರಿಗೆ ವಿನಂತಿಸಲಾಗಿದೆ. ಯಾವುದೇ ಭಯಪಡುವ ಅಗತ್ಯವಿಲ್ಲ, ಈಗ ಸೈರನ್ ಮೊಳಗುತ್ತದೆ. ಅದು ಸ್ಪಷ್ಟವಾದ ನಂತರ ನಾವು ಮತ್ತೆ ಸಂದೇಶವನ್ನು ರವಾನಿಸುತ್ತೇವೆ. ನಮ್ಮ ಸಶಸ್ತ್ರ ಪಡೆಗಳು ಕಾರ್ಯಾಚರಣೆಯಲ್ಲಿವೆ. ನೀವೆಲ್ಲ ನಾವು ಮನೆಯೊಳಗೆ ಉಳಿಯುವ ಮೂಲಕ ಸೇನೆಗೆ ಬೆಂಬಲ ನೀಡಬೇಕಾಗಿದೆ. ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಮನವಿ ಮಾಡಲಾಗಿದೆ.
ಪಾಕಿಸ್ತಾನದೊಂದಿಗಿನ ಅಂತರರಾಷ್ಟ್ರೀಯ ಗಡಿಯಲ್ಲಿನ ಉದ್ವಿಗ್ನತೆಯನ್ನು ಉಲ್ಲೇಖಿಸಿ ಪಂಜಾಬ್ ಸರ್ಕಾರವು ಎಲ್ಲ ಪೊಲೀಸ್ ಸಿಬ್ಬಂದಿ ರಜೆಗಳನ್ನು ರದ್ದುಗೊಳಿಸಿದೆ. ಯಾವುದೇ ಮದುವೆಗಳು ಮತ್ತು ಇತರ ಕಾರ್ಯಕ್ರಮಗಳ ಸಮಯದಲ್ಲಿ ಪಟಾಕಿಗಳನ್ನು ಸಿಡಿಸುವುದನ್ನು ಇಲ್ಲಿನ ಜಿಲ್ಲಾಧಿಕಾರಿಗಳು ನಿಷೇಧಿಸಿದ್ದಾರೆ. ಹಲವು ರಾಜ್ಯಗಳಲ್ಲಿ ಎಲ್ಲ ಅಧಿಕಾರಿಗಳ ರಜೆ ರದ್ದು ಮಾಡಲಾಗಿದ್ದು, ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.












Click it and Unblock the Notifications