ದೇಶದಲ್ಲಿ 24 ಗಂಟೆಗಳಲ್ಲಿ 11,833 ಕೊರೊನಾ ಸೋಂಕಿತರು ಬಿಡುಗಡೆ
ನವದೆಹಲಿ, ಫೆಬ್ರವರಿ 17: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 11,610 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಸತತ ಮೂರು ದಿನಗಳಿಂದ ಕಡಿಮೆಯಾಗಿದ್ದ ಕೋವಿಡ್ ಸಂಬಂಧಿ ಮರಣಗಳ ಸಂಖ್ಯೆ ಮತ್ತೆ 100ಕ್ಕೆ ಮುಟ್ಟಿದೆ.
ಮಂಗಳವಾರ ಆಸ್ಪತ್ರೆಗಳಿಂದ 11,833 ಮಂದಿ ಕೊರೊನಾ ಸೋಂಕಿತರು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ವರದಿಯಲ್ಲಿ ತಿಳಿಸಿದೆ. ಇದರಿಂದ ಸಕ್ರಿಯ ಪ್ರಕರಣಗಳು 1,36,549ಕ್ಕೆ ಇಳಿಕೆಯಾಗಿವೆ. ದೇಶದಲ್ಲಿ ಇದುವರೆಗೂ ಒಟ್ಟು 1,09,37,320 ಪ್ರಕರಣಗಳು ದಾಖಲಾಗಿವೆ. ಅವರಲ್ಲಿ ಒಟ್ಟು 1,06,44,858 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನು 1,55,913 ಮಂದಿ ಜೀವ ಕಳೆದುಕೊಂಡಿದ್ದಾರೆ.
ದೇಶದಲ್ಲಿ ಲಸಿಕೆ ಕಾರ್ಯಕ್ರಮ ಶುರುವಾಗಿ ಒಂದು ತಿಂಗಳಾಗಿದ್ದು, ಇದುವರೆಗೂ 89,99,230 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ದೇಶದಲ್ಲಿ ಬ್ರಿಟನ್ ರೂಪಾಂತರಿ ವೈರಸ್‌ನ 187 ಪ್ರಕರಣಗಳು ವರದಿಯಾಗಿದ್ದರೆ, ಇದೇ ಮೊದಲ ಬಾರಿ ನಾಲ್ವರಲ್ಲಿ ದಕ್ಷಿಣ ಆಫ್ರಿಕಾದ ರೂಪಾಂತರಿ ವೈರಸ್ ಹಾಗೂ ಒಬ್ಬರಲ್ಲಿ ಬ್ರೆಜಿಲ್ ರೂಪಾಂತರ ವೈರಸ್ ಪತ್ತೆಯಾಗಿದೆ.

ದೇಶದಲ್ಲಿ ಜುಲೈ ವೇಳೆಗೆ 300 ಮಿಲಿಯನ್ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಆದರೆ ಲಸಿಕೆ ಕಾರ್ಯಕ್ರಮ ತೀರಾ ನಿಧಾನಗತಿಯಲ್ಲಿ ಸಾಗಿದ್ದು, ಈ ಗುರಿ ತಲುಪುವುದು ಅನುಮಾನವಾಗಿದೆ. ದೇಶದಲ್ಲಿ ಈ ಒಂದು ತಿಂಗಳ ಅವಧಿಯಲ್ಲಿ ದಿನಕ್ಕೆ ಕೇವಲ 3.5 ಲಕ್ಷ ಸರಾಸರಿಯಲ್ಲಿ ಲಸಿಕೆ ನೀಡಲಾಗುತ್ತಿದೆ. ಇದೇ ಪ್ರಮಾಣದಲ್ಲಿ ನಡೆದರೆ ಎರಡು ಡೋಸ್‌ಗಳ ಲೆಕ್ಕದಲ್ಲಿ ಆಗಸ್ಟ್ ವೇಳೆಗೆ ಕೇವಲ 32 ಮಿಲಿಯನ್ ಫಲಾನುಭವಿಗಳಿಗೆ ಲಸಿಕೆ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.
ಜುಲೈ ವೇಳೆಗೆ 1ಕೋಟಿ ಆರೋಗ್ಯ ಕಾರ್ಯಕರ್ತರು, ಎರಡು ಕೋಟಿ ಮುಂಚೂಣಿ ಕಾರ್ಯಕರ್ತರು ಮತ್ತು 50 ವರ್ಷ ಮೇಲ್ಪಟ್ಟ 27 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿರುವುದಾಗಿ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದರು.












Click it and Unblock the Notifications