ಐನ್‍ಸ್ಟೈನ್‌ಗಿಂತಲೂ ಮಹಾ ಬುದ್ಧಿವಂತ ಈ 12 ವರ್ಷದ ಬಾಲಕ! 180 ಐಕ್ಯೂ ಹೊಂದಿರುವ ರಿಷಿ ಶಿವ ಪ್ರಸನ್ನ ಸಾಧನೆಗಳೇನು ಗೊತ್ತಾ?
ಪ್ರಪಂಚದ ಅತ್ಯಂತ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಆಲ್ಬರ್ಟ್ ಐನ್‍ಸ್ಟೈನ್ ಅವರ ಐಕ್ಯೂ ಅಥವಾ ಬುದ್ಧಿಮತ್ತೆಯ ಮಟ್ಟ 160 ಎಂದು ಅಂದಾಜಿಸಲಾಗಿದೆ. ಆದರೆ, ಕೇವಲ 12 ವರ್ಷದ ಭಾರತೀಯ ಬಾಲಕನೊಬ್ಬ 180 ಐಕ್ಯೂ ಹೊಂದುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ. ಆತನ ಹೆಸರೇ ರಿಷಿ ಶಿವ ಪ್ರಸನ್ನ. ತನ್ನ ಅಸಾಧಾರಣ ಬುದ್ಧಿಮತ್ತೆಯಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಈತ, ಇತ್ತೀಚೆಗೆ ನಡೆದ ಇಂಡಿಯಾ ಟುಡೇ ಕಾನ್ಕ್ಲೇವ್ ಮುಂಬೈ 2026 ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ವಿಚಾರಗಳನ್ನ ಹಂಚಿಕೊಂಡಿದ್ದಾನೆ.
'ಐನ್‍ಸ್ಟೈನ್ 2.0? - ಮೀಟ್ ದಿ ಯಂಗ್ ಜೀನಿಯಸ್ ಹೂ ಥಿಂಕ್ಸ್ ಬಿಯಾಂಡ್ ಹಿಸ್ ಇಯರ್ಸ್' ಎಂಬ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ರಿಷಿ, ಕೃತಕ ಬುದ್ಧಿಮತ್ತೆ, ವೈಜ್ಞಾನಿಕ ಕುತೂಹಲ ಹಾಗೂ ತನ್ನ ಭವಿಷ್ಯದ ಯೋಜನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾನೆ.

ಅಧಿಕೃತ ಬುದ್ಧಿಮತ್ತೆ ಪರೀಕ್ಷೆಯಲ್ಲಿ ಅಗ್ರ 2% ಅಂಕ ಗಳಿಸುವ ಜನರಿಗೆ ಮಾತ್ರ ಪ್ರವೇಶ ನೀಡುವ ಮೆನ್ಸಾ ಇಂಟರ್ನ್ಯಾಷನಲ್‌ನ ಅತಿ ಕಿರಿಯ ಸದಸ್ಯರಲ್ಲಿ ರಿಷಿ ಕೂಡ ಒಬ್ಬನಾಗಿದ್ದಾನೆ. ಈತನ ಸಾಧನೆ ಕೇವಲ ಐಕ್ಯೂಗೆ ಸೀಮಿತವಾಗಿಲ್ಲ ನೋಡಿ.
ಗೂಗಲ್ ಡೆವಲಪರ್ ಹಾಗೂ 8 ಪುಸ್ತಕಗಳ ಲೇಖಕ
12 ವರ್ಷದ ಈ ಬಾಲಕ ಈಗಾಗಲೇ ಗೂಗಲ್-ಪ್ರಮಾಣೀಕೃತ ಆಂಡ್ರಾಯ್ಡ್ ಡೆವಲಪರ್ ಆಗಿ ಗುರುತಿಸಿಕೊಂಡಿದ್ದಾನೆ. ಕೇವಲ ಕೋಡಿಂಗ್ ಮಾತ್ರವಲ್ಲದೆ ಬರವಣಿಗೆಯಲ್ಲೂ ಎತ್ತಿದ ಕೈ. ರಿಷಿ ಈಗಾಗಲೇ 8 ಪುಸ್ತಕಗಳನ್ನ ಬರೆದಿದ್ದಾನೆ.
ಒಂದನೇ ತರಗತಿಯಲ್ಲಿದ್ದಾಗ ಶಾಲೆಯಲ್ಲಿ ನಡೆದ ಬರವಣಿಗೆಯ ಸ್ಪರ್ಧೆಯಿಂದ ಪ್ರೇರಣೆಗೊಂಡು ತನ್ನ ಮೊದಲ ಪುಸ್ತಕ 'ಲರ್ನ್ ವಿಟಮಿನ್ಸ್ ವಿತ್ ಹ್ಯಾರಿ ಪಾಟರ್ʼ ಅನ್ನ ಬರೆದಿದ್ದನು. ಪ್ರಸ್ತುತ ಆತನ 'ಟೈಟಾನಿಯಂ ಟೈಮ್ ಟ್ರಾವೆಲರ್ಸ್' ಎಂಬ ಸರಣಿ ಪುಸ್ತಕಗಳು ಟೈಮ್ ಟ್ರಾವೆಲ್ ಮತ್ತು ವಿಭಿನ್ನ ಕಾಲಘಟ್ಟಗಳ ಕಥೆಗಳನ್ನ ಒಳಗೊಂಡಿವೆ.
ಎಐ ಬಗ್ಗೆ ಬಾಲಕನ ಅನಿಸಿಕೆ
ಇಂದಿನ ತಂತ್ರಜ್ಞಾನ ಯುಗದಲ್ಲಿ ಎಐ ಅಥವಾ ಕೃತಕ ಬುದ್ಧಿಮತ್ತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಕಾನ್ಕ್ಲೇವ್‌ನಲ್ಲಿ ಮಾತನಾಡಿದ ರಿಷಿ, "ಎಐ ತಂತ್ರಜ್ಞಾನವು ಭವಿಷ್ಯದಲ್ಲಿ ಕೆಲವು ಉದ್ಯೋಗಗಳನ್ನ ಕಸಿದುಕೊಳ್ಳಬಹುದು. ಆದರೆ, ಅದೇ ಸಮಯದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಇದು ಹೆಚ್ಚು ಸಹಾಯಕವಾಗಲಿದೆ.
ವೈಯಕ್ತಿಕಗೊಳಿಸಿದ ಕಲಿಕೆ ಮತ್ತು ರೋಗಗಳ ನಿಖರವಾದ ರೋಗನಿರ್ಣಯಕ್ಕೆ ಎಐ ಬಹುದೊಡ್ಡ ಕೊಡುಗೆ ನೀಡಲಿದೆ" ಎಂದು ಅಭಿಪ್ರಾಯಪಟ್ಟಿದ್ದಾನೆ.
ಭವಿಷ್ಯದ ಕನಸು: ಹೊಗೆಯನ್ನು ಶುದ್ಧ ಗಾಳಿಯಾಗಿಸುವ ಸಾಧನ ಕಂಡು ಹಿಡಿಯುವುದು
ತನ್ನ ಭವಿಷ್ಯದ ಕನಸು ಮತ್ತು ಆವಿಷ್ಕಾರಗಳ ಬಗ್ಗೆ ವಿವರಿಸಿದ ರಿಷಿ, ಪ್ರಕೃತಿಯನ್ನ ರಕ್ಷಿಸುವ ಅದ್ಭುತ ಕನಸೊಂದನ್ನ ಬಿಚ್ಚಿಟ್ಟಿದ್ದಾನೆ. ಕಾರುಗಳ ಎಕ್ಸಾಸ್ಟ್ ಪೈಪ್‌ನಿಂದ ಹೊರಬರುವ ಮಾಲಿನ್ಯಯುತ ಹೊಗೆಯನ್ನ ಶುದ್ಧ ಗಾಳಿಯನ್ನಾಗಿ ಪರಿವರ್ತಿಸುವ ಸಾಧನವೊಂದನ್ನ ಕಂಡುಹಿಡಿಯುವುದು ಈತನ ಪ್ರಮುಖ ಗುರಿಯಾಗಿದೆ.
ತಂತ್ರಜ್ಞಾನದ ಬಳಕೆಯು ಕೇವಲ ಮಾನವನ ಅನುಕೂಲಕ್ಕೆ ಮಾತ್ರವಲ್ಲ, ಪರಿಸರದ ಉಳಿವಿಗೂ ಬಳಕೆಯಾಗಬೇಕು ಎಂಬುದು ಈ ಬಾಲಕನ ಆಶಯವಾಗಿದೆ.
ಪ್ರತಿಯೊಬ್ಬರಲ್ಲೂ ವಿಭಿನ್ನ ಬುದ್ಧಿಮತ್ತೆ ಇರುತ್ತದೆ
ತನ್ನನ್ನು ತಾನು ಜೀನಿಯಸ್ ಎಂದು ಕರೆಸಿಕೊಳ್ಳುವ ಬದಲು, ಬುದ್ಧಿಮತ್ತೆ ಎನ್ನುವುದು ವಿಭಿನ್ನ ರೂಪಗಳಲ್ಲಿರುತ್ತದೆ ಎಂದು ರಿಷಿ ಹೇಳುತ್ತಾನೆ. "ಚೆಸ್ ಆಡುವುದು, ನೃತ್ಯ ಮಾಡುವುದು, ಈಜು, ಹಾಗೂ ಇತರರ ಭಾವನೆಗಳನ್ನ ಅರ್ಥಮಾಡಿಕೊಳ್ಳುವುದೂ ಕೂಡ ಒಂದು ರೀತಿಯ ಬುದ್ಧಿವಂತಿಕೆಯೇ ಆಗಿದೆ.
ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಜೀನಿಯಸ್ ಆಗಿರುತ್ತಾರೆ. ಹೀಗಾಗಿ, ಮಕ್ಕಳು ತಮ್ಮ ಆಸಕ್ತಿಗಳನ್ನ ಗುರುತಿಸಿ, ಅದರ ಬೆನ್ನೇರಿ ಹೋಗಲು ಅವಕಾಶ ನೀಡಬೇಕು" ಎಂದು 12ರ ಈ ಬಾಲಕ ಹೇಳಿರುವ ಮಾತುಗಳು ಎಲ್ಲರಿಗೂ ಸ್ಫೂರ್ತಿ.


Click it and Unblock the Notifications
