ತೆಲಂಗಾಣ; 20 ದಿನದಲ್ಲಿ 1,500 ಹಾಸಿಗೆಯ ಆಸ್ಪತ್ರೆ ಸಿದ್ಧ
ಹೈದರಾಬಾದ್, ಏಪ್ರಿಲ್ 22 : ಕೋವಿಡ್ - 19 ವಿರುದ್ಧ ಹೋರಾಟ ಮಾಡುತ್ತಿರುವ ತೆಲಂಗಾಣ ಸರ್ಕಾರ 14 ಅಂತಸ್ತಿನ ಕಟ್ಟಡವನ್ನು ಆಸ್ಪತ್ರೆಯಾಗಿ ಪರಿವರ್ತಿಸಿದೆ. 1500 ಹಾಸಿಗೆಗಳು ಇಲ್ಲಿದ್ದು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಿಕೊಳ್ಳಲಾಗುತ್ತದೆ.
ಹೈದರಾಬಾದ್‌ನ ಗಚ್ಚಿ ಬೌಲಿ ಒಳಾಂಗಣ ಕ್ರೀಡಾಂಗಣದ 14 ಅಂತಸ್ತಿನ ಕಟ್ಟಡವನ್ನು 20 ದಿನಗಳಲ್ಲಿ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. 2002ರಲ್ಲಿ ನಿರ್ಮಾಣವಾಗಿ ಈ ಕಟ್ಟಡ ಈಗ ತಾತ್ಕಾಲಿಕ ಆಸ್ಪತ್ರೆಯಾಗಿ ಬದಲಾಗಿದೆ.
1500 ಹಾಸಿಗೆಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ 50 ಐಸಿಯುಗಳ ವ್ಯವಸ್ಥೆ ಮಾಡಲಾಗಿದೆ. ಚೀನಾದ ವುಹಾನ್‌ನಲ್ಲಿ 10 ದಿನದಲ್ಲಿ 1000 ಹಾಸಿಗೆಯ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲಾಗಿತ್ತು. ನಾವು 20 ದಿನದಲ್ಲಿ ಪರಿವರ್ತನೆ ಮಾಡಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಈ ಆಸ್ಪತ್ರೆಯನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಕಟ್ಟಡ ಸುಸ್ಥಿತಿಯಲ್ಲಿದ್ದರು. ನೀರು, ಶೌಚಾಲಯ, ಒಳಚರಂಡಿ ವ್ಯವಸ್ಥೆ ಸರಿಯಾಗಿ ಇರಲಿಲ್ಲ. ಮೂರು ವಾರಗಳಲ್ಲಿ ಎಲ್ಲವನ್ನೂ ಸಿದ್ಧಗೊಳಿಸಲಾಗಿದೆ.
ಆಮ್ಲಜನಕ ಪೂರೈಕೆ ಮಾಡುವ ಪೈಪ್, ನಿರಂತರ ವಿದ್ಯುತ್ ಸರಬರಾಜಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೇ ಕಟ್ಟಡಕ್ಕೆ ನಾಲ್ಕು ಲಿಫ್ಟ್ ಇದ್ದು, ಇನ್ನೂ ಎರಡು ಲಿಫ್ಟ್‌ಗಳನ್ನು ಹೆಚ್ಚುವರಿಯಾಗಿ ಅಳವಡಿಕೆ ಮಾಡಲಾಗುತ್ತಿದೆ.
ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಿದ ಬಳಿಕ ಇದನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವ ಉದ್ದೇಶವನ್ನು ತೆಲಂಗಾಣ ಸರ್ಕಾರ ಹೊಂದಿದೆ.
ತೆಲಂಗಾಣದಲ್ಲಿ ಇದುವರೆಗೂ 928 ಕೊರೊನಾ ಪ್ರಕರಣಗಳು ದಾಖಲಾಗಿವೆ. 23 ಜನರು ಮೃತಪಟ್ಟಿದ್ದಾರೆ. ಸರ್ಕಾರ ಮೇ 7ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.












Click it and Unblock the Notifications