ಸಿದ್ದರಾಮಯ್ಯ ಪುಂಡ ಪೋಕರಿಗಳ ಥರ ಮಾತಾಡ್ತಾರೆ: ಜಗದೀಶ್ ಶೆಟ್ಟರ್ ಟೀಕೆ
ಹುಬ್ಬಳ್ಳಿ, ಜೂ. 7: ಸಿದ್ದರಾಮಯ್ಯ ಒಬ್ಬ ಮಾಜಿ ಸಿಎಂರಂತೆ ವರ್ತನೆ ಮಾಡುತ್ತಿಲ್ಲ. ಪುಂಡ, ಪೋಕರಿಗಳ ರೀತಿ, ಸಾಮಾನ್ಯ ಕಾರ್ಯಕರ್ತರಂತೆ ಮಾತನಾಡುತ್ತಿದ್ದಾರೆ. ಅವರು ಅತ್ಯಂತ ಕೆಳಮಟ್ಟದ ಹೇಳಿಕೆ ನೀಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದರು.
ನಗರದಲ್ಲಿಂದು ಮಾತನಾಡಿದ ಅವರು, ಆರ್ ಎಸ್ ಎಸ್ ಚಡ್ಡಿ ಕುರಿತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಗರಂ ಆದ ಜಗದೀಶ ಶೆಟ್ಟರ್, ಐದು ವರ್ಷ ಸಿಎಂ ಆಗಿದ್ದವರ ಸಂಸ್ಕೃತಿ ಇದಲ್ಲ. ಚಡ್ಡಿ ಹಾಕಿದ ಆರ್ ಎಸ್ ಎಸ್ ಕಾರ್ಯಕರ್ತರಿಂದಲೇ ದೇಶ ಒಗ್ಗಟ್ಟಾಗಿದೆ, ದೇಶ ಉಳಿದಿದೆ. ಅವರು ಆರ್ ಎಸ್ ಎಸ್ ಬಗ್ಗೆ ಮಾತನಾಡಿ ಅಲ್ಪಸಂಖ್ಯಾತರ ಮತ ಪಡೆಯಬಹುದು ಎಂದುಕೊಂಡಿದ್ದಾರೆ. ಇದೇ ಸಿದ್ದರಾಮಯ್ಯಗೆ ತಿರುಗು ಬಾಣವಾಗುತ್ತೆ. ಪದೇ ಪದೇ ಆರ್ ಎಸ್ಎಸ್ ಬಗ್ಗೆ ಮಾತನಾಡುತ್ತಿದ್ದರೆ ಸಿದ್ದರಾಮಯ್ಯಗೆ ಉಳಿಗಾಲವಿಲ್ಲ. ಈಗಾಗಲೇ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗಿದೆ. ಸಿದ್ದರಾಮಯ್ಯನವರು ಇದನ್ನು ಅರಿತು ಮಾತನಾಡಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್ ಸರ್ವನಾಶ ಖಚಿತ ಎಂದು ಎಚ್ಚರಿಸಿದರು.
ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್ ಚುನಾವಣಾ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಅಭ್ಯರ್ಥಿ ಬಸವರಾಜ ಹೊರಟ್ಟಿ ಪರ ಮತದಾರರ ಒಲವಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್ ಬಗ್ಗೆ ಸತತ ಟೀಕೆ ಸಲ್ಲದು
ಆರಂಭದಿಂದಲೂ ನಾನು ಹೇಳಿದ್ದೇನೆ ಗೌರವಾನ್ವಿತ ರಾಜಕಾರಣಿಯಾಗಿ ಪುಂಡು, ಪೋಕರಿ ಮತ್ತು ಸಾಮಾನ್ಯ ಕಾರ್ಯಕರ್ತ ಹಾಗೇ ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯ ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡಿದರೆ ಅಲ್ಪಸಂಖ್ಯಾರ ಮತ ಬಿಳುತ್ತವೆ ಎಂಬ ಭ್ರಮೆಯಲ್ಲಿಯಲ್ಲಿದ್ದಾರೆ ಎಂದರು.
ಆರ್‌ಎಸ್‌ಎಸ್ ಬಗ್ಗೆ ಸತತ ಟೀಕೆ ಮಾಡುವುದರಿಂದ ಮುಂದಿನ ದಿನದಲ್ಲಿ ಸಿದ್ದರಾಮಯ್ಯನವರಿಗೆ ತಿರುಗುಬಾಣವಾಗುತ್ತದೆ. ಅವರು ಅಲ್ಪಸಂಖ್ಯಾಂತ ಮತಗಳನ್ನು ಕಳೆದುಕೊಳ್ಳುತ್ತಾರೆ. ಈಗಾಗಲೇ ಕಾಂಗ್ರೆಸ್ ಕ್ಷೀಣಿಸುತ್ತಿದೆ. ಅವರ ಪಕ್ಷದ ಹಲವಾರು ನಾಯಕರು ಪಕ್ಷವನ್ನು ತೊರೆದಿದ್ದಾರೆ. ಭವಿಷ್ಯದಲ್ಲಿ ಸಿದ್ದರಾಮಯ್ಯನವರ ಕಣ್ಣು ಮುಂದೆಯೇ ಕಾಂಗ್ರೆಸ್ ಸಂಪೂರ್ಣ ಮುಕ್ತಯವಾಗುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದಲೇ ಭಾರತ ದೇಶ ಒಗ್ಗಟ್ಟಿನಿಂದ ಇದೆ. ಹಿಂದೂತ್ವಕ್ಕೆ ಸಂಘಟನೆ ಶಕ್ತಿ ಆರ್‌ಎಸ್‌ಎಸ್ ಕೊಟ್ಟಿದೆ. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸಿದ್ದರಾಮಯ್ಯನವರ ಅವನತಿಗೆ ಕಾರಣವಾಗುತ್ತದೆ ಎಂದರು. ಮೋಹನ ಲಿಂಬಿಕಾಯಿ ಮುನಿಸಿಕೊಂಡಿದ್ದಾರೆ ಎಂಬ ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ ಈ ಕುರಿತು ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಅವರು ಸಹ ಪ್ರಚಾರದಲ್ಲಿ ತೊಡಗುತ್ತಾರೆ ಎಂದು ತಿಳಿಸಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications