ದೇಶದಲ್ಲಿ 99 ಲಕ್ಷದ ಗಡಿ ದಾಟಿದ ಒಟ್ಟು ಕೋವಿಡ್ ಪ್ರಕರಣ
ನವದೆಹಲಿ, ಡಿಸೆಂಬರ್ 15: ಭಾರತದ ಒಟ್ಟು ಕೊರೊನಾ ವೈರಸ್ ಪ್ರಕರಣಗಳು 99 ಲಕ್ಷದ ಗಡಿ ದಾಟಿದೆ. ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಮಂಗಳವಾರ ಗಣನೀಯ ಇಳಿಕೆಯಾಗಿದೆ. 25 ಸಾವಿರಕ್ಕಿಂತಲೂ ಕಡಿಮೆ ಪ್ರಕರಣ ದಾಖಲಾಗಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 22,065 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿವೆ. ಇದರಿಂದ ಒಟ್ಟು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 99,06,165ಕ್ಕೆ ಏರಿಕೆಯಾಗಿದೆ. ಒಂದು ದಿನದಲ್ಲಿ 354 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಮರಣ ಪ್ರಮಾಣ 1,43,709ಕ್ಕೆ ತಲುಪಿದೆ.
ಒಂದೇ ದಿನ 34,477 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಪ್ರಮಾಣಕ್ಕಿಂತ ಸುಮಾರು 12 ಸಾವಿರ ಡಿಸ್ಚಾರ್ಜ್ ಆಗಿರುವುದು ದಾಖಲೆಯಾಗಿದೆ. ದೇಶದಲ್ಲಿ ಇದುವರೆಗೂ ಒಟ್ಟು ಸೋಂಕಿತರಲ್ಲಿ 94,22,636 ಮಂದಿ ಬಿಡುಗಡೆಯಾಗಿದ್ದಾರೆ. ಇದರಿಂದ ಸಕ್ರಿಯ ಪ್ರಕರಣಗಳು 3,39,820ಕ್ಕೆ ಇಳಿಕೆಯಾಗಿದೆ.

ಡಿಸೆಂಬರ್ 14ರವರೆಗೂ ದೇಶದಾದ್ಯಂತ ಒಟ್ಟು 15,55,60,655 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದರಲ್ಲಿ ಸೋಮವಾರ 9,93,665 ಪರೀಕ್ಷೆಗಳು ನಡೆದಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾಹಿತಿ ನೀಡಿದೆ.
ಜಾಗತಿಕ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 73,171,533ಕ್ಕೆ ತಲುಪಿದೆ. ಇದರಲ್ಲಿ 51,290,804 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,627,254 ಮಂದಿ ಇದುವರೆಗೂ ಬಲಿಯಾಗಿದ್ದಾರೆ. ಅಮೆರಿಕದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು 16,934,817 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 308,009 ಮಂದಿ ಜೀವ ಕಳೆದುಕೊಂಡಿದ್ದಾರೆ. ಅದರ ನಂತರದ ಸ್ಥಾನದಲ್ಲಿ ಭಾರತವಿದೆ.












Click it and Unblock the Notifications