ಕೊರೊನಾ ವೈರಸ್: ದೇಶದಲ್ಲಿ 23 ದಿನಗಳಲ್ಲಿಯೇ ಅತ್ಯಧಿಕ ಪ್ರಕರಣ ದಾಖಲು
ನವದೆಹಲಿ, ಫೆಬ್ರವರಿ 20: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 13,993 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ 23 ದಿನಗಳಲ್ಲಿಯೇ, ಅಂದರೆ ಜನವರಿ 29ರ ನಂತರ ದಾಖಲಾದ ಅತಿ ಹೆಚ್ಚಿನ ಪ್ರಕರಣ ಇದಾಗಿದೆ. ಕಳೆದ ಮೂರು ದಿನಗಳಿಂದ ದೇಶದಲ್ಲಿ ದಾಖಲಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ಸಕ್ರಿಯ ಪ್ರಕರಣಗಳಲ್ಲಿ ಮತ್ತೆ ಏರಿಕೆಯಾಗುತ್ತಿದೆ.
ಕೊರೊನಾ ವೈರಸ್ ನಿಯಂತ್ರಣದಲ್ಲಿ ಯಶಸ್ಸಿನ ಹಾದಿಯಲ್ಲಿದ್ದ ಭಾರತಕ್ಕೆ ಇದು ತೀವ್ರ ಹಿನ್ನಡೆಯಾಗಿದ್ದು, ನಿರ್ಬಂಧಗಳ ಸಡಿಲಿಕೆ ನಡುವೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಮೈಮರೆತಿರುವ ಜನರಿಗೆ ಎಚ್ಚರಿಕೆ ಗಂಟೆಯಾಗಿದೆ.
ದೇಶದಲ್ಲಿ ಶುಕ್ರವಾರದಂದು 10,307 ಮಂದಿ ಸೋಂಕಿತರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 101 ಸೋಂಕಿತರು ಮೃತಪಟ್ಟಿದ್ದಾರೆ. ಇದರಿಂದ ಸಕ್ರಿಯ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿದ್ದು, 1,43,127ಕ್ಕೆ ತಲುಪಿದೆ. ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1,09,77,387ಕ್ಕೆ ಏರಿಕೆಯಾಗಿದೆ. ಇದುವರೆಗೂ ಒಟ್ಟು 1,06,78,048 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಸಂಖ್ಯೆ 1,56,212 ಹೆಚ್ಚಳವಾಗಿದೆ.

ದೇಶದಲ್ಲಿ ಇದುವರೆಗೂ 1,07,15,204 ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ 97.27ರಷ್ಟಿದ್ದರೆ, ಮರಣ ಪ್ರಮಾಣ ಶೇ 1.42ರಷ್ಟಿದೆ.












Click it and Unblock the Notifications