ಉಪ್ರದಲ್ಲಿ ಬಿಜೆಪಿಗೆ ಗೋವು ಮಮ್ಮಿ, ಈಶಾನ್ಯ ರಾಜ್ಯದಲ್ಲಿ ಯಮ್ಮಿ: ಒವೈಸಿ
ಉತ್ತರಪ್ರದೇಶದಲ್ಲಿ ಗೋವನ್ನು ತಾಯಿ ಸಮಾನ ಅನ್ನುವ ಬಿಜೆಪಿ, ಈಶಾನ್ಯ ರಾಜ್ಯಗಳಲ್ಲಿ ಅದು ಜನರ ಆಹಾರ ಕ್ರಮ ಎನ್ನುತ್ತದೆ. ಇದೆಲ್ಲ ಬಿಜೆಪಿಯ ಬೂಟಾಟಿಕೆ ಎಂದಿದ್ದಾರೆ ಮಜ್ಲಿಸ್-ಇ-ಇತೆಹಾದುಲ್ ಮುಸ್ಲಿಮೀನ್ ಸ್ಥಾಪಕ ಅಸಾದುದ್ದೀನ್ ಒವೈಸಿ
ಹೈದರಾಬಾದ್, ಏಪ್ರಿಲ್ 1: ಉತ್ತರಪ್ರದೇಶದಲ್ಲಿ ಕಸಾಯಿ ಖಾನೆಗಳನ್ನು ಮುಚ್ಚಿಸುತ್ತಿರುವ ಕ್ರಮದ ಬಗ್ಗೆ ಆಲ್ ಇಂಡಿಯಾ ಮಜ್ಲಿಸ್-ಇ-ಇತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸ್ಥಾಪಕ ಅಸಾದುದ್ದೀನ್ ಒವೈಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಉತ್ತರಪ್ರದೇಶದಲ್ಲಿ ಗೋವಿಗೆ ಪೂಜ್ಯ ಸ್ಥಾನ ಎನ್ನುತ್ತದೆ. ಅದೇ ಈಶಾನ್ಯ ರಾಜ್ಯಗಳಲ್ಲಿ ಅದು ಆಹಾರದ ಭಾಗ ಎನ್ನುತ್ತದೆ ಎಂದಿದ್ದಾರೆ.
ಎಮ್ಮೆ ಮಾಂಸದ ರಫ್ತಿನಿಂದ ಭಾರತ 26 ಸಾವಿರ ಕೋಟಿ ರುಪಾಯಿ ಗಳಿಸುತ್ತಿದೆ. ಅದರಲ್ಲಿ ಉತ್ತರಪ್ರದೇಶವೊಂದೇ 11 ಸಾವಿರ ಕೋಟಿ ಗಳಿಸುತ್ತದೆ. ಭಾರತ ಸರಕಾರವೇ ಎಮ್ಮೆ ಮಾಂಸದ ರಫ್ತು ಪ್ರೋತ್ಸಾಹಿಸುತ್ತದೆ. ಈ ರೀತಿ ವೈರುಧ್ಯಗಳಿವೆ ಎಂದು ಒವೈಸಿ ಎಎನ್ ಐ ಸುದ್ದಿ ಮಾಧ್ಯಮದ ಬಳಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.['ತಾಕತ್ತಿದ್ರೆ ಮೋದಿ ನನ್ನ ವಿರುದ್ಧ ನಿಂತು ಗೆಲ್ಲಲಿ']

ಇನ್ನೊಂದು ವಿಚಾರ ಏನೆಂದರೆ ಉತ್ತರ ಪ್ರದೇಶದಲ್ಲಿ ಮಮ್ಮಿ (ತಾಯಿ) ಅಂತ ನೋಡ್ತಾರೆ, ಅದೇ ಈಶಾನ್ಯ ರಾಜ್ಯದಲ್ಲಿ ಹಸು ಯಮ್ಮಿ. ಇದು ಬಿಜೆಪಿಯವರ ಬೂಟಾಟಿಕೆ ಅಲ್ಲದೆ ಮತ್ತೇನು? ಬಿಜೆಪಿಗೆ ಯಾವಾಗ ಬೇಕೋ ಆಗ ಹಿಂದುತ್ವ ಪ್ರಚಾರ ಮಾಡುತ್ತದೆ. ಈಶಾನ್ಯದ ಮೂರು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಆ ಕಾರಣಕ್ಕೆ ಗೋ ಮಾಂಸ ಬಳಕೆಗೆ ಏನೂ ತಕರಾರು ಮಾಡಲ್ಲ ಎಂದಿದ್ದಾರೆ.
ನಮಾಜ್ ಹಾಗೂ ಸೂರ್ಯ ನಮಸ್ಕಾರದ ಸಾಮ್ಯತೆ ಬಗ್ಗೆ ಮಾತನಾಡುವ ಬದಲು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿಭಾಯಿಸಲಿ ಎಂದಿರುವ ಒವೈಸಿ, 55 ವರ್ಷಗಳಿಂದ ಇದನ್ನೇ ಕೇಳಿ ಕೇಳಿ ರೋಸತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.[ಭಾರತ್ ಮಾತಾ ಕೀ ಜೈ ಅನ್ನೋಲ್ಲಾ ಎಂದಿದ್ದ ಓವೈಸಿ ಬಾಯಿಯಿಂದ ಜೈಹಿಂದ್]
ಉತ್ತರಪ್ರದೇಶದಲ್ಲಿ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಿಸುತ್ತಿರುವುದರಿಂದ ಬಿಜೆಪಿ ಆಡಳಿತದ ಇತರ ರಾಜ್ಯಗಳಲ್ಲೂ ಇದೇ ಕ್ರಮಕ್ಕೆ ಮುಂದಾಗಿದ್ದಾರೆ. ಕರ್ನಾಟಕದಲ್ಲೂ ಗೋ ಸಂರಕ್ಷಣಾ ಪ್ರಕೋಷ್ಠ ಮತ್ತು ಕರ್ನಾಟಕ ಗೋಶಾಲೆಗಳ ಒಕ್ಕೂಟವು ಅನಧಿಕೃತ 1700 ಮಾಂಸ ಮಾರಾಟ ಮಳಿಗೆಗಳನ್ನು ಮುಚ್ಚಿಸುವಂತೆ ಒತ್ತಾಯಿಸಿರುವುದಾಗಿ ವರದಿಯಾಗಿದೆ.












Click it and Unblock the Notifications