ನಿಧಿ ಆಮಿಷವೊಡ್ಡಿ ಅಪ್ರಾಪ್ತೆಯ ಅತ್ಯಾಚಾರ, ಕೊಲೆ: ಆರೋಪಿ ಬಂಧನ
ಕನೌಜ್(ಉತ್ತರ ಪ್ರದೇಶ), ಜೂನ್ 10: 14 ವರ್ಷದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಮಂತ್ರವಾದಿಯೊಬ್ಬನನ್ನು ಉತ್ತರ ಪ್ರದೇಶದ ಕನೌಜ್ ಪೊಲೀಸರು ಇಂದು (ಜೂನ್ 10) ಬಂಧಿಸಿದ್ದಾರೆ.
ಇದೊಂದು ಮಾನವ ಬಲಿಯ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದಿದ್ದು ಕನೌಜ್ ಜಿಲ್ಲೆಯ ಭಡೌಸಿ ಎಂಬ ಹಳ್ಳಿಯಲ್ಲಿ. ಮಹಾವೀರ ಪ್ರಸಾದ್ ಎಂಬ ವ್ಯಕ್ತಿಗೆ ತಮ್ಮ ಮನೆಯ ಹೊಲದಲ್ಲಿ ನಿಧಿ ಇದೆ ಎಂಬ ಅನುಮಾನ ಬಂತು. ಅದಕ್ಕೆಂದೇ ಆತ ಮಂತ್ರವಾದಿಯೊಬ್ಬನ್ನು ಸಂಪರ್ಕಿಸಿದ. ಮಂತ್ರವಾದಿ ಕೃಷ್ಣ ಕುಮಾರ್ ಶರ್ಮಾ, ನಿಮ್ಮ ಹೊಲದಲ್ಲಿ ನಿಧಿ ಪತ್ತೆ ಮಾಡಬೇಕೆಂದರೆ ನಿಮ್ಮ ಮಗಳನ್ನು ಬಲಿ ಕೊಡಬೇಕು ಎನ್ನುತ್ತಾನೆ.

ಇದರಿಂದ ಕುಪಿತರಾದ ಬಾಲಕಿಯ ತಾಯಿ-ತಂದೆ ಇವೆಲ್ಲ ಸಾಧ್ಯವಿಲ್ಲ ಎಂದು ಹೇಳಿ ಹೊರಡುತ್ತಾರೆ.
ನಂತರ ಮತ್ತೆ ಇವರನ್ನು ಸಂಪರ್ಕಿಸಿದ ಕೃಷ್ಣ ಕುಮಾರ್ ಶರ್ಮಾ, ಬಲಿ ನೀಡದೆ ನಿಮ್ಮ ಹೊಲದಲ್ಲಿ ನಿಧಿ ಪತ್ತೆ ಮಾಡುತ್ತೇನೆಂದು ಪೂಜೆ ಮಾಡಿಸುತ್ತಾನೆ.
ಪೂಜೆಯ ನಂತರ ನಿಮ್ಮ ಮಗಳನ್ನು ಹೊಲಕ್ಕೆ ಕಳಿಸಿ, ಅವರೊಬ್ಬರೇ ಬಂದರೆ ನಿಧಿ ಹುಡುಕಬಹುದು ಎನ್ನುತ್ತಾನೆ. ಆತನ ಮಾತನ್ನು ನಂಬಿದ ತಂದೆ-ತಾಯಿ ನಿಧಿಯಾಸೆಗೆ ಮಗಳನ್ನು ಮಂತ್ರವಾದಿಯೊಂದಿಗೆ ಕಳಿಸಿದ್ದಾರೆ.
ಆಕೆಯನ್ನು ಹೊಲಕ್ಕೆ ಕರೆದೊಯ್ದ ಮಂತ್ರವಾದಿ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾನೆ. ಆಕೆಯ ಮೃತದೇಹವನ್ನು ಅವಿತಿಟ್ಟಿದ್ದ ಮಂತ್ರವಾದಿ, ಆಕೆ ನಿಧಿ ಹುಡುಕಿಕೊಂಡು ಬರುತ್ತಾಳೆ ಎಂದು ಪಾಲಕರ ಬಳಿ ಸುಳ್ಳು ಹೇಳಿದ್ದಾನೆ. ಮಗಳು ಬಾರದಿದ್ದಾಗ ಅನುಮಾನ ಬಂದ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಜೂನ್ 8 ರಂದು ಬಾಲಕಿಯ ಮೃತ ದೇಹ ಪತ್ತೆಯಾಗಿದ್ದು, ಮಂತ್ರವಾದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕೊಲೆಯಲ್ಲಿ ಬಾಲಕಿಯ ತಂದೆಯ ಕೈವಾಡವೂ ಇದೆಯೇ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications