ಅಂಜಲಿ ಕೊಲೆಗಾರ ಅಪ್ರಾಪ್ತೆ ಪಟಾಯಿಸಿದ್ದ, ತಾಯಿಯ ಬಂಗಾರ ಲಪಟಾಯಿಸಿದ್ದ: ಪ್ರಹ್ಲಾದ್ ಜೋಶಿ ಆಗ್ರಹವೇನು?
ಹುಬ್ಬಳ್ಳಿ, ಮೇ 19: ಹುಬ್ಬಳ್ಳಿಯಲ್ಲಿ ಕೊಲೆಯಾದ ಅಂಜಲಿ ಅಂಬಿಗೇರ್ ಮನೆಗೆ ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಭೇಟಿ ನೀಡಿ ಸಾಂತ್ವನ ಹೇಳಿದರು. ಹುಬ್ಬಳ್ಳಿಯಲ್ಲಿ ನಡೆದ ಕೊಲೆ ಘಟನೆಗಳ ವಿಚಾರವಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಅಂಜಲಿ ಕೊಲೆ ಮಾಡಿದ್ದ ಯುವಕ ಗೀರಿಶ್ ಕುರಿತು ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.
ಅಂಜಲಿ ಕೊಲೆ ವಿಚಾರ ಬಗ್ಗೆ ಕುಟುಂಬದವರು ಹೇಳಿದನ್ನು ಬಹಳ ಅಘಾತವಾಗಿದೆ. ಬಿಹಾರ ಪ್ರವಾಸದಲ್ಲಿದ್ದ ನಾನು ನೇರವಾಗಿ ಇಲ್ಲಿಗೆ ಬಂದಿದ್ದೇನೆ. ಈ ಹಿಂದೆ ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣ ನಡೆದಾಗ ಜನಂದೋಲನವೇ ಆಗಿತ್ತು. ನಂತರವೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿತ್ತು.

ಅಂಜಲಿಯನ್ನು ಕೊಲೆಗೈದ್ ಗಿರೀಶ್ ಕ್ರಿಮಿನಲ್ ಹಿನ್ನೆಲೆ ಹೊಂದಿದವನಾಗಿದ್ದಾನೆ. ಅಂಜಲಿ ಕೊಲೆಗೂ ಮೊದಲು ಅಪ್ರಾಪ್ತೆಯನ್ನು ಪಟಾಯಿಸಿದ್ದ. ನಂತರ ಆ ಅಪ್ರಾಪ್ತೆ ಯುವತಿಯ ತಾಯಿಯ ಚಿನ್ನಾಭರಣ ಲಪಟಾಯಿಸಿದ್ದ. ಈ ವೇಳೆ ಐದುವರೆ ತೊಳೆ ಬಂಗಾಳ ಕಳೆದುಕೊಂಡಿದ್ದಾಗಿ ಅವರು ದೂರು ನೀಡಿದ್ದರು.
ಅಂದಿನ ಪ್ರಕರಣ, ಅಧಿಕಾರಿ ವಿರುದ್ಧ ತನಿಕೆ ನಡೆಯಲಿ
ಆದರೆ ಗಿರೀಶ್ ಅಪರಾಧ ಚಟುವಟಿಕೆ ಕುರಿತು ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಯಾವ ಕ್ರಮ ತೆಗೆದುಕೊಂಡಿರಲಿಲ್ಲ. ಈ ಕೊಲೆಗಾರನ ಜತೆ ಕಾಂಪ್ರಮೈಸ್ ಮಾಡಿಸಿದ್ದರು. ಅದರ ತನಿಖೆಯೂ ಇದೀಗ ನಡೆಸಬೇಕಿದೆ. ಅಂದಿನ ಪೊಲೀಸ್ ಅಧಿಕಾರಿ ವಿರುದ್ಧವೂ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದರು.
ಈ ಹಿಂದೆ ನೇಹಾ ಕೊಲೆ ಆದಾಗ ಸಿಎಂ ಸಿದ್ದರಾಮಯ್ಯ ಅವರು ಇದು ವೈಯಕ್ತಿಕ ಕಾರಣಕ್ಕೆ ಆದ ಕೊಲೆ ಎಂದಿದ್ದರು. ಇಂತಹ ಹೇಳಿಕೆಗಳಿಂದಲೇ ಕೊಲೆಗಡುಕರಿಗೆ ಪ್ರೋತ್ಸಾಹ ಸಿಗುತ್ತಿದೆ. ಅವರಿಗೆ ಕುಮ್ಮಕ್ಕು ಕೊಡುವ ರೀತಿ ವರ್ತಿಸುತ್ತಿದ್ದಾರೆ.
ಸಿದ್ದರಾಮಯ್ಯರ ಹೊಣೆಗೇಡಿತನ ಕಾರಣ
ಅಲ್ಲದೇ ಉತ್ತರ ಪ್ರದೇಶದಲ್ಲಿ ರೇಪ್ ಆಗುತ್ತಿಲ್ಲವೇ ಎಂದು ಕೆಲ ವರ್ಷಗಳ ಹಿಂದೆ ಆಗಿನ ಸರ್ಕಾರದ ಕೇಳಿದ್ದರು. 'ಗಂಡು ಮಕ್ಕಳು ಗಂಡು ಮಕ್ಕಳೇ' ಅಂದಿದ್ದರು. ಆಗ ಅತ್ಯಾಚಾರ ಮತ್ತಷ್ಟು ಹೆಚ್ಚಾಗಿತ್ತು. ಅದೇ ರೀತಿ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಇದು ವೈಯಕ್ತಿಕ ಘಟನೆ ಎಂದರು. ಇದು ಸಿದ್ದರಾಮಯ್ಯ ಅವರ ಹೊಣೆಗೇಡಿತನದ ಪರಿಣಾಮದಿಂದ ಹೀಗೆಲ್ಲ ಅಪರಾಧ ಕೃತ್ಯಗಳು ನಡೆಯುತ್ತಿವೆ. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಗಂಭೀರತೆಯನ್ನೇ ಹೊಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.
4 ತಿಂಗಳ ಕ್ರೈಂ ರೇಟ್ ಹೇಳಿದರೆ ದಾಖಲೆ ಕೇಳುತ್ತಾರೆ?
ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 430 ಕೊಲೆ, 692 ರೈತ ಆತ್ಮಹತ್ಯೆ ನಡೆದಿವೆ. ಇದನ್ನು ಹೇಳಿದ ಕೂಡಲೇ ಹಿಂದಿನ ದಾಖಲೆ ಹುಡುಕೋ ಕೆಲಸ ಮಾಡುತ್ತಾರೆ. ಹಿಂದೆ ಕೊಲೆಯಾಗಿದ್ದರೂ ಇಷ್ಟು ಭೀಕರ ಆಗಿರಲಿಲ್ಲ. ಕಾಲೇಜು, ಮನೆಗೆ ನುಗ್ಗಿ ಕೊಲೆ ಮಾಡಲಾಗುತ್ತಿದೆ. ವರ್ಗಾವಣೆಯಲ್ಲಿ ದುಡ್ಡು ತೆಗೆದುಕೊಳ್ಳಲಾಗುತ್ತಿದೆ. ಪೊಲೀಸರ ವರ್ಗಾವಣೆಯಲ್ಲಿ ಧಂಧೆ ನಡೆದಿದೆ ಇದರ ಪರಿಣಾಮ ಗಾಂಜಾ ಮಾರಾಟ ಹೆಚ್ಚಾಗಿದೆ ಎಂದು ಅವರು ವಿವರಿಸಿದರು.
ಇದನ್ನು ಹೇಳಿದರೆ ಮಾಹಿತಿ ಕೊಡಿ ಎಂದು ಸರ್ಕಾರ ಹೇಳುತ್ತದೆ. ಈ ಸರ್ಕಾರದ ಬಳಿ ಇಂಟಲಿಜೆನ್ಸಿ ಇಲ್ಲವೇ?. ಅಭಿವೃದ್ಧಿಯ ಸಮಾಧಿ, ಹತ್ಯೆ, ಆತ್ಮಹತ್ಯೆ ಈ ಸರ್ಕಾರದ ಟ್ರೇಡ್ ಮಾರ್ಕ್ ಇದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ.

ಈ ಸರ್ಕಾರದಲ್ಲಿ ಜೀವಗಳಿಗೆ ಗ್ಯಾರೆಂಟಿ ಇಲ್ಲ
ಇಂದಿನ ದಿನಗಳಲ್ಲಿ ಅನೇಕ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಭಯಪಡುತ್ತಿದ್ದಾರೆ. ಜೀವಕ್ಕೆ ಗ್ಯಾರಂಟಿ ಇಲ್ಲದ ಸರ್ಕಾರ ಅಂದರೆ ಅದು ಸಿದ್ದು ಸರ್ಕಾರ. ಯಾರನ್ನೋ ಸಸ್ಪೆಂಡ್ ಮಾಡಿ ಕೈ ತೊಳೆದುಕೊಂಡರಷ್ಟೇ ಸಾಲದು. ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ವಿಚಾರಣೆ ನಡೆಸಬೇಕು. ಹಿಂದೆ ನಡೆದಿದ್ದ ಘಟನೆಯ ತನಿಖೆಯೂ ಆಗಬೇಕು ಎಂದು ಅವರು ಒತ್ತಾಯಿಸಿದರು.
ಎಲ್ಲಿ ಮಾಫಿಯಾ ಕ್ರಿಯಾಶೀಲವಾಗಿದೆಯೋ ಅಲ್ಲಿ ಹೆಚ್ಚಿನ ಪೊಲೀಸ್ ನಿಯೋಜಿಸಬೇಕು. ಮಾಹಿತಿ ನೀಡಿದ ಜನರ ಹೆಸರು ಗೌಪ್ಯವಾಗಡಬೇಕು. ಕ್ರಿಮಿನಲ್ ಗಳಿಗೆ ಭಯ ಹುಟ್ಟಿಸೋ ರೀತಿ ಕ್ರಮ ಆಗಬೇಕು. ಐದೂವರೆ ತೊಲೆ ಬಂಗಾರ ಲಪಟಾಯಿಸಿದ್ದ ಗಿರೀಶ್ ಪ್ರಕರಣ ಬಗ್ಗೆ ತನಿಖೆ ನಡೆಸಬೇಕು. ಹುಬ್ಬಳ್ಳಿಯಲ್ಲಿ ಅನೇಕ ವರ್ಷಗಳಿಂದ ಬೀಡು ಬಿಟ್ಟಿರುವ ಅನೇಕ ಪೊಲೀಸ್ ಅಧಿಕಾರಿಗಳಿದ್ದಾರೆ. ಅವರ ಬದಲಾಗಿ ಹೊಸ, ದಕ್ಷ ಅಧಿಕಾರಿಗಳನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನಿಯೋಜಿಸಬೇಕು ಎಂದು ಹೇಳಿದರು.
ಪೊಲೀಸ್ ಆಯುಕ್ತರ ಹುದ್ದೆ ಬಗ್ಗೆ ಜೋಶಿ ಪ್ರತಿಕ್ರಿಯೆ
ಹು-ಧಾ ಪೊಲೀಸ್ ಆಯುಕ್ತರ ಹುದ್ದೆ ಮೊದಲು ಐಜಿ ಕೇಡರ್ ಇತ್ತು. ಈಗ ಅದು ಎಸ್‌ಪಿ ಕೇಡರ್ ಮಟ್ಟಕ್ಕೆ ಬಂದಿದೆ. ಇದು ನಾನ್ಸ್ ಸೆನ್ಸ್ ಅಲ್ಲವೇ?. ಹಿಂದೆ ಹೀಗೆ ಎಂದೂ ಆಗಿರಲೇ ಇಲ್ಲ. ಹಿಂದೆ ಕನಿಷ್ಟ ಡಿಐಜಿ ಕೇಡರ್ ಇರುತ್ತಿತ್ತು. ಆದರೆ ಈಗ ಅದನ್ನು ಎಸ್‌ಪಿ ಕೇಡರ್‌ಗೆ ತಂದಿಟ್ಟಿದ್ದಾರೆ ಎಂದರು.
ಫೋಟೋ ಫೋಸ್ ಕೊಡೋ ಅವಶ್ಯಕತೆ ಇಲ್ಲ. ಅಂಜಲಿ ಮನೆಗೆ ತಡವಾಗಿ ಭೇಟಿ ನೀಡಿದ್ದ ಕಾಂಗ್ರೆಸ್ ಕೈ ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಶಿ, ಇದು ಫೋಟೋ ಫೋಸ್ ಅಲ್ಲವೇ ಅಲ್ಲ. ಎಲ್ಲರೂ ಸಂವೇದನಾಶೀಲವಾಗಿ ನಡೆದುಕೊಳ್ಳಬೇಕು.
ಈ ಬಗ್ಗೆ ಹಗುರವಾಗಿ ಮಾತಾಡಬಾರದು. ತಡವಾಗಿ ಭೇಟಿ ಮಾಡಿದ್ದಕ್ಕೆ ಕಾರಣ ಏನೇ ಇರಬಹುದು ಆದರೆ ಹಾಗೆ ಯಾವತ್ತೂ ಮಾತನಾಡಬಾರದು. ಕೊಲೆ ನಡೆದ ದಿನವೇ ನಾನು ಎಲ್ಲರಿಗೂ ಮಾತನಾಡಿದ್ದೇನೆ ಅಧಿಕಾರಿಗಳೊಂದಿಗೆ ಅವತ್ತೇ ಮಾತಾಡಿದ್ದೇನೆ ಎಂದು ಅವರು ಸ್ಪಷ್ಟನೆ ನೀಡಿದರು. ನೇಹಾ ಪ್ರಕರಣವನ್ನು ಮಾತ್ರವಲ್ಲದೇ ಅಂಜಲಿ ಕೊಲೆ ಪ್ರಕರಣವನ್ನು ಎರಡನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದರು.












Click it and Unblock the Notifications