ಅಲ್ಲಿ-ಇಲ್ಲಿ ಸುದ್ದಿ: ಅಲ್ಲಿ 5ನೇ ಅಲೆಗೆ ಕಾರಣವಾದ ಓಮಿಕ್ರಾನ್ ಉಪ ತಳಿ ಬಿಎ.4 ಇಲ್ಲಿ ಪತ್ತೆ!
ಹೈದ್ರಾಬಾದ್, ಮೇ 20: ಕೊರೊನಾವೈರಸ್ ರೂಪಾಂತರಿ ಓಮಿಕ್ರಾನ್. ಈ ಓಮಿಕ್ರಾನ್ ರೂಪಾಂತರಿಯ ಉಪ ತಳಿ ಬಿಎ.4 ಸೋಂಕು ಇದೀಗ ಭಾರತದಲ್ಲಿ ಸದ್ದು ಮಾಡುತ್ತಿದೆ. ಹೊಸ ರೂಪಾಂತರಿಯ ಉಪ ತಳಿ ಪತ್ತೆ ಆಗಿರುವ ಬಗ್ಗೆ ಭಾರತೀಯ SARS-CoV-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG) ದೃಢಪಡಿಸಿದೆ.
ಭಾರತದಲ್ಲಿ ಓಮಿಕ್ರಾನ್ ರೂಪಾಂತರಿಯ ಉಪ ತಳಿ ಬಿಎ.4 ಪ್ರಕರಣವು ಹೈದರಾಬಾದ್‌ನಲ್ಲಿ ಪತ್ತೆಯಾಗಿರುವ ಕುರಿತು ಪಕ್ಕಾ ಆಗಿದೆ. ಹೊಸ ರೂಪಾಂತರಿಯ ಉಪ ತಳಿ ಬಿಎ.4 ಕುರಿತು ವೈದ್ಯಕೀಯ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ INSACOG ಕೆಲಸ ಮಾಡುತ್ತಿದೆ.
ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆಫ್ರಿಕನ್ ಪ್ರಜೆಯಿಂದ ಸಂಗ್ರಹಿಸಿದ ಮಾದರಿಯಲ್ಲಿ ಹೊಸ ರೂಪಾಂತರ ತಳಿಯು ಪತ್ತೆಯಾಗಿತ್ತು. ಈ ವ್ಯಕ್ತಿಯಿಂದ ಮಾದರಿಯ ಪರೀಕ್ಷೆಯ ವೇಳೆ ಒಮಿಕ್ರಾನ್‌ನ BA.4 ಉಪ ತಳಿಯು ಇರುವುದು ಕಂಡುಬಂದಿತ್ತು.

ದಕ್ಷಿಣ ಆಫ್ರಿಕಾದಿಂದ ಬಂದವನಲ್ಲಿ ಪತ್ತೆಯಾಗಿದ್ದ ಸೋಂಕು
ಕಳೆದ ಮೇ 9ರಂದು ದಕ್ಷಿಣ ಆಫ್ರಿಕಾದಿಂದ ಹೈದರಾಬಾದ್‌ಗೆ ಆಗಮಿಸಿದ ವ್ಯಕ್ತಿಯಲ್ಲಿ ಓಮಿಕ್ರಾನ್ ರೂಪಾಂತರಿಯ ಉಪ ತಳಿ ಬಿಎ.4 ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆ ಅಂದು ಸೋಂಕಿತ ವ್ಯಕ್ತಿಯ ಜೊತೆಗೆ ಪ್ರಯಾಣಿಸಿದ ಇತರೆ ಪ್ರಯಾಣಿಕರಿಂದ ಮಾದರಿ ಸಂಗ್ರಹಿಸಲಾಗುತ್ತಿದೆ.

ದಕ್ಷಿಣ ಆಫ್ರಿಕಾದಲ್ಲಿ 5ನೇ ಅಲೆ ಸೃಷ್ಟಿಸಿದ ಉಪ ತಳಿಗಳು
ಕೊರೊನಾ ವೈರಸ್ ಸೋಂಕಿನ ಓಮಿಕ್ರಾನ್ ರೂಪಾಂತರದ ಬಿಎ.4 ಮತ್ತು ಬಿಎ.5 ಉಪ ತಳಿಗಳು ದಕ್ಷಿಣ ಆಫ್ರಿಕಾದಲ್ಲಿ ಐದನೇ ಅಲೆಗೆ ಕಾರಣವಾಗಿತ್ತು. ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಇದೇ ಉಪ ತಳಿಗಳಿಂದ ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದವು ಎಂದು ವರದಿಯಾಗಿದೆ.

ದೇಶದಲ್ಲಿ ಎಷ್ಟಿದೆ ಕೊರೊನಾವೈರಸ್ ಪ್ರಕರಣಗಳು?
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,259 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ. ದೇಶದಲ್ಲಿ ಒಂದು ದಿನದಲ್ಲಿ ಕೊರೊನಾ ವೈರಸ್ ಮಹಾಮಾರಿಯಿಂದ 20 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದೇ ಅವಧಿಯಲ್ಲಿ 2,614 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಇದುವರೆಗೂ 43,131,822 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, ಗುಣಮುಖರ ಶೇಕಡಾವಾರು ಪ್ರಮಾಣ ಶೇ.98.74ರಷ್ಟಿದೆ. ಅದೇ ರೀತಿ ಮಹಾಮಾರಿ ಕೋವಿಡ್-19 ಸೋಂಕಿಗೆ ದೇಶದಲ್ಲಿ ಇದುವರೆಗೂ 524,323 ಮಂದಿ ಪ್ರಾಣ ಬಿಟ್ಟಿದ್ದು, ಮೃತರ ಪ್ರಮಾಣ ಶೇ.1.22ರಷ್ಟಿದೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆ 15,044 ಆಗಿದೆ. ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.04ರಷ್ಟಿದೆ.

ವಿಶ್ವದಲ್ಲಿ ವರದಿಯಾಗಿರುವ ಸೋಂಕಿತ ಪ್ರಕರಣ
ವಿಶ್ವದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಷ್ಟ್ರಗಳಲ್ಲಿ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಈವರೆಗೂ 526,072,858 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 6,297,512 ಮಂದಿ ಪ್ರಾಣ ಬಿಟ್ಟಿದ್ದಾರೆ. 495,820,984 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 23,954,362 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.












Click it and Unblock the Notifications