ತೆಲಂಗಾಣ ರೈಲ್ವೆ ಅಪಘಾತದ ದುರಂತ ಚಿತ್ರಗಳು
ಹೈದರಾಬಾದ್, ಜು.24 : ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬ್ಯಾಗ್, ಮುರಿದು ಹೋಗಿರುವ ಸ್ಲೇಟ್, ಚೆಲ್ಲಿ ಹೋಗಿರುವ ಊಟ, ನಜ್ಜುಗುಜ್ಜಾಗಿರುವ ನೀರಿನ ಬಾಟಲ್, ಅನಾಥವಾಗಿ ಬಿದ್ದಿರುವ ಪುಸ್ತಕ, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ, ಏನೂ ಆಗಿಲ್ಲ ಎಂಬಂತೆ ನಿಂತಿರುವ ರೈಲು ಇದು ತೆಲಂಗಾಣದಲ್ಲಿ ಭೀಕರ ಅಪಘಾತದ ನಂತರ ಗುರುವಾರ ಕಂಡುಬಂದ ದೃಶ್ಯಗಳು.
ತೆಲಂಗಾಣ ರಾಜ್ಯದ ಮೇದಕ್ ಜಿಲ್ಲೆಯ ಮುಸಾಯಿಪೇಟೆ ಗುರುವಾರ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಮಾನವ ರಹಿತ ರೈಲ್ವೆ ಕ್ರಾಸಿಂಗ್ ನಲ್ಲಿ ಶಾಲಾ ಬಸ್ಸಿಗೆ ರೈಲು ಡಿಕ್ಕಿ ಹೊಡೆದಿದ್ದು, 21 ಶಾಲಾ ಮಕ್ಕಳು ಸಾವನ್ನಪ್ಪಿದ್ದಾರೆ. ಎಂದಿನಂತೆ ಖುಷಿಯಿಂದ ಶಾಲೆಗೆ ಹೊರಟಿದ್ದ ಮಕ್ಕಳು ಚಿರನಿದ್ರೆಗೆ ಜಾರಿದ್ದಾರೆ.
38 ಜನರು ಪ್ರಯಾಣಿಸುತ್ತಿದ್ದ ಕಾಕತೀಯ ಖಾಸಗಿ ಶಾಲೆಗೆ ಸೇರಿದ ಬಸ್ಸಿಗೆ ನಾಂದೇಡ್ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ. ಹೊಸದಾಗಿ ಉದಯವಾದ ತೆಲಂಗಾಣ ರಾಜ್ಯ ಭೀಕರ ಅಪಘಾತಕ್ಕೆ ಕಂಬನಿ ಮಿಡಿದಿದೆ. ಖಾಸಗಿ ಬಸ್ ಚಾಲಕನ ಒಂದು ಕ್ಷಣದ ಆತುರದ ನಿರ್ಧಾರ ಆತ ಮತ್ತು ಮಕ್ಕಳ ಜೀವವನ್ನು ಬಲಿ ಪಡೆದಿದೆ. ರೈಲು ಅಪಘಾತದ ಚಿತ್ರಗಳು ಇಲ್ಲಿವೆ.

21 ಶಾಲಾ ಮಕ್ಕಳ ದುರ್ಮರಣ
ತೆಲಂಗಾಣ ರಾಜ್ಯದ ಮೇದಕ್ ಜಿಲ್ಲೆಯ ಮುಸಾಯಿಪೇಟೆ ಬಳಿ ಗುರುವಾರ ಸಂಭವಿಸಿದ ಅಪಘಾತದಲ್ಲಿ 21 ಶಾಲಾ ಮಕ್ಕಳು ಸಾವನ್ನಪ್ಪಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ರೈಲು ಏನೂ ಆಗಿಲ್ಲ ಎಂಬಂತೆ ನಿಂತಿದೆ.

ಯಮನಾಗಿ ಬಂತು ನಾಂದೇಡ್ ಎಕ್ಸ್ ಪ್ರೆಸ್
ಯಮನಾಗಿ ಬಂದ ನಾಂದೇಡ್ ಎಕ್ಸ್ ಪ್ರೆಸ್ ರೈಲು ಮಾನವ ರಹಿತ ರೈಲ್ವೆ ಕ್ರಾಸಿಂಗ್ ನಲ್ಲಿ ಶಾಲಾ ಬಸ್ಸಿಗೆ ಡಿಕ್ಕಿ ಹೊಡೆದಿದ್ದರಿಂದ 21 ಮಕ್ಕಳು ಸಾವನ್ನಪ್ಪಿದರು. ಶಾಲಾ ಬಸ್ ಚಾಲಕನ ಒಂದು ಕ್ಷಣದ ಯೋಚನೆ ಆತ ಮತ್ತು ಮುಗ್ಧ ಮಕ್ಕಳ ಜೀವವನ್ನು ಬಲಿ ತೆಗೆದುಕೊಂಡಿದೆ.

ಚೆಲ್ಲಾಪಿಲ್ಲಿಯಾದ ಬ್ಯಾಗ್ ಗಳು
ಬಸ್ಸಿಗೆ ಡಿಕ್ಕಿ ಹೊಡೆದ ರೈಲು ಬಸ್ಸನ್ನು ಸುಮಾರು ಒಂದು ಕಿ.ಮೀ. ವರೆಗೆ ಎಳೆದುಕೊಂಡು ಹೋಗಿದೆ. ಇದರಿಂದ ಮಕ್ಕಳ ಬ್ಯಾಗ್, ಪುಸ್ತಕ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಅನಾಥವಾಗಿ ಬಿದ್ದ ಪುಸ್ತಕ
ಮಗು ಬುಧವಾರ ಶ್ರದ್ಧೆಯಿಂದ ಕುಳಿತು ಹೋಂವರ್ಕ ಮಾಡಿಕೊಂಡು ಇಂದು ಶಾಲೆಗೆ ಹೊರಟಿತ್ತು. ಆದರೆ, ದುರಂತದ ನಂತರ ಪುಸ್ತಕ ಅಪಘಾತ ನಡೆದ ಸ್ಥಳದಲ್ಲಿ ಅನಾಥವಾಗಿ ಬಿದ್ದಿತ್ತು. ಮಗು ಚಿರನಿದ್ರೆಗೆ ಜಾರಿತ್ತು.

ಮುಗಿಲು ಮುಟ್ಟಿದ ಆಕ್ರಂದನ
ಶಾಲಾ ಬಸ್ಸಿಗೆ ರೈಲು ಡಿಕ್ಕಿ ಹೊಡೆದ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾರ ಮಕ್ಕಳು ಮೃತಪಟ್ಟಿದ್ದಾರೆ. ಯಾರ ಮಕ್ಕಳು ಆಸ್ಪತ್ರೆ ಸೇರಿದ್ದಾರೆ ಎಂಬ ಮಾಹಿತಿ ದೊರೆಯಲು ಗಂಟೆಗಳ ಕಾಲ ಕಾಯಬೇಕಾಯಿತು.

ಸಚಿವರ ಭೇಟಿ
ತೆಲಂಗಾಣ ರಾಜ್ಯದ ಸಂಸದೀಯ ವ್ಯವಹಾರಗಳ ಸಚಿವ ಹರೀಶ್ ರಾವು ಅವರು ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹರಿದುಬಂತು ಜನಸಾಗರ
ಶಾಲಾ ಬಸ್ಸಿಗೆ ರೈಲು ಡಿಕ್ಕಿ ಹೊಡೆದ ಸುದ್ದಿ ತಿಳಿದ ಜನರು ಘಟನಾ ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದರು.

ಹಿಂದೆಯೂ ನಡೆದಿತ್ತು
ಮಾನವ ರಹಿತ ರೈಲ್ವೆ ಕ್ರಾಸಿಂಗ್ ಇರುವ ಮುಸಾಯಿ ಪೇಟೆ ಬಳಿ ರೈಲ್ವೆ ಗೇಟ್ ಅಳವಡಿಸುವಂತೆ ಸ್ಥಳೀಯರು ಸುಮಾರು 6 ತಿಂಗಳಿನಿಂದ ರೈಲ್ವೆ ಇಲಾಖೆಗೆ ಮನವಿ ಮಾಡುತ್ತಿದ್ದರು. ಸುಮಾರು ಎರಡು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಟ್ರಾಕ್ಟರ್ ಗೆ ರೈಲು ಡಿಕ್ಕಿ ಹೊಡೆದು ಆರು ಜನರು ಸಾವನ್ನಪ್ಪಿದ್ದರು.

ಎಚ್ಚರಿಕೆ ಫಲಕ ಯಾರು ನೋಡಲಿಲ್ಲ
ಮಾನವ ರಹಿತ ರೈಲ್ವೆ ಕ್ರಾಸಿಂಗ್ ಇರುವ ಪ್ರದೇಶದಲ್ಲಿ ಅಪಘಾತಗಳು ಸಂಭವಿಸುತ್ತವೆ ಎಂಬ ಎಚ್ಚರಿಕೆ ಫಲಕವಿದೆ ದುರಂತದಲ್ಲಿ ಮೃತಪಟ್ಟ ಬಸ್ಸಿನ ಚಾಲಕ ಇದನ್ನು ಗಮನಿಸಿದೆ ಸಾವನ್ನಪ್ಪಿದ್ದಾನೆ.

ದುರಂತದ ಕಥೆ ಹೇಳುವ ಅವಶೇಷ
ಬಸ್ಸಿಗೆ ರೈಲು ಡಿಕ್ಕಿ ಹೊಡೆದ ನಂತರ ದೊರೆತ ಅವಶೇಷಗಳು ದುರಂತದ ಭೀಕರತೆಯನ್ನು ಹೇಳುತ್ತಿವೆ.

ಜಗ ಮೋಹನ್ ರೆಡ್ಡಿ ಭೇಟಿ
ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ದುರಂತ ನಡೆದ ಸ್ಥಳಕ್ಕೆ ತೆರಳಿ ಪೋಷಕರಿಗೆ ಸಮಾಧಾನ ಹೇಳಿದರು.

ಯಾರಿಗೆ ಹೇಗೆ ಸಮಾಧಾನ ಮಾಡುತ್ತಾರೆ?
ದುರಂತದಲ್ಲಿ 21 ಮಕ್ಕಳು ಸಾವನ್ನಪ್ಪಿದ್ದಾರೆ ಯಾರಿಗೆ ಹೇಗೆ ಸಮಾಧಾನ ಮಾಡಬೇಕು ಎಂಬುದು ಸ್ಥಳೀಯರ ಸಮಸ್ಯೆಯಾಗಿತ್ತು.












Click it and Unblock the Notifications