ಐಟಿ ದಾಳಿ: ಟಿಡಿಪಿ ಶಾಸಕನಿಗೆ ಸೇರಿದ ಕೋಟಿಗಟ್ಟಲೆ ಹಣ ವಶ
ಹೈದರಾಬಾದ್, ಡಿ. 17: ಆಂಧ್ರಪ್ರದೇಶದ ಆಡಳಿತಾರೂಢ ತೆಲುಗು ದೇಶಂ ಪಾರ್ಟಿ ಶಾಸಕ ರಾಜೇಂದ್ರ ರೆಡ್ಡಿ ಹಾಗೂ ಮೆಹಬೂಬನಗರ ಜಿಲ್ಲೆ ನಾರಾಯಣ ಪೇಟೆ ಶಾಸಕ ಎಸ್.ಆರ್.ರೆಡ್ಡಿ ಅವರ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಅಪಾರ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ. ಸದ್ಯಕ್ಕೆ ಸಿಕ್ಕಿರುವ ಲೆಕ್ಕ 18 ಕೋಟಿ ರು ದಾಟಿದೆ.
ಆಂಧ್ರಪ್ರದೇಶ ಮೆಹಬೂನ್ ನಗರ ಜಿಲ್ಲೆಯಲ್ಲಿ ಮೊದಲಿಗೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಂತರ ಕರ್ನಾಟಕದ ರಾಯಚೂರು, ಕಲಬುರ್ಗಿ, ಬೆಂಗಳೂರಿನ ಕೆಲವೆಡೆ ದಾಳಿ ನಡೆಸಿ ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.[ಲಂಚ ಆಮಿಷ: ಟಿಡಿಪಿ ಶಾಸಕ ರೇವಂತ್ ಗೆ ನ್ಯಾಯಾಂಗ ಬಂಧನ]

ನವೋದಯ ಎಜುಕೇಷನ್ ಟ್ರಸ್ಟ್ ಹೆಸರಿನಲ್ಲಿ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಮೆಡಿಕಲ್, ಡೆಂಟಲ್ ಹಾಗೂ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. 50 ವರ್ಷ ವಯಸ್ಸಿನ ರಾಜೇಂದ್ರ ರೆಡ್ಡಿ ಅವರು ರಾಯಚೂರಿನಲ್ಲಿ ಎಂ. ಫಾರ್ಮಾ ಓದಿದ್ದು, ಅಪಾರ ಪ್ರಮಾಣದ ಆಸ್ತಿಯನ್ನು ರಾಯಚೂರಿನಲ್ಲಿರಿಸಿದ್ದಾರೆ.
2014ರ ಚುನಾವಣೆ ಸಂದರ್ಭದಲ್ಲಿ 29 ಕೋಟಿ ರು ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದ ರಾಜೇಂದ್ರ ರೆಡ್ಡಿ ಅವರು ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ದೂರು ಸಲ್ಲಿಸಲಾಗಿತ್ತು.
ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಟಿಡಿಪಿ ಶಾಸಕ ರೇವಂತ್ ರೆಡ್ಡಿ ಅವರು ಆಂಗ್ಲೋ ಇಂಡಿಯನ್ ನಾಮಾಂಕಿತ ಶಾಸಕ ಸ್ಟೀಫನ್ ಸನ್ ಗೆ ಲಂಚ ನೀಡಲು ಹೋಗಿ ಸಿಕ್ಕಿಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ತೆಲಂಗಾಣದಲ್ಲಿ ಡಿಸೆಂಬರ್ 27ರಿಂದ ಎಂಎಲ್ ಸಿ ಚುನಾವಣೆ ನಡೆಯಲಿದ್ದು, ಈ ಐಟಿ ದಾಳಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.












Click it and Unblock the Notifications