ಜಮೀನು ಇಲ್ಲದಿದ್ದರೂ 77 ತಳಿ ರಾಗಿ ಬೆಳೆದ ಮಹಿಳೆಯರು: ಸಾಮೂಹಿಕ ಕೃಷಿಯ 'ಯಶೋಗಾಥೆ'
ಹುಬ್ಬಳ್ಳಿ, ಮೇ 29: ಇಂದಿನ ದಿನಗಳಲ್ಲಿ ವಿದ್ಯಾವಂತರು ಸೇರಿದಂತೆ ಅದೇಷ್ಟೊ ಮಂದಿ ಕೃಷಿಯತ್ತ ಒಲವು ಹೊಂದಿರುತ್ತಾರೆ. ಆದರೆ ಅವರಿಗೆ ವ್ಯವಸಾಯ ಮಾಡಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಲು ಕೃಷಿ ಜಮೀನು ಇರುವುದಿಲ್ಲ. ಇಂತದ್ದೆ ಸ್ಥಿತಿಯಲ್ಲಿದ್ದ ಧಾರವಾಡ ಜಿಲ್ಲೆಯ ಮಹಿಳೆಯರು ಜಮೀನು ಲೀಸ್ ಪಡೆದು ಕೃಷಿ ಮಾಡಿ ಮಾದರಿಯಾಗಿದ್ದಾರೆ.
ಹೌದು, ಕೂಲಿಯಾಳಾಗಿ ದುಡಿದು ಜಮೀನನ್ನು ಲೀಸ್‌ಗೆ ಪಡೆದು ಸಾವಯವ ಪದ್ಧತಿಯಲ್ಲಿ ಸಿರಿಧಾನ್ಯ ಬೆಳೆದು ಎಲ್ಲರೂ ಗಮನ ಸೆಳೆಯುವಂತೆ ಮಾಡಿದವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಮತ್ತಿಕಟ್ಟಿ ಗ್ರಾಮದ ನಿವಾಸಿ ರತ್ನಾ ಪ್ರಕಾಶ್ ಹೊಸಳ್ಳಿ ಅವರು.

ವಿನಾಯಕ ಸ್ತ್ರೀ ಶಕ್ತಿ ಸಂಘದ ಸಂಚಾಲಕಿಯು ಆಗಿರುವ ರತ್ನಾ ಪ್ರಕಾಶ ಹೊಸಳ್ಳಿ ಅವರ ನೇತೃತ್ವದಲ್ಲಿ ಕೃಷಿಯಲ್ಲಿ ಮಾದರಿ ಕಾರ್ಯ ಆಗಿದೆ. ರಾಗಿಯಲ್ಲಿ ಇಷ್ಟೊಂದು ತಳಿಗಳು ಇವೆ ಎಂಬುದರ ಬಗ್ಗೆ ಕೃಷಿ ಲೋಕಕ್ಕೆ ಅವರು ಪರಿಚಯ ಮಾಡಿಕೊಟ್ಟಿದ್ದಾರೆ.
ವಿನಾಯಕ ಸ್ತ್ರೀ ಸಂಘದ ಮಹಿಳೆಯರು
ವಿನಾಯಕ ಸ್ತ್ರೀ ಸಂಘದ ಮಹಿಳೆಯರ 20 ವರ್ಷದ ಸಾಮೂಹಿಕ ಕೃಷಿ, ಸಾಧನೆ ಕಂಡು ಸಹಜ ಸಮೃದ್ಧಿಯವರು ರಾಗಿ ತಳಿಗಳ ಬೀಜವನ್ನು ನೀಡಿ ಅವರನ್ನು ಪ್ರೋತ್ಸಾಹಿಸಿದೆ. ಗೇಣಿ ಪಡೆದ ಜಮೀನಿನಲ್ಲಿ ಸಿರಿಧಾನ್ಯ ಬೆಳೆಯಲು ಆರಂಭಿಸಿ ಸ್ವಾವಲಂಬನೆಯ ಹಾದಿ ತುಳಿದಿದ್ದಾರೆ.

ಇದೇ ಸಂದರ್ಭದಲ್ಲಿ 2021ರಲ್ಲಿ ಸಹಜ ಸಮೃದ್ಧವಾಗಿ 77 ತಳಿ ರಾಗಿಯನ್ನು ಬೀಜಕ್ಕಾಗಿ ಬೆಳೆಯುವ ಪದ್ಧತಿಯನ್ನು ಸಂಘಟ ಒಪ್ಪಿಕೊಂಡಿತು. ಪರಿಣಾಮವೇ ಇಂದು ನಮ್ಮ ಲೀಸ್ ಹೊಲದಲ್ಲಿ ರಾಗಿಯ 77 ತಳಿಯ ತಾಕುಗಳು ನಿರ್ಮಾಣವಾಗಿ ಸಾವಯವ ಪದ್ಧತಿಯಲ್ಲಿ ಪ್ರತಿವರ್ಷ 2 ಕ್ವಿಂಟಲ್‌ನಷ್ಟು ರಾಗಿಯ ಬೀಜಗಳನ್ನು ಬೆಳೆಯಲಾಗುತ್ತಿದೆ.
24ವರ್ಷದ ಹಿಂದೆ ಸಂಘ ಆರಂಭ
'10 ರೂಪಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ 13 ಮಂದಿ ಮಹಿಳೆಯರು ಕೂಡಿಕೊಂಡು 2000ನೇ ಇಸವಿಯಲ್ಲಿ ಸಂಘ ಕಟ್ಟಿದರು. 10 ರೂಪಾಯಿ ನಂತರ ಅದು ತಿಂಗಳಿಗೆ 50 ರೂಪಾಯಿ, ಹಾಗೇ ಮುಂದೆ 100, 200 ರೂಪಾಯಿ ವಿನಿಯೋಗಿಸಿ ಸ್ವಸಹಾಯ ಸಂಘವನ್ನು ನಡೆಸುತ್ತಾ ಬಂದರು.
ಈ ಸಂಘದಲ್ಲಿ ಕೆಲವರು ಸಾಲ ಪಡೆದು ಮನೆಯಲ್ಲೇ ಗೃಹೋದ್ಯಮ, ಟೇಲರಿಂಗ್ ಆರಂಭಿಸಿದರು. ಮುಂದೆ ಜಮೀನನ್ನೇ ಗೇಣಿಗೆ ಪಡೆದು ಶೇಂಗಾ, ಸಿರಿಧಾನ್ಯ ಬೆಳೆಯಲು ಆರಂಭಿಸಿದರು.
ಬೀಜಕ್ಕಾಗಿ ರಾಗಿ ಬೆಳೆಯಲು ಮುಂದಾದ ಮಹಿಳೆಯರು
2021ರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ₹1 ಲಕ್ಷ ಪ್ರೋತ್ಸಾಹ ಹಣ ದೊರೆತಾಗ ₹50 ಸಾವಿರ ನೀಡಿ ಅರ್ಧ ಎಕರೆ ಜಮೀನನ್ನು 2 ವರ್ಷಕ್ಕೆ ಲೀಸ್‌ಗೆ ಪಡೆದು ರಾಗಿಯ 77 ತಳಿಯನ್ನು ಬೆಳೆಯಲು ಆರಂಭಿಸಿದೆವು. ಹೇಗೆ ಬೆಳೆಯಬೇಕು ಎಂಬುದನ್ನು ಸಹಜ ಸಮೃದ್ದದವರೇ ಮಾರ್ಗದರ್ಶನ ನೀಡಿದರು. ಈ ರಾಗಿಗಳನ್ನು ಬೀಜಕ್ಕಾಗಿ ಬೆಳೆದು ನೀಡಬೇಕಿರುವುದರಿಂದ ವಿಶೇಷ ಮುತುವರ್ಜಿ ವಹಿಸಬೇಕಿರುತ್ತದೆ.
ತಳಿಗಳು ಮಿಶ್ರವಾಗುವಂತಿಲ್ಲ. ಅದಕ್ಕಾಗಿ ಒಂದು ರಾಗಿ ತಳಿಯ ತಾಕಿನಿಂದ ಇನ್ನೊಂದು ತಾಕಿಗೆ ಹೆಚ್ಚಿನ ಜಾಗ ಬಿಡುವುದು ಅನಿವಾರ್ಯ. ಆಗ ನಾವು ಆಗ ಜಾಗವನ್ನು ವ್ಯರ್ಥ ಮಾಡದೆ ಎಳ್ಳನ್ನು ಬೆಳೆದೆವು. ಮಳೆಯ ಕೊರತೆಯಿಂದ ಬೆಳೆಯಲ್ಲಿ ಕೊಂಚ ಹಿನ್ನೆಡೆ ಅನಿಸಿದರೂ ನಷ್ಟವೇನು ಆಗಲಿಲ್ಲ.
ಜಮೀನಿಲ್ಲದಿದ್ದರೂ 'ಸಾಮೂಹಿಕ ಕೃಷಿ'
ಸ್ವಂತ ಜಮೀನಿಲ್ಲದಿದ್ದರೂ 'ಸಾಮೂಹಿಕ ಕೃಷಿ' ಮೂಲಕ ಗೇಣಿ, ಲೀಸ್ ಹೊಲದಲ್ಲಿ ಸ್ವಾವಲಂಬನೆ ಕಂಡುಕೊಂಡಿದ್ದಾರೆ. ವಿನಾಯಕ ಸ್ತ್ರೀ ಶಕ್ತಿ ಸಂಘದ ಮಹಿಳೆಯರು. ಕೂಲಿಯಾಳಾಗಿ ದುಡಿದವರ ಸಾಮೂಹಿಕ ಕೃಷಿಯ 'ಯಶೋಗಾಥೆ' ಗುರುತಿಸಿ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳೂ ವಿನಾಯಕ ಸ್ತ್ರೀ ಶಕ್ತಿ ಸಂಘಕ್ಕೆ ಲಭಿಸಿವೆ ಎಂದು ರತ್ನಾ ಅವರು ಮಾಹಿತಿ ನೀಡಿದರು.
ರಾಗಿಯ 77 ತಳಿಯಲ್ಲಿ ಒಂದೊಂದು ತಳಿಯ 50-100 ಗ್ರಾಮ್‌ನಿಂದ ಒಟ್ಟಾರೆ 2 ಕ್ವಿಂಟಲ್‌ನಷ್ಟು ರಾಗಿಯ ಬೀಜವನ್ನು ಬೆಳೆದು ಕೊಡಲಾಗಿದೆ. ಇದರಿಂದ ನಮ್ಮ ನೆಲದ ಸಿರಿಧಾನ್ಯ ತಳಿಯ ಸಂರಕ್ಷಿಸಿದ ಸಂತೃಪ್ತಿಯೂ ನಮಗಿದೆ ಎಂದು ಅವರು ತಿಳಿಸಿದರು.
ರಾಗಿಯ 77 ತಳಿಗಳ ಮಾಹಿತಿ ಇಲ್ಲಿದೆ
ಮಳಲಿ ರಾಗಿ, 22 ತೆನೆ ರಾಗಿ, 23 ತೆನೆ ರಾಗಿ, ಪಿಚ್‌ಕಟ್ಟಿ ರಾಗಿ, ಕೆಂಪು ತೆನೆ ರಾಗಿ, ಬೆಟ್ಟದ ಕೆಳಗಿನ ರಾಗಿ, ಗುತ್ತಿ ರಾಗಿ, ಮೂರು ತಿಂಗಳ ರಾಗಿ, ಉಂಡೆ ರಾಗಿ, ಜಗಳೂರು ರಾಗಿ, ಹಸಿರು ಕಡ್ಡಿ ರಾಗಿ, ನಾಕು ರಾಗಿ, ಜೇನು ಮುಂಡಗ ರಾಗಿ, ಹಸಿರು ಕಂಬಿ ರಾಗಿ, ಮಧ್ಯಮ ರಾಗಿ, ಅಯ್ಯನ ರಾಗಿ, ಉಗಾಂಡಾ ರಾಗಿ, 140 ದಿನದ ರಾಗಿ, ಕೋಳಿ ಮೊಟ್ಟೆ ರಾಗಿ.
ತೆನೆಮುದ್ದೆ ರಾಗಿ, ಬೊಂಡಾ ರಾಗಿ, ದೊಡ್ಡ ರಾಗಿ, ಹಾಲುಕುಳಿ ರಾಗಿ, ರಾಗಳ್ಳಿ- ಶಿವಳ್ಳಿ ರಾಗಿ, ಕಲ್ಲು ರಾಗಿ, ತೈದಳು ರಾಗಿ, ನೇಪಾಲ ರಾಗಿ, ಕರಿಕಡ್ಡಿ ರಾಗಿ, ನಾಶಿನಿ ರಾಗಿ, ಮಜ್ಜಿಗೆ ರಾಗಿ, ಯಾಡಾ ರಾಗಿ, ವಿಶಾಕಪಟ್ಟಣ ರಾಗಿ, ಗೆಜ್ಜೆ ರಾಗಿ, ಜೇನುಗೂಡು ರಾಗಿ, ಉದುರು ಮಲ್ಲಿಗೆ ರಾಗಿ, ಜಡೆ ರಾಗಿ, ಜೇನ ಗೌಡ್ರ ರಾಗಿ, ಬೆಣ್ಣೆ ಮುದ್ದೆ ರಾಗಿ ಸಮೇತ 77 ತಳಿಯ ರಾಗಿಯನ್ನು ವಿನಾಯಕ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಸಾಮೂಹಿಕ ಕೃಷಿಯಲ್ಲಿ ಬೆಳೆದಿದ್ದಾರೆ.












Click it and Unblock the Notifications