ರೈಲ್ವೆ ಆಸ್ತಿ ಭ್ರಷ್ಟಾಚಾರ: ರಣದೀಪ್ ಸುರ್ಜೇವಾಲಾ ವಿರುದ್ಧ ಕಾನೂನು ಕ್ರಮ ಎಂದ ಜೋಶಿ
ಹುಬ್ಬಳ್ಳಿ, ಜನವರಿ 20: ಹುಬ್ಬಳ್ಳಿಯಲ್ಲಿ ಒಂದು ಸಾವಿರ ಕೋಟಿಗೂ ಅಧಿಕ ರೈಲ್ವೆ ಆಸ್ತಿಯ ಗುತ್ತಿಗೆ ವಿಚಾರವು ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಆರೋಪ ಮಾಡಿದ್ದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರಿಗೆ ಬಿಜೆಪಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ಕೊಟ್ಟಿದ್ದಾರೆ.
ಕಾಂಗ್ರೆಸ್‌ನ ಚಿಲ್ಲರೆತನಕ್ಕೆ ಬಾಲಿಷತನಕ್ಕೆ ಒಂದು ಮಿತಿ ಇರಬೇಕು. ನಾನೂ ಮೂವತ್ತು ವರ್ಷಗಳಿಂದ ಪರಿಶುದ್ಧ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಸುರ್ಜೇವಾಲ ಹೇಳಿಕೆ ಅತ್ಯಂತ ಬಾಲಿಷವಾದದ್ದು ಎಂದು ಜೋಶಿ ಕಿಡಿ ಕಾರಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರೋಪ ಮಾಡಿರುವ ರಣದೀಪ್ ಸುರ್ಜೆವಾಲ ಅವರು ಆಗ ಬಗ್ಗೆ ದಾಖಲೆಗಳನ್ನು ಕೊಡಬೇಕು. ಇಲ್ಲವಾದರೆ ನಾನೂ ಕಾನೂನಿನ ಮುಖಾಂತರ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಸಿದರು.
ಐದು ಬಾರಿ ಟೆಂಡರ್ ಕರೆಯಲಾಗಿದೆ
ರೈಲ್ವೇ ಜಾಗಕ್ಕೆ ಇಲ್ಲಿಯವರೆಗೂ ಐದು ಬಾರಿ ಟೆಂಡರ್ ಕರೆಯಲಾಗಿದೆ. ಯಾರು ಸಹ ಇದರಲ್ಲಿ ಭಾಗಿಯಾಗಿಲ್ಲ. ಈಗ ಮತ್ತೆ ಟೆಂಡರ್ ಕರೆಯಲಾಗಿದೆ, ನೀವು ಸಹ ಟೆಂಡರ್‌ನಲ್ಲಿ ಭಾಗಿಯಾಗಬಹುದು. ಕಾಂಗ್ರೆಸ್‌ನವರ ಬಳಿ ಸಾಕಷ್ಟು ಭ್ರಷ್ಟಾಚಾರದ ಹಣ ಇದೆ. ಅದರ ಮುಖಾಂತರ ನೀವು ಟೆಂಡರ್‌ನಲ್ಲಿ ಭಾಗಿಯಾಗಬಹುದು. ನಿಮ್ಮ ಹಾಗೆ ಕಲ್ಲಿದ್ದಲಿನಲ್ಲಿ ಚೀಟಿ ಬರೆದು ಟೆಂಡರ್ ಕರೆದಿಲ್ಲ ಎಂದು ತಿಳಿಸಿದರು.

ನಯಾಪೈಸೆ ಭ್ರಷ್ಟಾಚಾರ ನಡೆದಿಲ್ಲ
ಇದು ಆನ್‌ಲೈನ್ ಮುಖಾಂತರ ಟೆಂಡರ್ ಕರೆಯಲಾಗಿದೆ, ಇದರಲ್ಲಿ ನಯಾಪೈಸೆ ಭ್ರಷ್ಟಾಚಾರ ಇಲ್ಲ. ಭ್ರಷ್ಟಾಚಾರಕ್ಕೆ ನಮ್ಮ ಸರ್ಕಾರ ಅವಕಾಶ ಮಾಡಿಕೊಡುವ ಮಾತೆ ಇಲ್ಲ. ಸುರ್ಜೆವಾಲ ಅವರಿಗೆ ಮೊದಲಿಗೆ ಹರಿಯಾಣ ರಾಜ್ಯವನ್ನು ಸಂಭಾಳಿಸಿಕೊಂಡು ಬರಲು ಹೇಳಿ. ನೂರು ಕೋಟಿ ರೂಪಾಯಿಗೆ ಒಂದು ಎಕರೆ ಖರೀದಿ ಬಗ್ಗೆ ಮುಂಬೈ ಹಾಗೂ ಬೆಂಗಳೂರಿನಂತಹ ಮಹಾನಗರದಲ್ಲಿಯೇ ನಡೆದಿಲ್ಲ.
ಈ ಬಗ್ಗೆ ಸ್ಥಳೀಯ ಕಾರ್ಯಕರ್ತರು ಸುರ್ಜೇವಾಲ ಅವರನ್ನು ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮೊದಲು ಸಂಪೂರ್ಣ ತಿಳಿದುಕೊಂಡು ಮಾತನಾಡಬೇಕು ಎಂದು ಅವರು ಆಕ್ರೊಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜನವರಿ ಕೊನೆಯವರೆಗೂ ಎಲ್ಲಿ ಕೂಡ ಬರುವುದಿಲ್ಲ ಎಂದಿದ್ದಾರೆ. ಅಲ್ಲದೇ ಜನವರಿ ಅಂತ್ಯದಲ್ಲಿ ಬಂದು ಭೇಟಿ ಮಾಡುತ್ತೇನೆ ಎಂದಿದ್ದಾರೆ. ಇದರಲ್ಲಿ ದೊಡ್ಡ ರಾಜಕೀಯ ಬದಲಾವಣೆ ಏನು ಇಲ್ಲ ಎಂದು ಅವರು ಮಾಹಿತಿ ನೀಡಿದರು.
ಸುರ್ಜೆವಾಲ ಆರೋಪವೇನು?
ಹುಬ್ಬಳ್ಳಿಯ ಎಂಟಿಎಸ್ ನಗರದಲ್ಲಿರುವ ಸುಮಾರು 1,360 ಕೋಟಿ ರೂಪಾಯಿ ವೆಚ್ಚದ ಒಟ್ಟು ಹದಿಮೂರು ಎಕರೆ ರೈಲ್ವೆ ಇಲಾಖೆ ಆಸ್ತಿಯನ್ನು 83 ಕೋಟಿ ರೂಪಾಯಿ ಗುತ್ತಿಗೆ ನೀಡಲು ಮುಂದಾಗಿದೆ. ಇದರ ಹಿಂದಿರುವ ಷಡ್ಯಂತ್ರವೇನು, ಪ್ರಧಾನಿ ಮೋದಿಯವರು ಏಕೆ ಮೌನ ವಹಿಸಿದ್ದಾರೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಆರೋಪಿಸಿದ್ದರು.
ಆಸ್ತಿಯನ್ನು 30 ವರ್ಷಕ್ಕಿಂತ ಹೆಚ್ಚು ವರ್ಷ ಗುತ್ತಿಗೆ ನೀಡುವಂತಿಲ್ಲ. ಹೀಗಿದ್ದರೂ ಸಹಿತ 99 ವರ್ಷ ಗುತ್ತಿಗೆ ನೀಡುತ್ತಿರುವ ಹಿಂದಿರುವ ಉದ್ದೇಶವೇನು. ಇದು ಶೇಕಡಾ 40ರಷ್ಟು ಭ್ರಷ್ಟಾಚಾರ ಮುಂದುವರಿದ ಭಾಗವಾಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ಧಾರವಾಡ ಲೋಕಸಭಾ ಕ್ಷೇತ್ರದ ಸದಸ್ಯ ತಿರುಗೇಟು ಕೊಟ್ಟಿದ್ದಾರೆ.












Click it and Unblock the Notifications