SC-ST ಒಳಮೀಸಲಾತಿ ನೀಡಲು ರಾಜ್ಯಗಳಿಗೆ ಅಧಿಕಾರ ಕೊಟ್ಟ ಕೋರ್ಟ್: ಎಲ್ಲೆಲ್ಲೂ ವಿಜಯೋತ್ಸವ
ಹುಬ್ಬಳ್ಳಿ, ಆಗಸ್ಟ್ 01: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಗಳಲ್ಲಿ ಉಪವರ್ಗಗಳನ್ನು ರಚಿಸಿ ದಮನಿತ ಸಮುದಾಯಗಳಿಗೆ ಕೋಟಾ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಾಲಯದ ಈ ಐತಿಹಾಸಿಕ ತೀರ್ಪು ಸ್ವಾಗತಿಸಿ ಹುಬ್ಬಳ್ಳಿಯಲ್ಲಿ ಡೋರ, ಸಮಗಾರ, ಮಾದಿಗ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಗುರುವಾರ ಸಂಭ್ರಮಾಚರಣೆ ನಡೆಸಿದರು.

ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿದ ಮುಖಂಡರು, ರಾಜ್ಯ ಸರ್ಕಾರಗಳಿಗೇ ಸುಪ್ರೀಂ ಕೋರ್ಟ್ ಈ ಅಧಿಕಾರ ನೀಡಿದ್ದು, ಖುಷಿಯ ವಿಚಾರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಉಪವರ್ಗೀಕರಣ ಮಾಡಿ, ಅಲ್ಲಿನ ಹಿಂದುಳಿದ ಸಮುದಾಯಗಳಿಗೆ ಕೋಟಾ ನೀಡಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬುಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಉಪ-ವರ್ಗೀಕರಣವು ರಾಜ್ಯಗಳಿಂದ ಪ್ರಮಾಣೀಕರಿಸಬಹುದಾದ ದತ್ತಾಂಶಗಳ ಮೂಲಕ ಸಮರ್ಥಿಸಿಕೊಳ್ಳುವ ಹಾಗೆ ಇರಬೇಕು. ತನ್ನ ಇಚ್ಛೆಯಂತೆ ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಬಹುಮತದ ತೀರ್ಪಿನಲ್ಲಿ ತಿಳಿಸಲಾಗಿದೆ.
ಮುಖಂಡರಾದ ಮಂಜುನಾಥ ಕೊಂಡಪಲ್ಲಿ, ಗೋವಿಂದ ಬೆಳ್ದೋಣಿ, ನಾಗೇಶ ಕತ್ರಿಮಲ್, ಸತ್ಯನಾರಾಯಣ ಎಂ, ಸೂರ್ಯನಾರಾಯಣ ಕನಮಕ್ಕಲ್, ರವಿ ಕಲ್ಯಾಣಿ, ಮಾರುತಿ ದೊಡ್ಡಮನಿ, ರಂಗನಾಯಕ ತಪೇಲಾ, ಬಸಂತಕುಮಾರ, ಶಂಕರ ಅಜಮನಿ, ವಿಜಯ ಗುಂಟ್ರಾಳ, ದೇವೇಂದ್ರಪ್ಪ ಇಟಗಿ, ಬಸವರಾಜ ತೇರದಾಳ, ಸೋಮಣ್ಣ ಹಂಜಗಿ ಮುಂತಾದವರು ಭಾಗವಹಿಸಿದ್ದರು.
ಸುಪ್ರೀಂ ತೀರ್ಪು ಮುಕ್ತವಾಗಿ ಸ್ವಾಗತಿಸಿದ ಸಿಎಂ
ಇನ್ನೂ ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ತೀರ್ಪು ಸ್ವಾಗತಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಈ ಜಾತಿಯವರಿಗೆ ಒಳ ಮೀಸಲಾತಿ ನೀಡುವ ನಿರ್ಧಾರವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಕುರಿತು ತಜ್ಞರು ಹಾಗೂ ಪ್ರಮುಖ ಜೊತೆಗೆ ಚರ್ಚಿಸಿ ಎಸ್‌ಸಿ, ಎಸ್‌ಟಿ ಮೀಸಲಾತಿ ಒಳಗಡೆಯೇ ಒಳಮೀಸಲಾತಿ ಅನುಷ್ಠಾನಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ದಿನ ಮಹತ್ವಾಗಿದ್ದು, ಈ ತೀರ್ಪನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications