Hunagund Election: ಕ್ಷೇತ್ರದಲ್ಲಿ ಈ ಸಲವು ತ್ರಿಕೋನ ಸ್ಪರ್ಧೆ ಸಾಧ್ಯತೆ? ಯಾರಿಗೆ ಅದರ ಲಾಭ?
ಬೆಂಗಳೂರು, ಮಾರ್ಚ್ 24: ಬಾಗಲಕೋಟೆ ಜಿಲ್ಲೆ ವ್ಯಾಪ್ತಿಯ ಹುನಗುಂದ ವಿಧಾನಸಭಾ ಕ್ಷೇತ್ರವು ಹೌದು ಮತ್ತು ತಾಲೂಕು ಕೇಂದ್ರವು ಆಗಿದೆ. ಇಲ್ಲಿ ಸದ್ಯ ಬಿಜೆಪಿಯ ಹಾಲಿ ಶಾಸಕ ದೊಡ್ಡನಗೌಡ ಜಿ.ಪಾಟೀಲ್ ಅವರು ಚುನಾಯಿತಿ ಪ್ರತಿನಿಧಿಯಾಗಿದ್ದಾರೆ. ಮುಂಬರಲಿರುವ ಚುನಾವಣೆ 2023 ಹಿನ್ನೆಲೆ ಕ್ಷೇತ್ರ ರಂಗೇರುತ್ತಿದೆ. ಈ ಹುನಗುಂದ ಕ್ಷೇತ್ರದ ಇತಿಹಾಸ, ರಾಜಕೀಯ ಪರಿಚಯ, ಚುನಾವಣಾ ಚಟುವಟಿಕೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಹುನಗುಂದ ಈ ಮೊದಲು ರಾಯಚೂರು ಜಿಲ್ಲೆಯ ಭಾಗವಾಗಿತ್ತು. ಇದು ಪಶ್ಚಿಮದಲ್ಲಿ ಬಾಗಲಕೋಟೆಯನ್ನು ಉತ್ತರದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕನ್ನು ಸುತ್ತುವರಿದಿದೆ. ಕರಡಿ, ಹುನಗುಂದ, ಅಮೀನಗಡ ಮತ್ತು ಇಳಕಲ್ಲು ಹೋಬಳಿಗಳು ಇದರ ವ್ಯಾಪ್ತಿಗೆ ಬರುತ್ತವೆ.

12ನೇ ಶತಮಾನದ ಸಮಾಜ ಸುಧಾರಕ, ಶರಣರಾದ ಬಸವಣ್ಣನವರ ಐಕ್ಯ ಸ್ಥಳ ಇದೇ ತಾಲೂಕಿನಲ್ಲಿದೆ. ಬಾಗಲಕೋಟೆ ಜಿಲ್ಲೆಗಳ ಪೈಕಿ ಹುನಗುಂದ ತುಸು ದೊಡ್ಡ ನಗರವಾಗಿ ಗುರುತಿಸಿಕೊಂಡಿದೆ. ಇಲ್ಲಿ ತಯಾರಾಗುವ ರೇಷ್ಮೇ ಸೀರೆಗಳು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿವೆ. ಗ್ರೆನೈಟ್ ವಹಿವಾಟಿನಲ್ಲಿ ಸಹ ನಗರ ಪ್ರಸಿದ್ಧಿ ಪಡೆದಿದ್ದು, ಗುಲಾಬಿ ಬಣ್ಣದ ಗ್ರೆನೈಟ್‌ಗಳು ವಿದೇಶಕ್ಕೆ ರಫ್ತಾಗುವುದು ಇಲ್ಲಿಯವರಿಗೆ ಹೆಮ್ಮೆಯ ವಿಷಯವಾಗಿದೆ.
ಹುನಗುಂದ ಕ್ಷೇತ್ರದ ರಾಜಕೀಯ ಇತಿಹಾಸ ನೋಡುವುದಾದರೆ, ಕಾಂಗ್ರೆಸ್‌ನ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಸೋತ ಉದಾಹರಣಗಳೇ ಇಲ್ಲವೆನೋ ಎಂಬಷ್ಟರ ಮಟ್ಟಿಗೆ ಇಲ್ಲಿ ಕಾಂಗ್ರೆಸ್ ಪಕ್ಷ ಗೆದ್ದುಬೀಗಿದೆ. ಆದರೆ ದುರದೃಷ್ಟವಶಾತ್ ಕಾಂಗ್ರೆಸ್ ಎದುರು ಪ್ರಬಲವಾಗಿ ನಿಂತ ಬಿಜೆಪಿ 2004, 2008 ಮತ್ತು 2018ರಲ್ಲಿ ಬಹುಮತಗಳಿಂದ ಕೈ ಮುಖಂಡರನ್ನು ಸೋಲಿಸಿದೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಜಿ.ಪಾಟೀಲ್ ವಿರುದ್ಧ ಕಾಂಗ್ರೆಸ್ ನಾಯಕ ವಿಜಯಾನಂದ ಕಾಶಪ್ಪನವರ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಮತ್ತದೇ ನಾಯಕರು ಅದೇ ಪಕ್ಷದಿಂದ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್‌ಗೆ ಸೋಲಾಗಿ ಬಿಜೆಪಿಯ ಅಭ್ಯರ್ಥಿ ದೊಡ್ಡನಗೌಡ ಜಿ.ಪಾಟೀಲ್ ಅವರು ಆಯ್ಕೆಯಾಗಿ ಈವರೆಗೂ ಅವರೆ ಶಾಸಕರಾಗಿ ಆಡಳಿತ ನಡೆಸುತ್ತಿದ್ದಾರೆ.
ಹುನಗುಂದ: ತ್ರಿಕೋನ ಸ್ಪರ್ಧೆ ಯಾರಿಗೆ ಲಾಭ?
ಕಳೆದ ಬಾರಿಯಂತೆ ಈ ಸಲವು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿ ನೆರವೇರಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಬಿಜೆಪಿಯಿಂದ ದೊಡ್ಡನಗೌಡ ಜಿ.ಪಾಟೀಲ್ ಕಣಕ್ಕಿಳಿಯುವ ಮುನ್ಸೂಚನೆ ನೀಡಿದ್ದಾರೆ. ಅವರಿಗೆ ಟಿಕೆಟ್ ಖಚಿತ ಎನ್ನಲಾಗಿದೆ. ಇತ್ತ ಕಾಂಗ್ರೆಸ್‌ನಿಂದ ವಿಜಯಾನಂದ ಕಾಶಪ್ಪನವರು ಕಣಕ್ಕಿಳಿಯಲಿದ್ದಾರೆ. ಪಕ್ಷೇತರ ಅಭ್ಯರ್ಥಿ ಎಸ್.ಆರ್.ನವಲಿ ಹಿರೇಮಠ ಅವರು ಸಹ ಬುಧವಾರ ಮಾರ್ಚ್ 22ರಿಂದ ಬಸವಣ್ಣನವರ ಐಕ್ಯ ಸ್ಥಳದಿಂದಲೇ ಮತಪ್ರಚಾರ ಆರಂಭಿಸಿದ್ದಾರೆ. ಹೀಗಾಗಿ ಮತಗಳು ಒಡೆದು ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2018ರ ಚುನಾವಣೆಯಲ್ಲೂ ನವಲಿ ಹಿರೇಮಠ ಸ್ಪರ್ಧಿಸಿದ್ದರು. ಸುಮಾರು 25 ಸಾವಿರ ಮತ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿ ಸೋತರು. ಕಾಂಗ್ರೆಸ್ ವಿರುದ್ಧ ಇದರ ಲಾಭ ಪಡೆದ ಬಿಜೆಪಿ ಅಧಿಕಾರಕ್ಕೆ ಬಂತು. ಈ ಭಾರಿಯು ಬಿಜೆಪಿ ಅಭ್ಯರ್ಥಿಗಳು ತಾವೇ ಗೆಲ್ಲಬೇಕು ಎಂಬ ಉತ್ಸಾಹದಲ್ಲಿದ್ದಾರೆ. ಅದಕ್ಕಾಗಿಯೇ ಇತ್ತೀಚೆಗಷ್ಟೇ ಈ ಭಾಗದಲ್ಲಿ ಬಿಜೆಪಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದೆ.
ಪಕ್ಷೇತರ ಅಭ್ಯರ್ಥಿ ನವಲಿ ಹಿರೇಮಠ ಅವರು ಕ್ಷೇತ್ರ ತುಂಬೆಲ್ಲ ಕಳೆದ ಐದು ವರ್ಷ ಸತತವಾಗಿ ಸಂಚಾರ ಮಾಡಿದ್ದಾರೆ. ಪ್ರಮುಖರು, ಮತದಾರರ ಜತೆ ನಿರಂತರ ಸಂಪರ್ಕ ಸಾಧಿಸಿದ್ದಾರೆ. ಕೆಲವು ಕಾರ್ಯಕ್ರಮ ಅಭಿವೃದ್ಧಿ ಪರ ಧ್ವನಿಯಾಗಿದ್ದಾರೆ. ಹೀಗಾಗಿ ಅವರ ಪರ ಒಲವು ಹೆಚ್ಚಿದೆ. ಈ ಸಲ ಅವರು ಸುಮಾರು 65 ಸಾವಿರ ಮತ ಗಳಿಸಲಿದ್ದಾರೆ ಎಂಬ ಮಾತುಗಳು ಇವೆ.
ಜಾತಿ ಲೆಕ್ಕಾಚಾರ, ಲಿಂಗಾಯತರು ನೀರ್ಣಾಯಕ
ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರು ಸಮುದಾಯಕ್ಕೆ 2ಎ ಮೀಸಲಾತಿ ಕೊಡಿಸುವ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಮೇಲೆ ಒಂದಷ್ಟು ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಮತಗಳು ಒಡೆಯುವ ಸಾಧ್ಯತೆ ಹೆಚ್ಚಿದೆ. ಈ ತ್ರಿಕೋನ ಸ್ಪರ್ಧೆ 2023ರ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರವು ಕೆಲಸ ಮಾಡಲಿದೆ. ಇವೆಲ್ಲ ಅಂಶಗಳು ಯಾರಿಗೆ ಫಲಪ್ರದವಾಗಿದೆ ಎಂದು ಕಾದು ನೋಡಬೇಕಿದೆ.
ಚುನಾವಣೆ ದಿನಾಂಕ ಇನ್ನು ಘೋಷಣೆ ಆಗಬೇಕಿದೆ. ಹುನಗುಂದ ಕ್ಷೇತ್ರದಲ್ಲಿ ಲಿಂಗಾಯತರು ಪಂಚಮಸಾಲಿ ಸಮುದಾಯ ಬಹುಸಂಖ್ಯಾರಾಗಿದ್ದು, ಬಣಿಜಿಗ, ಗಾಣಿಗ, ಕುರುಬ ಹಾಗೂ ಅಲ್ಪ ಸಂಖ್ಯಾತರು ಎಸ್ ಸಿ,ಎಸ್ ಟಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಮತಗಳು ಎಲ್ಲರಿಗೂ ಮುಖ್ಯವಾಗಿದೆ. ಇಲ್ಲಿ ರೆಡ್ಡಿ ಜನಾಂಗದವರ ಪ್ರಭಾವ ಇದ್ದರೂ ಸಹ, ಕುರುಬ, ಲಿಂಗಾಯತ ಹಾಗೂ ಎಸ್ ಸಿ,ಅಲ್ಪ ಸಂಖ್ಯಾತರು ನಿರ್ಣಾಯಕರಾಗಿದ್ದಾರೆ.
ಹುನಗುಂದ ಫಲಿತಾಂಶ ಪಟ್ಟಿ
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2013 | ವಿಜಯಾನಂದ ಕಾಶಪ್ಪನವರ | 72,720 | ದೊಡ್ಡನಗೌಡ ಜಿ.ಪಾಟೀಲ್ | 56,923 |
| 2018 | ದೊಡ್ಡನಗೌಡ ಜಿ.ಪಾಟೀಲ್ | 65,012 | ವಿಜಯಾನಂದ ಕಾಶಪ್ಪನವರ | 59,785 |












Click it and Unblock the Notifications