ಹೈದರಾಬಾದ್‌ಗೆ ಹೋಗುವವರಿಗೆ ಸಿಹಿ ಸುದ್ದಿ ಕೊಟ್ಟ ತೆಲಂಗಾಣ ಸರ್ಕಾರ
ಹೈದರಾಬಾದ್, ಜೂನ್ 01 : ಹೈದರಾಬಾದ್ ಮತ್ತು ತೆಲಂಗಾಣದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲು ಹಾಕಿದ್ದ ತಡೆಯನ್ನು ತೆಲಂಗಾಣ ಸರ್ಕಾರ ತೆಗೆದುಹಾಕಿದೆ. ಬೇರೆ ರಾಜ್ಯದವರು ಯಾವುದೇ ಪಾಸುಗಳ ಅಗತ್ಯವಿಲ್ಲದೆ ರಾಜ್ಯಕ್ಕೆ ಭೇಟಿ ನೀಡಬಹುದು.
"ಸೋಮವಾರದಿಂದ ರಾಜ್ಯಕ್ಕೆ ಭೇಟಿ ನೀಡಲು ಯಾವುದೇ ಪಾಸುಗಳ ಅಗತ್ಯವಿಲ್ಲ. ಹೈದರಾಬಾದ್‌ನಿಂದ ಬೇರೆ ರಾಜ್ಯಕ್ಕೆ ಹೋಗಲು ರಾಜ್ಯಗಳ ಒಪ್ಪಿಗೆಗಾಗಿ ಕಾಯಲಾಗುತ್ತಿದೆ" ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಮೇಶ್ ಕುಮಾರ್ ಹೇಳಿದ್ದಾರೆ.
ಮುಖ್ಯಮಂತ್ರಿ ಕೆ. ಚಂದ್ರಶೇಖರಾವ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಲು ಇದ್ದ ನಿರ್ಬಂಧ ತೆಗೆದು ಹಾಕಲು ತೀರ್ಮಾನ ಕೈಗೊಳ್ಳಲಾಯಿತು. ಕೇಂದ್ರ ಗೃಹ ಸಚಿವಾಲಯ ಸಹ ಜೂನ್ 1ರಿಂದ ಅಂತರರಾಜ್ಯ ಸಂಚಾರಕ್ಕೆ ಪಾಸ್ ಅಗತ್ಯವಿಲ್ಲ ಎಂದು ಹೇಳಿದೆ.

ತೆಲಂಗಾಣದಲ್ಲಿ ಸಾಮಾನ್ಯ ಲಾಕ್ ಡೌನ್ ನಿಯಮಗಳನ್ನು ಜೂನ್ 7ರ ತನಕ ವಿಸ್ತರಣೆ ಮಾಡಲಾಗಿದೆ. ಕಂಟೈನ್ಮೆಂಟ್ ಝೋನ್‌ನಲ್ಲಿ ಜೂನ್ 30ರ ತನಕ ಲಾಕ್ ಡೌನ್ ಜಾರಿಯಲ್ಲಿರಲಿದೆ ಎಂದು ತೆಲಂಗಾಣ ಸರ್ಕಾರ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆ ತನಕ ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆ ತನಕ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಸ್ತುತ ತೆಲಂಗಾಣದಲ್ಲಿ ಕೋವಿಡ್ - 19 ಸೋಂಕಿತರ ಸಂಖ್ಯೆ 2698. ಇವರಲ್ಲಿ 1,188 ಸಕ್ರಿಯ ಪ್ರಕರಣಗಳು. ಇದುವರೆಗೂ ರಾಜ್ಯದಲ್ಲಿ 82 ಜನರು ಮೃತಪಟ್ಟಿದ್ದಾರೆ.












Click it and Unblock the Notifications