Clean Versova Beach: 85 ವಾರಗಳ ಶ್ರಮದ ಫಲ! ಬೀಚ್ ಕ್ಲೀನ್ ಆಗಿದ್ದೇ ತಡ ಸಾಗರ ಸೇರಿದ ರಾಶಿ ರಾಶಿ ಆಮೆಗಳು
Plastic Recycling: ಯಾಕೋ ಮನಸ್ಸಿಗೆ ಬೇಜಾರಾಗಿದೆ, ಮನಸ್ಸೇ ಸರಿಯಿಲ್ಲ ಅಂದಾಗ ಒಂದು ಹತ್ತು ನಿಮಿಷ ಕಡಲ ತೀರದಲ್ಲಿ ಕೂತರೆ ಸಾಕು. ಮನಸ್ಸು ತನ್ನಷ್ಟಕ್ಕೇ ಶಾಂತವಾಗಿ ಬಿಡುತ್ತದೆ. ಮೇಲೆ ನೀಲಿ ಆಕಾಶ, ಕಣ್ಣು ಹಾಯಿಸಿದಷ್ಟೂ ದೂರದವರೆಗೂ ಕಾಣುವ ನೀರು. ಇನ್ನೇನು ನೀರು ಮತ್ತು ಭಾನು ಒಂದಾಗುತ್ತದೆಯೋ ಏನೋ ಎನ್ನುವಂಥ ಅದ್ಬುತ ದೃಶ್ಯ. ಇನ್ನು ಸಂಜೆಯ ವೇಳೆಗೆ ಹೋದರಂತೂ ಸೂರ್ಯಾಸ್ತದ ನೋಟವನ್ನು ಕಣ್ತುಂಬಿಕೊಳ್ಳುವುದೇ ಚಂದ. ಮಕ್ಕಳಿಗೆ ಕಡಲ ತೀರದ ಮರಳಲ್ಲಿ ಆಟವಾಡಿದಷ್ಟು ಸಾಕಾಗುವುದಿಲ್ಲ. ಸಮುದ್ರ ಶಾಂತವಾಗಿದ್ದರಂತೂ ಅದರ ಆನಂದವೇ ಬೇರೆ.
ಬೀಚ್ ಸೌಂದರ್ಯ ಹಾಳು ಮಾಡುತ್ತೊರುವ ತ್ಯಾಜ್ಯ
ಆದರೆ ತಮ್ಮ ಮನಸ್ಸಿನ ನೋವನ್ನು ಕಳೆಯಲೋ, ಕುಟುಂಬ, ಸ್ನೇಹಿತರ ಜೊತೆ ಸಮಯ ಕಳೆಯುವ ಉದ್ದೇಶದಿಂದಲೋ ಕಡಲ ತೀರಗಳಿಗೆ ಬರುವ ಅದೆಷ್ಟೋ ಮಂದಿ ಈ ಜಾಗದ ಸ್ವಚ್ಛತೆಯ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಕುಡಿದ ಬಾಟಲಿಗಳು, ತಿಂಡಿ ತಿನಿಸುಗಳ ಪ್ಲಾಸ್ಟಿಕ್‌ಗಳು (Plastic waste). ಪೇಪರ್ ಚೂರುಗಳು, ಬಟ್ಟೆ ಹೀಗೆ ಎಲ್ಲವನ್ನೂ ಬೀಚ್‌ನಲ್ಲಿ ಎಲ್ಲಿ ಬೇಕೋ ಅಲ್ಲಿ ಎಸೆದು ಬಿಡುತ್ತಾರೆ. ಇದು ಆ ಜಾಗದ ಸೌಂದರ್ಯವನ್ನು ಮಾತ್ರ ಹಾಳು ಮಾಡುವುದಿಲ್ಲ. ಆ ಜಾಗವನ್ನು ನೆಚ್ಚಿ, ನಂಬಿ ಬದುಕುತ್ತಿರುವ ಅದೆಷ್ಟೋ ಜಲಚರಗಳಿಗೂ ಹಾನಿ ಮಾಡುತ್ತವೆ.

ಮುಂಬೈ ಚೀಚ್‌ಗಳು ಜಗತ್ತಿನಾದ್ಯಂತ ಹೆಸರು ಪಡೆದಿವೆ. ಆದರೆ ಅಲ್ಲಿ ಸಂಗ್ರಹವಾಗುವ ತ್ಯಾಜ್ಯಗಳು ಮಾತ್ರ ಲೆಕ್ಕವಿಲ್ಲದಷ್ಟು. ಇಲ್ಲಿ ಬೀಚ್‌ನಲ್ಲಿ ರಾಶಿ ರಾಶಿ ಪ್ಲಾಸ್ಟಿಕ್, ಗಾಜಿನ ಬಾಟಲಿಗಳು, ಕಸ ಬಿದ್ದಿರುತ್ತವೆ. ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ.
ದಶಕಗಳ ಬಳಿಕ ತೀರ ಸೇರಿದ ಆಮೆಗಳು (Sea Turtle):
ಸಮುದ್ರ ಆಮೆಗಳು ಸಮುದ್ರದಲ್ಲಿ ಬದುಕುತ್ತವೆ ನಿಜ.ಆದರೆ ಅದರ ಗೂಡುಗಳಿರುವುದು ಸಮುದ್ರ ತೀರದಲ್ಲಿಯೇ. ಅವುಗಳು ಮೊಟ್ಟೆ ಇಡಲು ತಮ್ಮ ಗೂಡಿಗೇ ಬರಬೇಕು. ಆಮೆಗಳು ತಾವು ಎಲ್ಲಿ ಹುಟ್ಟಿರುತ್ತವೆಯೋ ಅದೇ ತೀರಕ್ಕೆ ಮರಳಿ ಬಂದು ಗೂಡು ಕಟ್ಟುತ್ತವೆ. ಅವುಗಳಿಗೆ ತಮ್ಮ ಮೊಟ್ಟೆಗಳನ್ನು ಹೂತಿಡಲು ಮರಳು ಬೇಕು. ಕಡಲ ತೀರದ ಮರಳೇ ಬೇಕು.
ಮುಂಬಯಿಯ ಕಡಲತೀರಕ್ಕೂ ಆಮೆಗಳು ರಾಶಿರಾಶಿಯಾಗಿ ಬಂದು ಮೊಟ್ಟೆಯಿಡುತ್ತಿತ್ತು.ಆದರೆ ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ವರ್ಸೋವಾ ಬೀಚ್ (Versova Beach) ಕಸದ ರಾಶಿಯಿಂದ ತುಂಬಿ ಹೋಗಿತ್ತು. ಹಾಗಾಗಿ ಈ ಸಮುದ್ರ ಆಮೆಗಳು ಕೂಡಾ ದಡದತ್ತ ಬರಲು ಹೆದರುತ್ತಿರತ್ತು. ಇದೀಗ ದಶಕಗಳ ಬಳಿಕ ಇದ್ದಕ್ಕಿದ್ದಂತೆ ಸಾವಿರಾರು ಆಮೆಗಳು ಮತ್ತೆ ತಮ್ಮ ಗೂಡಿನತ್ತ ಹೆಜ್ಜೆ ಹಾಕಿವೆ. ದಶಕಗಳಿಂದ ಕಾಣೆಯಾಗಿದ್ದ ಈ ಅಪರೂಪದ ಕಡಲಾಮೆಗಳು (Sea turtles) ಮೊಟ್ಟೆಯಿಡಲು ಮತ್ತೆ ಸಮುದ್ರ ದಂಡೆಗೆ ಮರಳಿವೆ. ಇದು ಪ್ರೇಮಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
85 ವಾರಗಳ ಶ್ರಮಕ್ಕೆ ಸಿಕ್ಕಿದ ಫಲ
ಹೌದು, ಪ್ರಕೃತಿಗೆ ಪುನರ್ಜನ್ಮ ನೀಡುವ ಪ್ರಾಮಾಣಿಕ ಪ್ರಯತ್ನಕ್ಕೆ ಯಾವತ್ತೂ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಮುಂಬೈನ ವರ್ಸೋವಾ ಕಡಲತೀರದಲ್ಲಿ ನಡೆದ ಈ ಘಟನೆಯೇ ಇದಕ್ಕೆ ಸಾಕ್ಷಿ. ಸುಮಾರು 85 ವಾರಗಳವರೆಗೆ 1,000ಕ್ಕೂ ಹೆಚ್ಚು ಸ್ವಯಂಸೇವಕರ ರಾತ್ರಿ ಹಗಲು ಈ ಕಡಲ ತೀರವನ್ನು ಶುಚಿಗೊಳಿಸಲು ಶ್ರಮಿಸಿದ್ದಾರೆ (Beach Cleaning). ಈ ಶುಚಿತ್ವ ಅಭಿಯಾನದ ಫಲವಾಗಿ ಇದೀಗ ವರ್ಸೋವಾ ಬೀಚ್ ಸಂಪೂರ್ಣ ಸ್ವಚ್ಛವಾಗಿದೆ. ಬೀಚ್ ಶುಚಿಯಾಗಿದ್ದೇ ತಡ ಆಮೆಗಳು ಮತ್ತೆ ತಮ್ಮ ಗೂಡಿನತ್ತ ಹೆಜ್ಜೆ ಹಾಕಿವೆ. ಮೊಟ್ಟೆಯಿಡುವ ಸಲುವಾಗಿ ಕಡಲ ತೀರದ ಮರಳಿನ ಆಶ್ರಯ ಪಡೆದಿವೆ. ಮತ್ತೆ ಸಮುದ್ರ ತೀರಲದಲಿ ರಾಶಿ ರಾಶಿ ಆಮೆಗಳು ಕಣ್ಣಿಗೆ ಬಿದ್ದಿವೆ.
ಟನ್‌ಗಟ್ಟಲೆ ತ್ಯಾಜ್ಯದ ಮರುಬಳಕೆ (Plastic Recycling):
ಈ ಸ್ವಚ್ಛತಾ ಅಭಿಯಾನ ಈಗ ಕೇವಲ ಬೀಚ್ ಅನ್ನು ಶುಚಿಗೊಳಿಸುವ ಕಾರ್ಯವಾಗಿ ಉಳಿದಿಲ್ಲ. ಪರಿಸರ ಪುನಃಸ್ಥಾಪನೆಯ ನಿಜವಾದ, ಪರಿಣಾಮವನ್ನು ತೋರಿಸುತ್ತದೆ. ಈ ಅಭಿಯಾನದಲ್ಲಿ ಸಂಗ್ರಹಿಸಲಾದ ಟನ್‌ಗಟ್ಟಲೆ, ಪ್ಲಾಸ್ಟಿಕ್ ಮತ್ತು ತ್ಯಾಜ್ಯವನ್ನು ರಿಸೈಕಲ್ ಮಾಡಲಾಗಿದೆ. ವರ್ಷಗಳಿಂದ ಕಸದಿಂದ ತುಂಬಿಕೊಂಡು ನಾರುತ್ತಿದ್ದ ಈ ಪರಿಸರ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲು ಇದು ಮಹತ್ವದ ಹೆಜ್ಜೆಯಾಗಿ ಗುರುತಿಸಿಕೊಂಡಿದೆ.
ಯಾರೋ ಒಬ್ಬರು, ಇಬ್ಬರಿಂದ ಯಾವ ಕೆಲಸವೂ ಸಾಧ್ಯವಾಗುವುದಿಲ್ಲ. ಉತ್ತಮ ಕಾರ್ಯಕ್ಕೆ ಯಾರೇ ಕೈ ಹಾಕಿದಾಗಲೂ ಅದಕ್ಕೆ ದೊಡ್ಡ ಮಟ್ಟದಲ್ಲಿ ಕೈ ಜೋಡಿಸಿದಾಗ ಅದು ಹೆಚ್ಚು ಪರಿಣಾಮಕಾರಿಯಾಗಿ ಫಲ ನೀಡುತ್ತದೆ. ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸುವುದು ಸಾಧ್ಯವಾಗುತ್ತದೆ. ಇದೀಗ ಮುಂಬಯಿಯ ವರ್ಸೋವಾ ಕಡಲತೀರದಲ್ಲಿ ನಡೆದ ಘಟನೆಯು ಜನರು ಮತ್ತು ವನ್ಯಜೀವಿಗಳ ಅಭಿವೃದ್ಧಿಗೆ ಉತ್ತಮ ವಾತಾವರಣವನ್ನು ಸೃಷ್ಟಿಸಿಕೊಡುವ ಪರಿಸರವನ್ನು ರೂಪಿಸಿದೆ.
ಒಟ್ಟಿನಲ್ಲಿ ಹೇಳುವುದಾದರೆ ಪರಿಸರ ಸಂರಕ್ಷಣೆ ಎನ್ನುವುದು ಒಬ್ಬರ ಕೆಲಸವಲ್ಲ. ಸಾವಿರಾರು ಜನರು ಒಟ್ಟಾಗಿ ಕೈ ಜೋಡಿಸಿಕೊಂಡು ನಿರಂತರವಾಗಿ ಸಣ್ಣ ಸಣ್ಣ ಹೆಜ್ಜೆ ಇಡುತ್ತಾ ಹೋದರೆ ಸಾಧಿಸಲಾಗದ್ದು ಯಾವುದೂ ಇಲ್ಲ. ಇದು ಇಂದಿನ ಅಗತ್ಯವೂ ಹೌದು, ಅನಿವಾರ್ಯತೆಯೂ ಹೌದು.


Click it and Unblock the Notifications
