ಹುಬ್ಬಳ್ಳಿ-ಋಷಿಕೇಶ ನಡುವೆ ವಾರದ ವಿಶೇಷ ರೈಲು, ವೇಳಾಪಟ್ಟಿ
ಹುಬ್ಬಳ್ಳಿ, ಜನವರಿ 04: ಭಾರತೀಯ ರೈಲ್ವೆ ಉತ್ತರ ಕರ್ನಾಟದ ಹುಬ್ಬಳ್ಳಿ ಮತ್ತು ಉತ್ತರಾಖಂಡ್ ರಾಜ್ಯದ ಪ್ರಸಿದ್ಧ ಯಾತ್ರಾ ಕ್ಷೇತ್ರ ಋಷಿಕೇಶ ನಡುವೆ ವಾರದ ವಿಶೇಷ ರೈಲು ಓಡಿಸಲಿದೆ. ಹಿಮಾಲಯದ ತಪ್ಪಲಿನ ಉತ್ತರಾಖಂಡ್ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಯಾತ್ರಾ ಸ್ಥಳಕ್ಕೆ ಹೋಗುವ ಭಕ್ತರ ಅನುಕೂಲಕ್ಕಾಗಿ ಮುಂದಿನ ಆದೇಶದ ತನಕ ಈ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ.
ಎಸ್‌ಎಸ್‌ಎಸ್ ಹುಬ್ಬಳ್ಳಿ-ಯೋಗ ನಗರಿ ಋಷಿಕೇಶ ನಡುವಿನ ರೈಲಿನ ವೇಳಾಪಟ್ಟಿ, ನಿಲ್ದಾಣದ ವಿವರಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಪ್ರಕಟಿಸಿದೆ. ಈ ಮಾರ್ಗದಲ್ಲಿ ಸಂಚಾರ ನಡೆಸುವ ಪ್ರಯಾಣಿಕರು ರೈಲು ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ರೈಲು ನಂಬರ್ 07363 ಮತ್ತು 07364 ಎಸ್‌ಎಸ್‌ಎಸ್ ಹುಬ್ಬಳ್ಳಿ-ಯೋಗ ನಗರಿ ಋಷಿಕೇಶ ನಡುವೆ ವಾರಕ್ಕೊಮ್ಮೆ ಸಂಚಾರವನ್ನು ನಡೆಸಲಿವೆ. ಜನವರಿ 6, 2025 ರಿಂದ ಮುಂದಿನ ಆದೇಶದ ತನಕ ಈ ರೈಲು ಸೇವೆ ಲಭ್ಯವಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.
ಹುಬ್ಬಳ್ಳಿ-ಋಷಿಕೇಶ ರೈಲು ವೇಳಾಪಟ್ಟಿ, ನಿಲ್ದಾಣಗಳು
ಎಸ್‌ಎಸ್‌ಎಸ್ ಹುಬ್ಬಳ್ಳಿ-ಋಷಿಕೇಶ ವಾರದ ವಿಶೇಷ ರೈಲು ವೇಳಾಪಟ್ಟಿ ಹೀಗಿದೆ. ರೈಲು ನಂಬರ್ 07363 ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ರಾತ್ರಿ 8.30ಕ್ಕೆ ಹೊರಡಲಿದೆ. ಯೋಗ ನಗರಿ ಋಷಿಕೇಶ ನಿಲ್ದಾಣಕ್ಕೆ ಬುಧವಾರ ರಾತ್ರಿ 11.30ಕ್ಕೆ ತಲುಪಲಿದೆ. ಜನವರಿ 6ರ ಸೋಮವಾರದಿಂದ ಜನವರಿ 13, 27, ಫೆಬ್ರವರಿ 3, 10, 24 ಹೊರತುಪಡಿಸಿ ಉಳಿದ ದಿನ ಸಂಚಾರ ನಡೆಸಲಿದೆ.
ವಾಪಸ್ ಬರುವ ಮಾರ್ಗದಲ್ಲಿ ರೈಲು ನಂಬರ್ 07364 ಯೋಗ ನಗರಿ ಋಷಿಕೇಶ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಾರದ ವಿಶೇಷ ರೈಲು ಯೋಗ ನಗರಿ ಋಷಿಕೇಶದಿಂದ ಜನವರಿ 9 ರಿಂದ ಪ್ರತಿ ಗುರುವಾರ ಬೆಳಗ್ಗೆ 6.15ಕ್ಕೆ ಹೊರಡಲಿದೆ. ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ರೈಲು ಶನಿವಾರ ಬೆಳಗ್ಗೆ 6.30ಕ್ಕೆ ಆಗಮಿಸಲಿದೆ. ಈ ರೈಲು ಜನವರಿ 9 ರಿಂದ ಜನವರಿ 16, 30 ಮತ್ತು ಫೆಬ್ರವರಿ 6, 13, 27 ಹೊರತುಪಡಿಸಿ ಉಳಿದ ದಿನ ಸಂಚಾರ ನಡೆಸಲಿದೆ.
ಎಸ್‌ಎಸ್‌ಎಸ್ ಹುಬ್ಬಳ್ಳಿ-ಯೋಗ ನಗರಿ ಋಷಿಕೇಶ ನಡುವಿನ ರೈಲು ಹೋಗುವ ಮತ್ತು ಬರುವ ಮಾರ್ಗದಲ್ಲಿ ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ, ಸತಾರಾ, ಪುಣೆ, ದೌಂಡ್ ಚೋರ್ಡ್ ಲೈನ್, ಅಹಮದ್ ನಗರ, ಮನ್ಮದ್ ಜಂಕ್ಷನ್, ಬುಸ್ವಾಲ್ ಜಂಕ್ಷನ್, ಇಟಾರ್ಸಿ ಜಂಕ್ಷನ್, ರಾಣಿ ಕಮಲಾಪತಿ, ಬೈನಾ ಜಂಕ್ಷನ್, ವೀರಾಂಗಣ ಲಕ್ಷ್ಮೀಬಾಯಿ ಝಾನ್ಸಿ ರೈಲ್ವೆ ನಿಲ್ದಾಣ. ಗ್ವಾಲಿಯರ್ ಜಂಕ್ಷನ್, ಅಗ್ರಾ ಕಂಟೋನ್ಮೆಂಟ್, ಮಥುರಾ ಜಂಕ್ಷನ್, ಹಜರತ್ ನಿಜಾಮುದ್ದೀನ್ ಜಂಕ್ಷನ್, ಘಜಿಯಾಬಾದ್ ಜಂಕ್ಷನ್, ಮೀರತ್ ಸಿಟಿ ಜಂಕ್ಷನ್, ಮುಜಾಫರ್ ನಗರ್, ದಿಯೋಬಾಂದ್, ತಾರ್ಪಿ ಜಂಕ್ಷನ್, ರೂಕೆ ಮತ್ತು ಹರಿದ್ವಾರದಲ್ಲಿ ನಿಲುಗಡೆ ಹೊಂದಿದೆ.
ಎಸ್‌ಎಸ್‌ಎಸ್ ಹುಬ್ಬಳ್ಳಿ-ಯೋಗ ನಗರಿ ಋಷಿಕೇಶ ನಡುವಿ ವಾರದ ವಿಶೇಷ ಎಕ್ಸ್‌ಪ್ರೆಸ್ ರೈಲು 14 ಬೋಗಿಯನ್ನು ಒಳಗೊಂಡಿದೆ. ಇದರಲ್ಲಿ 4 3 ಟೈರ್ ಎಸಿ ಮತ್ತು ಸ್ಲೀಪರ್ ಬೋಗಿ ಇದೆ. 3 ಗಾರ್ಡ್ ಬ್ರೇಕ್ ವ್ಯಾನ್ ಸಹ ಇದೆ.
ಉತ್ತರಾಖಂಡ್ ರಾಜ್ಯದ ಪ್ರಸಿದ್ಧ ಯಾತ್ರಾ ಕ್ಷೇತ್ರಗಳು ಋಷಿಕೇಶ, ಹರಿದ್ವಾರ. ಪ್ರತಿನಿತ್ಯ ಸಾವಿರಾರು ಭಕ್ತರು ಈ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಋಷಿಕೇಶ ಮತ್ತು ಹರಿದ್ವಾರ ಹಿಮಾಲಯದ ತಪ್ಪಲಿನಲ್ಲಿವೆ. ಆದ್ದರಿಂದ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ, ಭಕ್ತರಿಗೆ ಅನುಕೂಲ ಕಲ್ಪಿಸಲು ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತದೆ.












Click it and Unblock the Notifications