ಪಂಚ ರಾಜ್ಯ ವಿಧಾನಸಭಾ ಚುನಾವಣೆ: 2021ರಲ್ಲಿ ಎಕ್ಸಿಟ್ ಪೋಲ್ ಹೇಳಿದ್ದೇನು? ಅಸಲಿಗೆ ನಡೆದಿದ್ದೇನು?

ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭಾ ಸಮರ-2026 ಈಗ ಕೊನೆಯ ಹಂತಕ್ಕೆ ತಲುಪಿದೆ. ಪಶ್ಚಿಮ ಬಂಗಾಳದ ಅಂತಿಮ ಹಂತದ ಮತದಾನವು ಏಪ್ರಿಲ್ 29ರಂದು (ನಾಳೆ) ಸಂಜೆ ಪೂರ್ಣಗೊಳ್ಳುತ್ತಿದ್ದಂತೆಯೇ, ಇಡೀ ದೇಶ ಕಾತರದಿಂದ ಕಾಯುತ್ತಿರುವ ಚುನಾವಣೋತ್ತರ ಸಮೀಕ್ಷೆಗಳು (Exit Polls) ಹೊರಬೀಳಲಿವೆ. ಮೇ 4ರಂದು ಅಧಿಕೃತ ಫಲಿತಾಂಶ ಪ್ರಕಟವಾಗುವ ಮೊದಲೇ ಮತದಾರರ ಒಲವು ಯಾರ ಕಡೆಗಿದೆ ಎಂಬ ಅಂದಾಜು ಈ ಸಮೀಕ್ಷೆಗಳಿಂದ ಲಭ್ಯವಾಗಲಿದೆ. ಸದ್ಯ ಕುತೂಹಲ ಹೆಚ್ಚಿಸಿರುವ ಈ ಐದೂ ರಾಜ್ಯಗಳಲ್ಲಿ ಕಳೆದ ಬಾರಿ ಅಂದರೆ 2021ರ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ಭವಿಷ್ಯಗಳು ಎಷ್ಟರಮಟ್ಟಿಗೆ ನಿಜವಾಗಿದ್ದವು? ಅಂದು ಸಮೀಕ್ಷೆಗಳ ಲೆಕ್ಕಾಚಾರ ಮತ್ತು ಅಂತಿಮ ಫಲಿತಾಂಶದ ಚಿತ್ರಣ ಹೇಗಿತ್ತು ಎಂಬ ಪೂರ್ಣ ಮಾಹಿತಿ ಇಲ್ಲಿದೆ.

ಬಂಗಾಳದಲ್ಲಿ ಉಲ್ಟಾ ಹೊಡೆದಿದ್ದ ಸಮೀಕ್ಷೆಗಳ ಲೆಕ್ಕಾಚಾರ

2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಎಕ್ಸಿಟ್ ಪೋಲ್‌ಗಳು ನೀಡಿದ್ದ ಅಂದಾಜು ಮತ್ತು ಅಂತಿಮ ಫಲಿತಾಂಶದ ನಡುವೆ ಭಾರಿ ವ್ಯತ್ಯಾಸವಿತ್ತು. ಆಗಿನ ಸಮೀಕ್ಷೆಗಳು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ಬಿಜೆಪಿ ನಡುವೆ ಅತ್ಯಂತ ಕಠಿಣ ಸ್ಪರ್ಧೆಯನ್ನು ಅಂದಾಜಿಸಿದ್ದವು. ಒಟ್ಟು 292 ಸ್ಥಾನಗಳ ಪೈಕಿ ಟಿಎಂಸಿ ಸುಮಾರು 156 ಸ್ಥಾನಗಳನ್ನು ಮತ್ತು ಬಿಜೆಪಿ 121 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದವು. ಅಂದರೆ, ಬಿಜೆಪಿ ಅಧಿಕಾರದ ಸನಿಹಕ್ಕೆ ಬರಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿದ್ದವು.

2021 Exit Poll vs Results

ಆದರೆ, ಅಧಿಕೃತ ಫಲಿತಾಂಶ ಹೊರಬಂದಾಗ ಎಲ್ಲ ಸಮೀಕ್ಷೆಗಳ ಲೆಕ್ಕಾಚಾರ ತಲೆಕೆಳಗಾಗಿತ್ತು. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 215 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ದಾಖಲಿಸಿತು. ಇನ್ನು ಬಲವಾದ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದ್ದ ಬಿಜೆಪಿ 77 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು. ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಯಿತು.

ದೈತ್ಯ ನಾಯಕರ ಅನುಪಸ್ಥಿತಿಯಲ್ಲಿ ತಮಿಳುನಾಡು ಚುನಾವಣೆ

2021ರ ಚುನಾವಣೆ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾಗಿತ್ತು. ರಾಜ್ಯದ ಇಬ್ಬರು ಪ್ರಬಲ ನಾಯಕರಾದ ಜೆ. ಜಯಲಲಿತಾ (AIADMK) ಮತ್ತು ಎಂ. ಕರುಣಾನಿಧಿ (DMK) ಅವರ ನಿಧನದ ನಂತರ ನಡೆದ ಮೊದಲ ವಿಧಾನಸಭಾ ಚುನಾವಣೆ ಇದಾಗಿತ್ತು. 2021ರಲ್ಲಿ ಬಹುತೇಕ ಎಕ್ಸಿಟ್ ಪೋಲ್‌ಗಳು ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಭರ್ಜರಿ ಜಯದ ಮುನ್ಸೂಚನೆ ನೀಡಿದ್ದವು.

ಡಿಎಂಕೆ ಮೈತ್ರಿಕೂಟ ಕನಿಷ್ಠ 160 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು. ಎಐಎಡಿಎಂಕೆ ಮೈತ್ರಿಕೂಟ ಸುಮಾರು 66 ಸ್ಥಾನಗಳಿಗೆ ಸೀಮಿತವಾಗಬಹುದು ಎನ್ನಲಾಗಿತ್ತು.ಇತರರು ಟಿಟಿವಿ ದಿನಕರನ್ ಅವರ ಎಎಮ್‌ಎಂಕೆಗೆ ಕೇವಲ 1 ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ತಿಳಿಸಿದ್ದವು. ಅಂತಿಮವಾಗಿ ಎಕ್ಸಿಟ್ ಪೋಲ್ ಅಂದಾಜಿನಂತೆಯೇ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಅಧಿಕಾರ ಚುಕ್ಕಾಣಿ ಹಿಡಿದಿತ್ತು.

2021 Exit Poll vs Results

ಎಕ್ಸಿಟ್ ಪೋಲ್ ಅಂದಾಜಿನಂತೆಯೇ ಕೇರಳದಲ್ಲಿ 'ಐತಿಹಾಸಿಕ' ಜಯ

2021ರ ಕೇರಳ ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಮಹತ್ವದ್ದಾಗಿತ್ತು. ಕೇರಳದ ಸಾಂಪ್ರದಾಯಿಕ "ಬದಲಾಗುವ ಸರ್ಕಾರ" ಪದ್ಧತಿಯನ್ನು ಮುರಿದು, ಎಲ್‌ಡಿಎಫ್ (LDF) ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಬಹುತೇಕ ಎಲ್ಲ ಎಕ್ಸಿಟ್ ಪೋಲ್‌ಗಳು ನಿಖರವಾಗಿ ಭವಿಷ್ಯ ನುಡಿದಿದ್ದವು.

ಅಂದಿನ ಸಮೀಕ್ಷೆಗಳ ಅಂದಾಜು: ಎಲ್‌ಡಿಎಫ್‌ಗೆ 104-120 ಸ್ಥಾನಗಳು ಹಾಗೂ ಯುಡಿಎಫ್‌ಗೆ 20-36 ಸ್ಥಾನಗಳನ್ನು ಅಂದಾಜಿಸಿತ್ತು. ಕೆಲವು ಎಲ್‌ಡಿಎಫ್‌ಗೆ 71-77 ಮತ್ತು ಯುಡಿಎಫ್‌ಗೆ 62-68 ಸ್ಥಾನಗಳ ಮುನ್ಸೂಚನೆ ನೀಡಿತ್ತು. ಆದರೆ ಅಂತಿಮವಾಗಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ 99 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತದೊಂದಿಗೆ ಇತಿಹಾಸ ನಿರ್ಮಿಸಿತ್ತು. ಈ ಬಾರಿ ಎಲ್‌ಡಿಎಫ್ 'ಹ್ಯಾಟ್ರಿಕ್' ಸಾಧನೆ ಮಾಡುತ್ತದೆಯೇ ಅಥವಾ ಯುಡಿಎಫ್ ಅಧಿಕಾರಕ್ಕೆ ಮರಳುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಮೇ 4ರಂದು ಸಿಗಲಿದೆ

2021 Exit Poll vs Results

ಅಸ್ಸಾಂ ಎಕ್ಸಿಟ್ ಪೋಲ್ ಅಂದಾಜು ಹೇಗಿತ್ತು?

2021ರ ಚುನಾವಣೆಯ ಸಮಯದಲ್ಲಿ ಬಹುತೇಕ ಸಮೀಕ್ಷಾ ಸಂಸ್ಥೆಗಳು ಬಿಜೆಪಿ ನೇತೃತ್ವದ ಮೈತ್ರಿಕೂಟವೇ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದವು. ಅಂದು ಬಿಜೆಪಿ ಮೈತ್ರಿಕೂಟಕ್ಕೆ 58ರಿಂದ 85 ಸ್ಥಾನಗಳು ಹಾಗೂ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ 40ರಿಂದ 66 ಸ್ಥಾನಗಳು ಬರಬಹುದು ಎಂದು ಅಂದಾಜಿಸಲಾಗಿತ್ತು. ನಿರ್ದಿಷ್ಟವಾಗಿ ಹೇಳುವುದಾದರೆ, Axis My India ಸಮೀಕ್ಷೆಯು ಎನ್‌ಡಿಎಗೆ 75-85 ಸ್ಥಾನಗಳನ್ನು ನೀಡಿದ್ದರೆ, C-Voter ಸಮೀಕ್ಷೆಯು 58-71 ಸ್ಥಾನಗಳೊಂದಿಗೆ ತೀವ್ರ ಪೈಪೋಟಿಯ ಮುನ್ಸೂಚನೆ ನೀಡಿತ್ತು. ಸಮೀಕ್ಷೆಗಳ ಅಂದಾಜಿನಂತೆಯೇ 2021ರ ಫಲಿತಾಂಶದಲ್ಲಿ ಎನ್‌ಡಿಎ ಮೈತ್ರಿಕೂಟವು 75 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರವನ್ನು ಉಳಿಸಿಕೊಂಡಿತು. ಬಿಜೆಪಿ ಸ್ವತಃ 60 ಸ್ಥಾನಗಳನ್ನು ಗೆದ್ದು ಪ್ರಬಲವಾಗಿ ಹೊರಹೊಮ್ಮಿತ್ತು. ವಿರೋಧ ಪಕ್ಷಗಳ ಮೈತ್ರಿಕೂಟವು ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಲು ವಿಫಲವಾಗಿತ್ತು.

ಪುದುಚೇರಿಯಲ್ಲಿ ನಿಜವಾಗಿತ್ತು ಎಕ್ಸಿಟ್‌ ಪೋಲ್‌ ಭವಿಷ್ಯ

ಕಳೆದ 2021ರ ಚುನಾವಣೆಯ ಇತಿಹಾಸವನ್ನು ಗಮನಿಸಿದರೆ, ಅಂದು ಬಹುತೇಕ ಎಕ್ಸಿಟ್ ಪೋಲ್‌ಗಳು ಅಂದಿನ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಎಂದು ನಿಖರವಾಗಿ ಭವಿಷ್ಯ ನುಡಿದಿದ್ದವು. ಅಂದಿನ ಸಮೀಕ್ಷೆಗಳ ಪ್ರಕಾರ, ಎನ್‌ಆರ್‌ ಕಾಂಗ್ರೆಸ್ ಮತ್ತು ಬಿಜೆಪಿ ಒಳಗೊಂಡ ಎನ್‌ಡಿಎ ಮೈತ್ರಿಕೂಟವು 30 ಸ್ಥಾನಗಳ ಪೈಕಿ 16 ರಿಂದ 24 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು. ನಿರ್ದಿಷ್ಟವಾಗಿ Axis My India ಸಮೀಕ್ಷೆಯು ಎನ್‌ಡಿಎಗೆ 20-24 ಸ್ಥಾನಗಳನ್ನು ನೀಡಿದ್ದರೆ, C-Voter ಸಮೀಕ್ಷೆಯು 19-23 ಸ್ಥಾನಗಳ ಮುನ್ಸೂಚನೆ ನೀಡಿತ್ತು. ಅಂತಿಮವಾಗಿ ಎನ್‌ಡಿಎ ಮೈತ್ರಿಕೂಟವು 16 ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+