'ಮೋದಿ ಚುನಾವಣಾ ಪ್ರಚಾರ'ದ ಉಸ್ತುವಾರಿ, ಮತ್ತೆ ಅಶೋಕರೇ ಜವಾಬ್ದಾರಿ
Recommended Video

ಹುಬ್ಬಳ್ಳಿ, ಫೆಬ್ರವರಿ 05: ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಆಗಮಿಸುತ್ತಿರುವ ಸುದ್ದಿ ಗೊತ್ತಿರಬಹುದು. ಕರ್ನಾಟಕದಲ್ಲಿ ಈ ಸಮಾವೇಶದ ಮೂಲಕ ಚುನಾವಣಾ ಪ್ರಚಾರ ಆರಂಭಗೊಳ್ಳುವುದರಿಂದ ಸಮಾವೇಶ ಭಾರಿ ಯಶಸ್ಸುಗೊಳಿಸುವುದು ಬಿಜೆಪಿಯ ಗುರಿಯಾಗಿದೆ. ಈ ಗುರಿ ಮುಟ್ಟುವ ಹೊಣೆ ಮತ್ತೊಮ್ಮೆ ಮಾಜಿ ಸಚಿವ ಆರ್ ಅಶೋಕ ಅವರ ಹೆಗಲಿಗೆ ಬಿದ್ದಿದೆ.
ಲೋಕಸಭಾ ಚುನಾವಣೆ ಪ್ರಚಾರ ಕಾರ್ಯ ಫೆಬ್ರವರಿ 10 ರಿಂದ ಆರಂಭವಾಗಲಿದೆ. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಪ್ರಚಾರ ಆರಂಭಿಸಲಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ ಹೇಳಿದರು.

ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ, ಫೆ.10ರಂದು ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಧಾರವಾಡ,ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಕರ್ನಾಟಕದ ಎಲ್ಲಾ ಶಾಸಕರು, ಸಂಸದರು ಸಮಾವೇಶದಲ್ಲಿರಲಿದ್ದಾರೆ. ಸಮಾವೇಶ ಯಶಸ್ವಿಗೊಳಿಸಲು ಸಕಲ ಸಿದ್ಧತೆಯಾಗಿದ್ದು, 30 ತಂಡಗಳನ್ನು ರಚನೆ ಮಾಡಲಾಗಿದೆ ಎಂದರು.
ಫೆ. 10 ಹಾಗೂ ಫೆ 19ರಂದು ಮೋದಿ ಅವರು ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.14 ಹಾಗೂ 21ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಗಮಿಸಲಿದ್ದಾರೆ. ಈ ಹಿಂದೆ ಸಮಾವೇಶಗಳಲ್ಲಿ ಆದ ಲೋಪ ದೋಷಗಳನ್ನು ಸರಿಪಡಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಅಶೋಕ ಅವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ. ಕರ್ನಾಟಕ ಬಿಜೆಪಿ ಈ ಬಾರಿ 28 ಕ್ಷೇತ್ರಗಳ ಪೈಕಿ ಕನಿಷ್ಟ 22 ಕ್ಷೇತ್ರಗಳಲ್ಲಿ ಕೇಸರಿ ಬಾವುಟ ಹಾರಿಸುವ ಗುರಿ ಹೊಂದಿದೆ.












Click it and Unblock the Notifications