ಹುಬ್ಬಳ್ಳಿ: ಸರ್ಕಾರಿ ಶಾಲೆಗಳ ಅಂದ ಹೆಚ್ಚಿಸಿದ ಮಹಿಳಾ ತಂಡ, ಭಾರೀ ಮೆಚ್ಚುಗೆ
ಹುಬ್ಬಳ್ಳಿ, ಜೂನ್, 21: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳು ಅಂದರೆ ಬಹುತೇಕ ಮಂದಿ ತಿರಸ್ಕಾರ ಮನೋಭಾವದಿಂದ ಕಾಣುತ್ತಾರೆ. ಆದರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಹಿಳೆಯರ ತಂಡವೊಂದು ಸರ್ಕಾರಿ ಶಾಲೆಗಳಿಗೆ ಮರು ಜೀವ ತುಂಬುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದೆ.
ಈ ತಂಡವು ಪಾಠ ಕಲಿಕೆ ಕೊಠಡಿಗಳಿಗೆ ಬಣ್ಣ ಹಚ್ಚುವ ಮೂಲಕ ವಿದ್ಯಾರ್ಥಿಗಳ ಜೀವನವನ್ನು ಕೂಡ ಕಲರ್ ಫುಲ್ ಆಗಿ ಮಾಡುತ್ತಿದೆ. ಅಲ್ಲದೆ "ತುಕ್ಕು ಹಿಡಿಯುವುದಕ್ಕಿಂತ ಸವೆದು ಹೋಗುವುದೇ ಲೇಸು" ಎಂಬ ಧ್ಯೇಯ ವಾಕ್ಯದ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

ಸರ್ಕಾರಿ ಶಾಲೆಗಳಿಗೆ ಮರುಜೀವ ಕೊಡುತ್ತಿರುವ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವ ಹೆಣ್ಣುಮಕ್ಕಳ ತಂಡವೇ ಸೋದರಿ ನಿವೇದಿತಾ ಪ್ರತಿಷ್ಠಾನ ಆಗಿದೆ. ಇವರು ಹುಬ್ಬಳ್ಳಿಯ ಕುಸುಗಲ್ ಗ್ರಾಮದಲ್ಲಿ 1964ರಲ್ಲಿ ನಿರ್ಮಾಣವಾದ ನೂರೊಂದಪ್ಪ ಬಾಲಕರ ಸರ್ಕಾರಿ ಪ್ರೌಢ ಶಾಲಾ ಕಟ್ಟಡಕ್ಕೆ ಈ ಮಹಿಳೆಯರ ತಂಡವು ಬಣ್ಣ ಹಚ್ಚುವ ಸೇವಾ ಕಾರ್ಯವನ್ನು ಮಾಡುತ್ತಿದೆ. ಎರಡು ದಿನಗಳ ಕಾಲ 15 ಜನರು ಬಣ್ಣ ಬಳೆದು ಈ ಸರ್ಕಾರಿ ಶಾಲೆಯ ಅಂದವನ್ನು ಹೆಚ್ಚಿಸಿದ್ದಾರೆ.
ಇನ್ನು ಸೋದರಿ ನಿವೇದಿತಾ ಪ್ರತಿಷ್ಠಾನವು ಹೆಣ್ಣು ಮಕ್ಕಳ ಸಂಘಟನೆಯಾಗಿದ್ದು, ಕೆಲಸದ ಮಧ್ಯೆಯೂ ವಾರಾಂತ್ಯದಲ್ಲಿ ಸೇವಾ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದಾರೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಈ "ಪ್ರತಿಷ್ಠಾನ"ವು ರಾಜ್ಯಾದ್ಯಂತ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿದೆ. ಈ ಸೋದರಿ ನಿವೇದಿತಾ ಪ್ರತಿಷ್ಠಾನದಲ್ಲಿ ಶೋಭಾ ಕಂಪ್ಲಿ, ಶ್ರದ್ಧಾ, ಭವ್ಯ, ಪ್ರಿಯಾ, ವಂದನಾ, ವೀಣಾ, ರಶ್ಮಿ, ಪವಿತ್ರಾ, ಮಧು, ಯತಿಶ, ವಿಜ್ಞೇಶ್, ಮಂಜುನಾಥ್, ಪ್ರಶಾಂತ, ಜಯಶ್ರೀ, ಅಶ್ವಿನಿ ಕುಲಕರ್ಣಿ, ಶ್ರೀನಿಧಿ ದೇಶಪಾಂಡೆ ಇದ್ದಾರೆ.
ಈ ಒಂದು ತಂಡ ವಿಶೇಷವಾಗಿ ಹಳ್ಳಿಯಲ್ಲಿರುವಂತಹ ಬಹುತೇಕ ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚಿ ಕಂಗೊಳಿಸುವಂತೆ ಮಾಡಿದ್ದಾರೆ. ಈ ಮೂಲಕ ಮಕ್ಕಳಿಗೆ ಆಕರ್ಷಣೆಯಾಗುವಂತೆ ಇಡೀ ಶಾಲೆಯ ಅಂದವನ್ನು ಹೆಚ್ಚಿಸುತ್ತಿದ್ದಾರೆ. ಅಲ್ಲದೆ ಇವರ ಸಮಾಜಮುಖಿ ಕಾರ್ಯಕ್ಕೆ ಹುಬ್ಬಳ್ಳಿ-ಧಾರವಾಡ ಜನರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.












Click it and Unblock the Notifications