ಕರ್ನಾಟಕಕ್ಕೆ ಹಲವು ಹೊಸ ರೈಲುಗಳ ಘೋಷಣೆ
ಹುಬ್ಬಳ್ಳಿ, ಡಿಸೆಂಬರ್ 18 : ಕರ್ನಾಟಕಕ್ಕೆ ಹಲವು ಹೊಸ ರೈಲುಗಳನ್ನು ಘೋಷಣೆ ಮಾಡಲಾಗಿದೆ. ರಾಜ್ಯಕ್ಕೆ ಹೊಸ ವರ್ಷದ ಉಡುಗೊರೆ ನೀಡಲಾಗಿದ್ದು, 2020ರಲ್ಲಿ ಹೊಸ ರೈಲುಗಳ ಸಂಚಾರದ ದಿನಾಂಕ, ವೇಳಾಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆ ಇದೆ.
ಹುಬ್ಬಳ್ಳಿಯಲ್ಲಿ ಮತನಾಡಿದ ಬೆಳಗಾವಿ ಸಂಸದ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೊಸ ರೈಲುಗಳನ್ನು ಘೋಷಣೆ ಮಾಡಿದರು. "ಹುಬ್ಬಳ್ಳಿ-ಬೆಂಗಳೂರು ನಡುವೆ ಐದು ತಾಸಿನಲ್ಲಿ ಸಂಚಾರ ನಡೆಸುವ ರೈಲಿಗೆ ಜನರು, ಜನಪ್ರತಿನಿಧಿಗಳಿಂದ ಬೇಡಿಕೆ ಬಂದಿದೆ" ಎಂದರು.
"ಹುಬ್ಬಳ್ಳಿ- ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ಸಂಚಾರ ಆರಂಭಿಸುವ ಕುರಿತು ಶೀಘ್ರದಲ್ಲಿಯೇ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. ಆದಾಯ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಈಗಿರುವ ರೈಲುಗಳ ಸಂಚಾರಕ್ಕೆ ಧಕ್ಕೆ ಬಾರದಂತೆ ಹೊಸ ರೈಲು ಸಂಚಾರ ನಡೆಸಲಿದೆ" ಎಂದು ಸಚಿವರು ಹೇಳಿದರು.

ಹೊಸ ರೈಲುಗಳ ವಿವರ
* ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು
* ಬೀದರ್-ಕಲಬುರಗಿ-ಬೆಳಗಾವಿ ರೈಲು
* ಬೆಂಗಳೂರು-ಮಂಗಳೂರು ರೈಲು
"ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣದ ಕುರಿತು ವಿಸ್ತ್ರತ ಯೋಜನಾ ವರದಿ (ಡಿಪಿಆರ್) ರೈಲ್ವೆ ಮಂಡಳಿಗೆ ಬಂದಿದೆ. ಈ ಯೋಜನೆ ಅನುಷ್ಠಾನಗೊಂಡರೆ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ತ್ರಿವಳಿ ನಗರಗಳ ಸಂಪರ್ಕ ಇನ್ನಷ್ಟು ಹತ್ತಿರವಾಗಲಿದೆ, ಇದರಿಂದಾಗಿ ಕೈಗಾರಿಕೆಗಳಿಗೂ ಉತ್ತೇಜನ ಸಿಗಲಿದೆ" ಎಂದು ಸಚಿವರು ವಿವರಿಸಿದರು.
ರಾಜ್ಯದಲ್ಲಿ ಹೊಸದಾಗಿ ಒಟ್ಟು ಮೂರು ರೈಲುಗಳನ್ನು ಘೋಷಣೆ ಮಾಡಿದ್ದು ರೈಲುಗಳ ಸಂಚಾರ ಯಾವಾಗ ಆರಂಭವಾಗಲಿದೆ? ಎನ್ನುವುದು ಶೀಘ್ರದಲ್ಲಿಯೇ ಅಂತಿಮಗೊಳ್ಳಲಿದೆ.












Click it and Unblock the Notifications