ಪ್ರಿನ್ಸಿಪಾಲ್ ಮೇಲೆ ಗುಂಡು ಹಾರಿಸಿ ಅವರ ಸ್ಕೂಟರ್‌ನಲ್ಲೇ ವಿದ್ಯಾರ್ಥಿ ಎಸ್ಕೇಪ್
12ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಗುರುವಿನ ಸ್ಥಾನದಲ್ಲಿದ್ದ ಪ್ರಿನ್ಸಿಪಾಲ್ ಮೇಲೆ ಗುಂಡು ಹಾರಿಸಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದಿದೆ. ವಿದ್ಯಾರ್ಥಿ ಹಾರಿಸಿದ ಗುಂಡಿನಿಂದ ಪ್ರಿನ್ಸಿಪಾಲ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮಧ್ಯಪ್ರದೇಶದ ಛತ್ತರ್‌ಪುರದ ಧಮೋರಾ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಸುರೇಂದ್ರ ಕುಮಾರ್ ಸಕ್ಸೇನಾ (55) ಅವರು ಬಾತ್‌ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 12ನೇ ತರಗತಿಯ ವಿದ್ಯಾರ್ಥಿಯು ಪ್ರಿನ್ಸಿಪಾಲ್ ಅವರನ್ನು ಹಿಂಬಾಲಿಸಿ ಬಳಿಕ ಅವರ ತಲೆಗೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಬಂದೂಕಿನ ಸದ್ದಿಗೆ ಶಾಲೆಯಲ್ಲಿದ್ದವರೆಲ್ಲ ಗಾಬರಿಗೊಂಡರು. ಬಳಿಕ ಎಲ್ಲರೂ ಓಡೋಡಿ ಬಂದು ನೋಡಿದಾಗ ಪ್ರಾಂಶುಪಾಲರು ಶವವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಹೇಳಲಾಗಿದೆ.

ಇನ್ನು ಆರೋಪಿ ವಿದ್ಯಾರ್ಥಿಯು ಗುಂಡಿನ ದಾಳಿ ಬಳಿಕ ಮೃತ ಪ್ರಿನ್ಸಿಪಾಲ್ ಸಕ್ಸೇನಾ ಅವರ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಆಗಮ್ ಜೈನ್ ಅವರು ಹೇಳುವಂತೆ ಆರೋಪಿ ಜೊತೆಗೆ ಮತ್ತೊಬ್ಬ ವಿದ್ಯಾರ್ಥಿ ಕೂಡ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಇಬ್ಬರೂ ವಿದ್ಯಾರ್ಥಿಗಳು ಶಾಲೆಯಲ್ಲಿ ಅಶಿಸ್ತಿನ ಇತಿಹಾಸವನ್ನು ಹೊಂದಿದ್ದರು. ಇವರು ಧಿಲಾಪುರ ಗ್ರಾಮದ ನಿವಾಸಿಗಳು ಎಂದು ಗೊತ್ತಾಗಿದೆ. ಇನ್ನು ಘಟನೆ ಬಳಿಕ ವಿದ್ಯಾರ್ಥಿಗಳು ಪರಾರಿಯಾಗುತ್ತಿರುವುದು ಅಲ್ಲಿನ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಈ ಹತ್ಯೆ ಪೂರ್ವಯೋಜಿತವಾಗಿ ನಡೆದಿದೆ ಎಂದು ಪ್ರಿನ್ಸಿಪಾಲ್ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ಅಲ್ಲದೆ ಈ ಶಾಲೆಯಲ್ಲಿ ಕೆಲವು ವ್ಯಕ್ತಿಗಳು ಅನಗತ್ಯವಾಗಿ ಸಕ್ಸೇನಾ ಅವರ ಮೇಲೆ ಒತ್ತಡ ಹೇರುತ್ತಿದ್ದರು. ಕೆಲ ತಪ್ಪು ಕೃತ್ಯಗಳನ್ನು ನಡೆಸುವಂತೆ ಕಿರುಕುಳ ಕೂಡ ನೀಡುತ್ತಿದ್ದರು. ಈ ಹತ್ಯೆಯು ಇದರ ಪಿತೂರಿಯ ಭಾಗವಾಗಿದೆ ಎಂದು ಅವರ ಸಹೋದರ ರಾಜೇಂದ್ರ ಸಕ್ಸೇನಾ ಅನುಮಾನ ವ್ಯಕ್ತಪಡಿಸಿದ್ದಾರೆ.
ಆರೋಪಿ ವಿದ್ಯಾರ್ಥಿ ಹಾಗೂ ಆತನ ಸಹಚರರು ಅದೇ ಶಾಲೆಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಜಿಲ್ಲಾ ಶಿಕ್ಷಣಾಧಿಕಾರಿ ಆರ್‌ಪಿ ಪ್ರಜಾಪತಿ ಅವರು ಸಕ್ಸೇನಾ ಅವರು ಐದು ವರ್ಷಗಳಿಂದ ಶಾಲೆಯ ಪ್ರಾಂಶುಪಾಲರಾಗಿದ್ದರು ಎಂದು ಹೇಳಿದ್ದಾರೆ. ಇನ್ನು ಪೊಲೀಸರು ಈ ಪ್ರಕರಣದ ತನಿಖೆಗೆ ಮುಂದಾಗಿದ್ದು, ಸಾಕ್ಷ್ಯವನ್ನು ಸಂಗ್ರಹಿಸಲು ಅಪರಾಧದ ಸ್ಥಳಕ್ಕೆ ಫೋರೆನ್ಸಿಕ್ ತಂಡಗಳನ್ನು ನಿಯೋಜಿಸಿದ್ದಾರೆ.
ಆದರೆ ಈ ಘಟನೆಗೆ ನಿಖರ ಕಾರಣ ಏನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಅಲ್ಲದೆ, ಪ್ರಿನ್ಸಿಪಾಲ್ ಮೇಲೆ ಗುಂಡು ಹಾರಿಸುವಷ್ಟು ದ್ವೇಷ ವಿದ್ಯಾರ್ಥಿಗೆ ಏನಿತ್ತು? ಎಂಬುದೂ ಗೊತ್ತಾಗಿಲ್ಲ. ಈ ಬಗ್ಗೆ ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ಶುರು ಮಾಡಿದ್ದಾರೆ. ಈ ಘಟನೆಯಿಂದ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದಾರೆ.












Click it and Unblock the Notifications