Himachal Pradesh: 19 ಮಂದಿಯನ್ನು ಬಲಿ ಪಡೆದ ಪ್ರವಾಹ, ಭೂಕುಸಿತ, ಮೇಘಸ್ಫೋಟ
ಶಿಮ್ಲಾ, ಜೂನ್ 29: ಕಳೆದ ಐದು ದಿನಗಳಲ್ಲಿ ಭೂಕುಸಿತ, ಹಠಾತ್ ಪ್ರವಾಹ ಮತ್ತು ಮೇಘಸ್ಫೋಟದಿಂದಾಗಿ ಇದುವರೆಗೆ 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹಿಮಾಚಲ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ, ಭಾರಿ ಮಳೆಯ ಪರಿಣಾಮ ಇದುವರೆಗೂ 219.29 ಕೋಟಿ ರೂಪಾಯಿ ನಷ್ಟವನ್ನುಅನುಭವಿಸಿದೆ.
ಹಿಮಾಚಲ ಪ್ರದೇಶದಲ್ಲಿ ಕಳೆದ 5 ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, 4 ದಿನಗಳ ಅಂತರದಲ್ಲಿ 19 ಜನ ಸಾವನ್ನಪ್ಪಿದ್ದು, ಮೂರು ಮಂದು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಇನ್ನು ಮಳೆಯಿಂದ ಆದ ಅನಾಹುತಗಳಲ್ಲಿ 34 ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ಹಲವು ಕಡೆಗಳಲ್ಲಿ ಒಂಬತ್ತು ಭೂಕುಸಿತದ ಘಟನೆಗಳು, ಆರು ಹಠಾತ್ ಪ್ರವಾಹದ ಘಟನೆಗಳು ಮತ್ತು ಒಂದು ಮೇಘಸ್ಫೋಟದ ಘಟನೆಯಲ್ಲಿ 352 ಜಾನುವಾರುಗಳು ಸಾವನ್ನಪ್ಪಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ವರದಿಯಲ್ಲಿ ಮಾಹಿತಿ ನೀಡಿದೆ.

ಭಾರಿ ಮಳೆಯ ಕಾರಣದಿಂದ ಇದುವರೆಗೆ 5 ಮನೆಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು, 36 ಮನೆಗಳು ಭಾಗಶಃ ಹಾನಿಗೊಳಲಾಗಿವೆ. ಕಳೆದ ಐದು ದಿನಗಳಲ್ಲಿ ಪ್ರವಾಹಕ್ಕೆ ಸಿಲುಕಿ ಒಂದು ಅಂಗಡಿ ಮತ್ತು 20 ಗೋಶಾಲೆಗಳು ಕೊಚ್ಚಿಹೋಗಿವೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.
ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತ
ಗುಡ್ಡಗಾಡು ಪ್ರದೇಶ ಶಿಮ್ಲಾದಲ್ಲಿ ಭಾರಿ ಮಳೆ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ನಗರದ ರಸ್ತೆಗಳು ಜಲಾವೃತವಾಗಿದ್ದು, ಭೂ ಕುಸಿತಗಳು ಸಂಭವಿಸುತ್ತಿವೆ. ಭೂಕುಸಿತದಿಂದ ಜನ ಭಯಭೀತರಾಗಿದ್ದಾರೆ. ಮಳೆ ನೀರು ಹರಿಯಲು ಸಮರ್ಪಕ ವ್ಯವಸ್ಥೆ ಮಾಡದೇ ಇರುವುದೇ ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿಯೊಬ್ಬರು ಮಾತನಾಡಿ, "ಕಳೆದ ಐದು ದಿನಗಳಿಂದ ಭಾರಿ ಮಳೆಯಾಗುತ್ತಿದೆ, ಇದರಿಂದ ನಗರದಲ್ಲಿ ಭಾರಿ ಸಮಸ್ಯೆ ಉಂಟಾಗಿದೆ. ಶಿಮ್ಲಾ ನಗರದಲ್ಲಿ ಹಲವು ಕಡೆಗಳಲ್ಲಿ ಜಲಾವೃತವಾಗಿರುವುದನ್ನು ನೋಡಬಹುದುರ. ನಗರದ ಹೃದಯ ಭಾಗದಲ್ಲೇ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳಿಲ್ಲ, ಇರುವ ಚರಂಡಿಗಳು ಕೂಡ ಮುಚ್ಚಿ ಹೋಗಿವೆ." ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿನ ಪರಿಸ್ಥಿತಿ ಹದಗೆಡಲು ಅಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. "ಇಲ್ಲಿ ಹೊಸದಾಗಿ ಆಯ್ಕೆಯಾಗಿರುವ ಪೌರಕಾರ್ಮಿಕ ಮೇಯರ್ ಮತ್ತು ಉಪಮೇಯರ್ ಇದಕ್ಕೆ ಹೊಣೆಯಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಇನ್ನಷ್ಟು ಜಾಸ್ತಿಯಾಗುವ ಮೊದಲು ಸಮಸ್ಯೆಯನ್ನು ಸರಿಪಡಿಸಲು ಸೂಕ್ತ ವ್ಯವಸ್ಥೆ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
ಇನ್ನೂ ನಾಲ್ಕೈದು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಶಿಮ್ಲಾ ನಗರದಲ್ಲಿ ಅಧಿಕ ಮಳೆಯಾಗುವ ಸೂಚನೆ ಇದ್ದು, ಭಾರತೀಯ ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ನೀಡಿದೆ.












Click it and Unblock the Notifications