ಮಹದಾಯಿ ಸಮಾವೇಶ; ಕಾಂಗ್ರೆಸ್‌ಗೆ ಪ್ರಹ್ಲಾದ್ ಜೋಶಿ ಪ್ರಶ್ನೆಗಳು
ಹುಬ್ಬಳ್ಳಿ, ಜನವರಿ 02; "ಕರ್ನಾಟಕಕ್ಕೆ ಹನಿ ನೀರು ಕೊಡಲ್ಲ ಎಂದಿದ್ದ ಸೋನಿಯಾ ಗಾಂಧಿ ಅವರ ಪಕ್ಷ, ಯಾವ ಪುರುಷಾರ್ಥಕ್ಕಾಗಿ ಮಹದಾಯಿ ಸಮಾವೇಶ ಮಾಡುತ್ತಿದೆ" ಎಂದು ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.
ಸೋಮವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ ಮಹದಾಯಿ ಸಮಾವೇಶ ನಡೆಸುತ್ತಿರುವ ಕಾಂಗ್ರೆಸ್ ನಡೆಯನ್ನು ಖಂಡಿಸಿದರು. ಮಹದಾಯಿ ಸಮಾವೇಶ ಕುರಿತು ಪ್ರತಿಕ್ರಿಯಿಸಿದ ಅವರು, "ಮಹದಾಯಿ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಕಾಂಗ್ರೆಸ್ ಕೊಡುಗೆ ಏನು?" ಎಂದು ಕೇಳಿದರು.

ಗೋವಾದ ಕಾಂಗ್ರೆಸ್ ಸರ್ಕಾರ; "ಕುಡಿಯುವ ನೀರಿಗೋಸ್ಕರ ನಾವು ಕಾಲುವೆ ಕಟ್ಟಿದರೆ, ಕಾಲುವೆಗೆ ನೀರು ಹೋಗದಂತೆ ಗೋಡೆ ಕಟ್ಟಿದವರು ಗೋವಾದ ಕಾಂಗ್ರೆಸ್ ಸರ್ಕಾರ. ಕರ್ನಾಟಕಕ್ಕೆ ಮಹದಾಯಿಯ ಒಂದು ಹನಿ ನೀರನ್ನು ಕೊಡಲ್ಲ ಎಂದು ಗೋವಾಗೆ ಹೋಗಿ ಭಾಷಣ ಮಾಡಿದವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ" ಎಂದು ಜೋಶಿ ಟೀಕಿಸಿದರು.
"ಮನಮೋಹನ್ ಸಿಂಗ್‌ಗೆ ನಾವೆಲ್ಲ ಹೋಗಿ ಕುಡಿಯುವ ನೀರನ್ನು ಬಿಟ್ಟು ಉಳಿದಿದ್ದನ್ನು ಟ್ರಿಬುನಲ್‌ಗೆ ವಹಿಸಿ ಎಂದು ಮನವಿ ಮಾಡಿದೆವು. ಆದರೆ ಅಂದು ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ಸಮಸ್ಯೆ ಬಗೆಹರಿಸದೆ ಮಹದಾಯಿ ವಿವಾದವನ್ನು ಟ್ರಿಬುನಲ್‌ಗೆ ವಹಿಸಿದರು. ಈಗ ಯಾವ ಪುರುಷಾರ್ಥಕ್ಕಾಗಿ ಕಾಂಗ್ರೆಸ್ ಹುಬ್ಬಳ್ಳಿಯಲ್ಲಿ ಮಹದಾಯಿ ಸಮಾವೇಶ ನಡೆಸುತ್ತಿದೆ?" ಎಂದರು.
"2006ರಲ್ಲಿ ಲೋಕಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಮೂಲಕ ಕುಡಿಯುವ ನೀರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಾನು ಒತ್ತಾಯಿಸಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಳಸಾ ಬಂಡೂರಿ ಯೋಜನೆ ಸಿದ್ಧಪಡಿಸಿದರೆ ಅದರ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋಗಿದ್ದು ಗೋವಾದ ಕಾಂಗ್ರೆಸ್ ಸರ್ಕಾರ. ಮಹದಾಯಿಗಾಗಿ ರೈತರು ಬೃಹತ್ ಹೋರಾಟ ಕೈಗೊಂಡಾಗ, ಮಹಿಳೆಯರ ಮೇಲೆ, ರೈತರ ಮೇಲೆ ಲಾಠಿಚಾರ್ಜ್ ಮಾಡಿಸಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ" ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದರು.

ಕೊಡುಗೆ ನೀಡಿದ್ದು ಬಿಜೆಪಿ; "ಮಹದಾಯಿ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಕೊಡುಗೆ ನೀಡಿದ್ದರೆ ಅದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಟ್ರಿಬುನಲ್ ಅವಾರ್ಡ್ ಬಳಿಕ ಅದನ್ನು ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು ನರೇಂದ್ರ ಮೋದಿಯವರು. ಅಲ್ಲದೇ ಇದೀಗ ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕಳಸಾ ಬಂಡೂರಿ ಯೋಜನೆಯ ಡಿಪಿಆರ್‌ಗೂ ಅನುಮತಿ ನೀಡಿದೆ" ಎಂದು ಜೋಶಿ ಹೇಳಿದರು.
"ಎರಡೂವರೆ ತಿಂಗಳೊಳಗೆ ಕಳಸಾ ಬಂಡೂರಿ ಯೋಜನೆ ಕಾಮಗಾರಿ ಆರಂಭಿಸಲು ಶಂಕುಸ್ಥಾಪನೆ ನೆರವೇರಿಸುವುದಾಗಿ ಸ್ವತಃ ಮುಖ್ಯಮಂತ್ರಿಗಳು, ನೀರಾವರಿ ಸಚಿವ ಗೋವಿಂದ ಕಾರಜೊಳ ಸ್ಪಷ್ಟಪಡಿಸಿದ್ದಾರೆ. ಫಾರೆಸ್ಟ್ ಕ್ಲಿಯರೆನ್ಸ್ ಕೂಡ ರಾಜ್ಯ ಸರ್ಕಾರದ ಮಟ್ಟದಲ್ಲೇ ತೆಗೆದುಕೊಳ್ಳಲು ಅವಕಾಶವಿದೆ. ಹೀಗಿರುವಾಗ ಕಾಂಗ್ರೆಸ್ ಯಾವ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಮಹದಾಯಿ ಸಮಾವೇಶ ನಡೆಸುತ್ತಿದೆ?" ಎಂದರು.
"ಡಿಪಿಆರ್‌ಗೆ ಕೇಂದ್ರ ಅನುಮೋದನೆ ನೀಡಿದ ಆದೇಶದಲ್ಲಿ ದಿನಾಂಕ ಇಲ್ಲ ಎಂದು ಎಚ್. ಕೆ. ಪಾಟೀಲ್ ಹೇಳಿದರು. ಎಲ್ಲರಿಗು ಸಿಕ್ಕಿರುವ ದಿನಾಂಕ ಇವರಿಗೆ ಮಾತ್ರ ಸಿಗಲಿಲ್ಲವೇ?. ಎಚ್. ಕೆ. ಪಾಟೀಲ್ ನೀರಾವರಿ ಸಚಿವರಾಗಿ ಪುಸ್ತಕ ಬರೆಸಿದ್ದು ಬಿಟ್ಟರೆ ಬೇರೆ ಏನು ಮಾಡಲಿಲ್ಲ" ಎಂದು ಲೇವಡಿ ಮಾಡಿದರು.
ಡಿಪಿಆರ್‌ಗೆ ಅನುಮೋದನೆ; ಹುಬ್ಬಳ್ಳಿ-ಧಾರವಾಡ, ಗದಗ, ನರಗುಂದ, ನವಲಗುಂದ ಸೇರಿದಂತೆ 13 ಪಟ್ಟಣ ಮತ್ತು ನೂರಕ್ಕೂ ಅಧಿಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಮಹದಾಯಿ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ ಗೋವಾ, ಮಹಾರಾಷ್ಟ್ರ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ.
ಕೇಂದ್ರ ಜಲ ಆಯೋಗವು ಕಳಸಾ ಬಂಡೂರಿ ನಾಲೆಗಳ ಮೂಲಕ ಮಹದಾಯಿ ನೀರು ಒದಗಿಸುವ ಯೋಜನೆಯ ವಿಸ್ತ್ರತ ಯೋಜನಾ ವರದಿ (ಡಿಪಿಆರ್)ಗೆ ಅನುಮೋದನೆ ನೀಡಿದೆ. ಇದು ಈಗ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ.











Click it and Unblock the Notifications