ಸಂಸದ ಜೋಶಿ ಮನೆಗೆ ಮುತ್ತಿಗೆ ಪ್ರಕರಣ: ಏಳು ಮಂದಿಗೆ ಸಮನ್ಸ್
ಹುಬ್ಬಳ್ಳಿ, ಜೂನ್ 7: ಕಳಸಾ-ಬಂಡೂರಿ, ಮಹಾದಾಯಿ ಅನುಷ್ಠಾನಕ್ಕೆ ಆಗ್ರಹಿಸಿ ನಡೆಯುತ್ತಿದ್ದ ಹೋರಾಟದ ವೇಳೆ, ಎರಡು ವರ್ಷದ ಹಿಂದೆ ಸಂಸದ ಪ್ರಹ್ಲಾದ್ ಜೋಶಿ ಅವರ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಗೆ ಇಲ್ಲಿನ ಎರಡನೇ ಜೆಎಂಎಫ್ ಸಿ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಸಂಸದರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಆರೋಪದ ಮೇಲೆ ಜೆಡಿಎಸ್ ನ ಮಹಾನಗರದ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ, ಈರಣ್ಣ ಮಳಲಿ, ಅಮೃತ್ ಇಜಾರಿ, ಶೇಖರಯ್ಯ ಮಠಪತಿ, ಸಿದ್ಧು ಜೇಜಿ, ಬಾಬಾಜಾನ್ ಮುಧೋಳ, ಮಂಜುನಾಥ ಲೂತಿಮಠ ಅವರಿಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್ ಜೂನ್ ಐದರಂದು ಖುದ್ದು ಹಾಜರಿಗೆ ಆದೇಶಿಸಿದೆ.

ಘಟನೆಗೆ ಸಂಬಂಧಿಸಿದಂತೆ ಏಳು ಮುಖಂಡರ ವಿರುದ್ಧ ವಿವಿಧ ಸೆಕ್ಷನ್ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಕೋರ್ಟ್‌ಗೆ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಲಾಗಿದೆ.
ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ, ಬಾಬಾಜಾನ ಮುಧೋಳ, ಈರಣ್ಣ ಮಳಲಿ, ಅಮೃತ ಇಜಾರಿ, ಮಂಜುನಾಥ ಲೂತಿಮಠ, ಸಿದ್ದು ತೇಜಿ, ಶೇಖರಯ್ಯ ಮಠಪತಿ ಅವರಿಗೆ ಸಮನ್ಸ್ ನೀಡಲಾಗಿದೆ.
ಆಕ್ರೋಶ : ಸಮನ್ಸ್ ಜಾರಿಗೆ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ, ಹೋರಾಟಗಾರರ ವಿರುದ್ಧ ಕೇಸ್ ದಾಖಲಿಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ದೂರಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸಮನ್ಸ್ ಗಳನ್ನು ಪ್ರದರ್ಶಿಸಿ ಮಾತನಾಡಿದ ರಾಜಣ್ಣ ಕೊರವಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೂ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ ವಿಚಾರಣೆಗೂ ಕರೆಯದೇ ಇದೀಗ ಕೋರ್ಟ್ ಮೂಲಕ ಸಮನ್ಸ್ ಜಾರಿ ಮಾಡಲಾಗಿದೆ ಎಂದರು.
ನಮ್ಮ ಹೋರಾಟವನ್ನು ಹತ್ತಿಕ್ಕುವ ಹುನ್ನಾರವಾಗಿದ್ದು, ಇದಾವುದಕ್ಕೂ ಹೋರಾಟಗಾರರು ಬಗ್ಗುವುದಿಲ್ಲ. ಅಲ್ಲದೆ ಕಳಸಾ-ಬಂಡೂರಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜೂನ್ ಹನ್ನೆರಡರ ರಾಜ್ಯ ಬಂದ್‌ಗೆ ಬೆಂಬಲ
ಕಳಸಾ ಬಂಡೂರಿ, ಮಹದಾಯಿ ಸೇರಿದಂತೆ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನ, ರೈತರ ಬೆಳೆ ಸಾಲ ಮನ್ನಾಕ್ಕೆ ಆಗ್ರಹಿಸಿ ಜೂನ್ ಹನ್ನೆರಡರಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಮಲಪ್ರಭಾ, ಮಹದಾಯಿ, ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ ಬೆಂಬಲ ನೀಡಲಿದೆ.
ಇದರ ಜತೆಗೆ ನಗರದ ಕನ್ನಡ ಪರ ಸಂಘಟನೆ, ಆಟೊ ಸಂಘಗಳು ಹಾಗೂ ಸಂಘ ಸಂಸ್ಥೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಂದೆ ಬಂದಿವೆ ಎಂದು ರಾಜಣ್ಣ ಕೊರವಿ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.












Click it and Unblock the Notifications