ಬಿಜೆಪಿಯಲ್ಲಿ ಕೆಲವರಿಗೆ ಅನ್ಯಾಯ ಆಗಿದೆ, ಆದ್ರೆ ಪಕ್ಷ ತೊರೆಯುವ ಪ್ರಶ್ನೆ ಇಲ್ಲ-ಪ್ರದೀಪ್ ಶೆಟ್ಟರ್
ಹುಬ್ಬಳ್ಳಿ, ಸೆಪ್ಟೆಂಬರ್ 19: ಭಾರತೀಯ ಜನತಾ ಪಕ್ಷದದಲ್ಲಿ ಕೆಲವರಿಗೆ ಅನ್ಯಾಯ ಆಗುತ್ತಿದೆ. ಕೆಲವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಆದರೆ ಬಿಜೆಪಿ ತೊರೆಯುವ ಪ್ರಶ್ನೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿದರು.
ನಗರದ ಈದ್ಗಾ ಮೈದಾನದಲ್ಲಿ ಸೋಮವಾರ ಪ್ರತಿಷ್ಠಾನೆಗೊಂಡ ಗಣೇಶ ದರ್ಶನ ಪಡೆದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯ ತಿಳಿಸಿದರು. ಕಳೆದ ವರ್ಷ ಸಹ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ವರ್ಷವೂ ಸಹ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ ಎಂದರು.

ಕಳೆದ ಹತ್ತು ದಿನಗಳ ಕಾಲ ವಿಧಾನ ಪರಿಷತ್ ವತಿಯಿಂದ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ನಾನು ಪಂಜಾಬ್, ಛತ್ತಿಸಗಡ್ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದ್ದೆ. ಅದಕ್ಕೆ ಹೋರಾಟಕ್ಕೆ ಬರಲಾಗಲಿಲ್ಲ ಎಂದ ಅವರು ನನಗೆ ಭಾರತೀಯ ಜನತಾ ಪಕ್ಷದ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಕಳೆದ ಬಾರಿ ಪಕ್ಷದ ಕಚೇರಿಗೆ ಭೇಟಿ ನೀಡಿದಾಗ ಎಲ್ಲವನ್ನೂ ಚರ್ಚೆ ಮಾಡಲಾಗಿದ್ದು, ಎಲ್ಲವೂ ಸರಿಯಾಗಿದೆ. ಯಾವುದೇ ಅಸಮಾಧಾನ ನನಗೆ ಇಲ್ಲ ಎಂದರು.
ಕೋರ್ ಕಮಿಟ್ ಸಭೆಗೆ ಗೈರು ಹಾಜರಾದ ಕುರಿತು ಸ್ಪಷ್ಟಪಡಿಸಿದ ಪ್ರದೀಪ್ ಶೆಟ್ಟರ್, ಯಾವುದೇ ರೀತಿಯ ಅಸಮಾಧಾನ ಇಲ್ಲ. ನಮ್ಮ ವಿಧಾನ ಪರಿಷತ್ ಸಮಿತಿ ಪ್ರವಾಸಕ್ಕೆ ಹೋಗಿದ್ದೆ. ಹೀಗಾಗಿ ಪಕ್ಷದ ಸಭೆಗೆ ಹಾಜರಾಗಲಿಲ್ಲ ಎಂದು ತಿಳಿಸಿದರು.
ಚೈತ್ರಾ ಕುಂದಾಪುರ ಭಾರತೀಯ ಜನತಾ ಪಕ್ಷದ ಟಿಕೆಟ್ ಕೊಡಿಸುವ ವಿಷಯದಲ್ಲಿ ವಂಚನೆ ಮಾಡಿರುವ ಕುರಿತು ಮಾತನಾಡಿದ ಅವರು, ಈ ಕುರಿತು ತನಿಖೆ ನಡೆಯುತ್ತಿದೆ. ಆ ಬಗ್ಗೆ ನಾನು ಸಹ ಮಾಧ್ಯಮಗಳಲ್ಲಿ ನೋಡಿದೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗುತ್ತದೆ ಎಂದರು.
ಇನ್ನು ನಾನು ಪಕ್ಷ ತೊರೆಯುವ ನಿರ್ಧಾರ ಕುರಿತು ಯಾವುದೇ ರೀತಿಯ ಮಾತನಾಡಿಲ್ಲ. ಪಕ್ಷದಲ್ಲಿ ಕೇಲವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಹಾಗೆ ಆಗಬಾರದು ಎಂದು ಹೇಳಿದೆ. ಭಾರತೀಯ ಜನತಾ ಪಕ್ಷ ಹಾಗೂ ಜಾತ್ಯಾತೀತ ಜನತಾದಳ ಪಕ್ಷದ ಮೈತ್ರಿ ಕುರಿತು ಮಾತನಾಡಿದ ಅವರು ಪಕ್ಷದ ಹಿರಿಯ ನಾಯಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.












Click it and Unblock the Notifications