ಮರ್ಯಾದೆ ಹತ್ಯೆ: ತೆಲಂಗಾಣದ ಪ್ರಣಯ್ ಕುಮಾರ್ ಕೊಲೆ ಆರೋಪಿಗೆ ಜಾಮೀನು
ಹೈದರಾಬಾದ್ (ತೆಲಂಗಾಣ), ಏಪ್ರಿಲ್ 28: ಅಳಿಯ ಪೆರುಮಲ್ಲ ಪ್ರಣಯ್ ಕುಮಾರ್ ಕೊಲೆ ಪ್ರಕರಣದ ಅರೋಪಿಯಾಗಿದ್ದ ತಿರುನಗಾರು ಮಾರುತಿರಾವ್ (ಆರೋಪಿ ಸಂಖ್ಯೆ ಒಂದು)ಗೆ ಷರತ್ತುಬದ್ಧ ಜಾಮೀನು ದೊರೆತಿದೆ. ಮಾರುತಿ ಇಚ್ಛೆಗೆ ವಿರುದ್ಧವಾಗಿ ಮಗಳು ಅಮೃತವರ್ಷಿಣಿ ಇಪ್ಪತ್ನಾಲ್ಕು ವರ್ಷದ ದಲಿತ ಯುವಕ ಪ್ರಣಯ್ ಕುಮಾರ್ ನನ್ನು ಮದುವೆ ಆಗಿದ್ದರು.
ತನ್ನ ಸೋದರ ತಿರುನಗಾರು ಶರವಣ ಕುಮಾರ್ ಮತ್ತು ಅಬ್ದುಲ್ ಕರೀಮ್ ನ ವಿರುದ್ಧ ದೂರು ದಾಖಲಿಸಿ, ವಾರಂಗಲ್ ಸೆಂಟ್ರಲ್ ಜೈಲ್ ನಲ್ಲಿ ಹಾಕಲಾಗಿತ್ತು. ತೆಲಂಗಾಣ ಹೈಕೋರ್ಟ್ ಆದೇಶ ಜೈಲಧಿಕಾರಿಗಳ ಕೈ ಸೇರಿದ ಮೇಲೆ ಬಿಡುಗಡೆ ಆಗಲಿದೆ. ಶಾಲೆ ದಿನಗಳಿಂದ ಪರಸ್ಪರರನ್ನು ಪ್ರೀತಿಸುತ್ತಿದ್ದ ಪ್ರಣಯ್ ಹಾಗೂ ಅಮೃತಾ, ಕಳೆದ ವರ್ಷ ಜನವರಿಯಲ್ಲಿ ಮದುವೆ ಆಗಿದ್ದರು.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಐದು ತಿಂಗಳ ಗರ್ಭಿಣಿ ಆಗಿದ್ದ ಅಮೃತಾರನ್ನು ನರ್ಸಿಂಗ್ ಹೋಮ್ ಗೆ ಕರೆದೊಯ್ದು, ಪರೀಕ್ಷೆ ಮಾಡಿಸಿ, ವಾಪಸ್ ಕರೆತರುವಾಗ ಪ್ರಣಯ್ ನನ್ನು ಕೊಲೆ ಮಾಡಲಾಗಿತ್ತು. ಅದಕ್ಕೂ ಮುನ್ನ ನಾಲ್ಕು ಬಾರಿ ಅತನ ಕೊಲೆಗೆ ಯತ್ನಿಸಿದ್ದಾಗಿ ಮಾರುತಿ ರಾವ್ ತಪ್ಪೊಪ್ಪಿಕೊಂಡಿದ್ದ.

ಮಾರುತಿ ರಾವ್ ಗೆ ಹೈ ಕೋರ್ಟ್ ನಲ್ಲಿ ಜಾಮೀನು ನೀಡಿರುವುದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಾಮೀನು ಸಿಕ್ಕಿರುವ ಮಾಹಿತಿಗೆ ಪ್ರತಿಕ್ರಿಯೆ ನೀಡಿರುವ ಅಮೃತಾ ಹಾಗೂ ಪ್ರಣಯ್ ನ ತಂದೆ ಬಾಲಸ್ವಾಮಿ, ಈ ಬೆಳವಣಿಗೆಯು 'ನಿರಾಶಾದಾಯಕ' ಎಂದು ಹೇಳಿದ್ದಾರೆ.












Click it and Unblock the Notifications