ನಾಟಕೀಯ ಬೆಳವಣಿಗೆ: ತೆಲಂಗಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷರ ಬಂಧನ
ಹೈದರಾಬಾದ್, ಡಿಸೆಂಬರ್ 04: ತೆಲಂಗಾಣದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಕೊಡಂಗಲ್ ಕ್ಷೇತ್ರದ ಹಾಲಿ ಶಾಸಕ ರೇವಂತ್ ರೆಡ್ಡಿ ಅವರನ್ನು ಬಂಧಿಸಲಾಗಿದೆ. ಮಂಗಳವಾರ ಬೆಳಿಗ್ಗೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ರೇವಂತ್ ರೆಡ್ಡಿ ಅವರನ್ನು ಅವರ ನಿವಾಸದಿಂದಲೇ ಬಂಧಿಸಲಾಗಿದೆ.
ಕೊಡಂಗಾಲ್, ಕೋಸ್ಗಿ ಪ್ರದೇಶಗಳಲ್ಲಿ ಇಂದು ಹಾಲಿ ಮುಖ್ಯಮಂತ್ರಿ ಟಿಆರ್ ಎಸ್ ನ ಕೆ.ಚಂದ್ರಶೇಖರ್ ರಾವ್ ಅವರ ಪ್ರಚಾರ ಸಭೆ ಇತ್ತು. ಈ ಸಭೆಗೆ ಯಾವುದೇ ರೀತಿಯ ಹಾನಿಯಾಗಬಾರದು ಎಂಬ ಕಾರಣಕ್ಕೆ ರೇವಂತ್ ರೆಡ್ಡಿ ಅವರನ್ನು ಬಂಧಿಸಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಕಿ.ಚಂದ್ರಶೇಖರ್ ರಾವ್ ಅವರ ಪ್ರಚಾರ ಸಭೆಯನ್ನು ರದ್ದುಗೊಳಿಸುವಂತೆ ರೆಡ್ಡಿ ಇದಕ್ಕೂ ಮುನ್ನ ಬೆದರಿಕೆ ಒಡ್ಡಿದ್ದ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ.

'ಕೆಸಿಆರ್ ಅವರಿಗೆ ಕಾಂಗ್ರೆಸ್ ಮತ್ತು ಟಿಡಿಪಿ ಮೈತ್ರಿಯಿಂದ ಭಯ ಆರಂಭವಾಗಿದೆ. ಅದೇ ಕಾರಣಕ್ಕೆ ಅವರು ಇಂಥ ಕೆಲಸ ಮಾಡಿಸುತ್ತಿದ್ದಾರೆ' ಎಂದು ಕಾಂಗ್ರೆಸ್ ದೂರಿದೆ.
"ಕೆಸಿಆರ್ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಅವರ ಬೆಡ್ ರೂಮಿಗೆ ಹೋಗಿದ್ದಾರೆ. ಇಂಥ ಘಟನೆಗಳು ಭಾರತದಲ್ಲಿ ಎಲ್ಲೂ ನಡೆದಿಲ್ಲ! ರೇವಂತ್ ರೆಡ್ಡಿ ಸಾಧಾರಣ ಮನುಷ್ಯರಲ್ಲ. ಅವರು ಬ್ರಹ್ಮೋಸ್ ಕ್ಷಿಪಣಿ ಥರ. ಕೆಸಿಆರ್ ಅವರನ್ನು ರೇವಂತ್ ಖಂಡಿತ ಮುಗಿಸುತ್ತಾರೆ(ಸೋಲಿಸುತ್ತಾರೆ)" ಎಂದು ಕಾಂಗ್ರೆಸ್ ಮುಖಂಡ ಜಿ ಎನ್ ರೆಡ್ಡಿ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ತೆಲಂಗಾಣದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications