ಜಗನ್ ಮೋಹನ್ ರೆಡ್ಡಿ ಸರ್ಕಾರದಿಂದ ಹೊಸ ದಾಖಲೆ
ಅಮರಾವತಿ, ಅಕ್ಟೋಬರ್ 1: ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರವು ಹೊಸದೊಂದು ದಾಖಲೆ ಸೃಷ್ಟಿಸಿದೆ.
ಸುಮಾರು 1 ಲಕ್ಷ 26 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸುವ ಮೂಲಕ ಆಂಧ್ರಪ್ರದೇಶ ಸರ್ಕಾರ ವಿಶ್ವ ದಾಖಲೆ ನಿರ್ಮಿಸಿದೆ. ಖುದ್ದು ಸಿಎಂ ಜಗನ್ ಮೋಹನ್ ರೆಡ್ಡಿಯವರೇ, ಹೊಸದಾಗಿ ನೇಮಕಗೊಂಡವರಿಗೆ ಆದೇಶ ಪತ್ರ ವಿತರಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ನಕಲಿ ಲೈಸೆನ್ಸ್ ಹೊಂದಿರುವ ಮದ್ಯದಂಗಡಿಗಳ ಮೇಲೆ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರವು ಪ್ರಹಾರ ಆರಂಭಿಸಿದೆ.
ಸಂಪೂರ್ಣ ಮದ್ಯಪಾನ ನಿಷೇಧದತ್ತ ಮಹತ್ವದ ಹೆಜ್ಜೆ ಇಡುತ್ತಿದೆ. ಇಂದಿನಿಂದ ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗುತ್ತದೆ. ಸರ್ಕಾರಿ ಸ್ವಾಮ್ಯದ ಆಂಧ್ರಪ್ರದೇಶ ರಾಜ್ಯ ಬೆವರೇಜಸ್ ಕಾರ್ಪೊರೇಶನ್ ಲಿಮಿಟೆಡ್(ಎಪಿಎಸ್ ಬಿಸಿಎಲ್) ಅಧೀನಕ್ಕೆ ಎಲ್ಲಾ ಮದ್ಯದಂಗಡಿಗಳು ಬರಲಿವೆ ಎಂದು ಉಪ ಮುಖ್ಯಮಂತ್ರಿ, ಅಬಕಾರಿ ಸಚಿವ ನಾರಾಯಣಸ್ವಾಮಿ ಹೇಳಿದ್ದಾರೆ.

ಆಂಧ್ರಪ್ರದೇಶದ ನಿರುದ್ಯೋಗ ಯುವಕರಿಗೆ ಜಗನ್ ಸಿಹಿಸುದ್ದಿ
ಆಂಧ್ರ ಪ್ರದೇಶದ ನಿರುದ್ಯೋಗ ಯುವಕರಿಗೆ ಸಿಎಂ ಜಗನ್ ಮೋಹನ್ ರೆಡ್ಡಿ ಸಿಹಿಸುದ್ದಿ ನೀಡಿದ್ದಾರೆ. ಇನ್ಮುಂದೆ ಪ್ರತಿವರ್ಷವೂ ಸರ್ಕಾರದ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದಾರೆ.

ವೈಎಸ್‌ಆರ್ ಕಾಂಗ್ರೆಸ್‌ನಿಂದ ನಿರುದ್ಯೋಗ ಹೋಗಲಾಡಿಸಲು ಪಣ
ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ನಿರುದ್ಯೋಗ ಹೋಗಲಾಡಿಸುವ ಪಣತೊಟ್ಟಿದೆ. ಹಾಗಾಗಿ ಇನ್ಮುಂದೆ ಯುವಕರಿಗಾಗಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದ್ದೇವೆ. ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ನಡೆಯಲಿವೆ ಎಂದರು.

ಜಗನ್ ಸರ್ಕಾರದ ಮಹತ್ವದ ಯೋಜನೆಗಳು
-ವೃದ್ಧಾಪ್ಯ ವೇತನ 2500 ರುಪಾಯಿಗೆ ಏರಿಕೆ
-ಗ್ರಾಮಸೇವಕರು ಎಂಬ ಹುದ್ದೆ ಮೂಲಕ 4 ಲಕ್ಷ ಉದ್ಯೋಗ ಸೃಷ್ಟಿ
-ಒಂದು ಹಳ್ಳಿಯಲ್ಲಿ ಪ್ರತಿ 50 ಮನೆಗೆ ಒಬ್ಬ ಗ್ರಾಮ ಸೇವಕನ ನೇಮಕ
-ಗ್ರಾಮ ಸೇವಕರಿಗೆ ಪ್ರತಿ ತಿಂಗಳು 5000 ಪಾವತಿಸಲಾಗುತ್ತದೆ
-ಲಂಚಕ್ಕೆ ಒತ್ತಾಯಿಸುತ್ತಿದ್ದಲ್ಲಿ ದೂರು ನೀಡಲು ಕಾಲ್ ಸೆಂಟರ್
-ಗ್ರಾಮ ಸಚಿವಾಲಯವನ್ನು ಸ್ಥಾಪಿಸಲಾಗುತ್ತದೆ
-ದೂರು ನೀಡಿದ 72 ಗಂಟೆಯೊಳಗೆ ಸಮಸ್ಯೆಗೆ ಪರಿಹಾರ
-ಸರ್ಕಾರದ ಆಡಳಿತ ವೈಕರಿಯಲ್ಲಿ ಬದಲಾವಣೆ ಭರವಸೆ
-ಗುತ್ತಿಗೆಯಲ್ಲಿ ಅವ್ಯವಹಾರಕ್ಕೆ ಕಡಿವಾಣ
-ಜಾಗತಿಕ ದರಕ್ಕಿಂತ ಆಂಧ್ರಪ್ರದೇಶದಲ್ಲಿ ವಿದ್ಯುತ್ ದರ ಇಳಿಕೆ

ಮದ್ಯಪಾನ ನಿಷೇಧಕ್ಕೆ ಮುಂದಾದ ಜಗನ್
ಆಂಧ್ರಪ್ರದೇಶದಲ್ಲಿ ನಕಲಿ ಲೈಸನ್ಸ್ ಹೊಂದಿರುವ ಮದ್ಯದಂಗಡಿಗಳ ಮೇಲೆ ಪ್ರಹಾರ ಆರಂಭಿಸಿರುವ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರ, ಸಂಪೂರ್ಣ ಮದ್ಯಪಾನ ನಿಷೇಧದತ್ತ ಮಹತ್ವದ ಹೆಜ್ಜೆ ಇಡುತ್ತಿದೆ. ಇದರ ಪರೋಕ್ಷ ಲಾಭ ಪಕ್ಕದ ರಾಜ್ಯ ಕರ್ನಾಟಕ ಹಾಗೂ ತೆಲಂಗಾಣಕ್ಕೆ ಲಾಭವಾಗಲಿದೆ. ಅಕ್ಟೋಬರ್ ಒಂದರಿಂದ ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗುತ್ತದೆ. ಸರ್ಕಾರಿ ಸ್ವಾಮ್ಯದ ಆಂಧ್ರಪ್ರದೇಶ ರಾಜ್ಯ ಬೆವರೇಜಸ್ ಕಾರ್ಪೊರೇಶನ್ ಲಿಮಿಟೆಡ್(ಎಪಿಎಸ್ ಬಿಸಿಎಲ್) ಅಧೀನಕ್ಕೆ ಎಲ್ಲಾ ಮದ್ಯದಂಗಡಿಗಳು ಬರಲಿವೆ ಎಂದು ಉಪ ಮುಖ್ಯಮಂತ್ರಿ, ಅಬಕಾರಿ ಸಚಿವ ನಾರಾಯಣಸ್ವಾಮಿ ಹೇಳಿದ್ದಾರೆ.

ಆಶಾ ಕಾರ್ಯಕರ್ತರಿಗೆ ಸಿಹಿಸುದ್ದಿ ನೀಡಿದ್ದರು
ಈ ಹಿಂದೆ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವೈ.ಎಸ್ ಜಗನ್ ಮೋಹನ್ ರೆಡ್ಡಿಯವರು, ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಸಿಹಿಸುದ್ದಿ ನೀಡಿದ್ದರು. ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿದ್ದ ಗೌರವ ಧನ ಮೂರು ಸಾವಿರದಿಂದ ದಿಢೀರ್ 10 ಸಾವಿರಕ್ಕೇರಿಸಿ ಅಧಿಕೃತವಾಗಿ ಘೋಷಿಸಿದ್ದರು. ಇದರಿಂದ ಕಡಿಮೆ ಸಂಬಳ ಪಡೆಯುತ್ತಿದ್ದ ತಾಯಂದಿರ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು.

ಒಂದು ಲಕ್ಷ ಸರ್ಕಾರಿ ಉದ್ಯೋಗ
ವೃದ್ಧಾಪ್ಯ ವೇತನ ಹೆಚ್ಚಳ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಕಷ್ಟಪಟ್ಟು ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಭರ್ಜರಿ ಗಿಫ್ಟ್ ನೀಡಿದ್ದರು. ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು, ಸತತ ಹೊಸ ಯೋಜನೆಗಳನ್ನು ಘೋಷಿಸುತ್ತಲೇ ಇದ್ದಾರೆ. ಅಂತೆಯೇ ನಿರುದ್ಯೋಗಿಗಳಿಗೆ 1 ಲಕ್ಷ 26 ಸಾವಿರ ಸರ್ಕಾರಿ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.












Click it and Unblock the Notifications