Pen Drive Case: ಎಚ್‌ಡಿ ಕುಮಾರಸ್ವಾಮಿ ರಾಕೇಶ್ ಸಿದ್ದರಾಮಯ್ಯ ಘಟನೆ ನೆನಪಿಸಿದ್ದು ಯಾಕೆ?
ಹುಬ್ಬಳ್ಳಿ, ಏಪ್ರಿಲ್ 30: ಹಾಸನ ಸಂಸದ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಸಂಬಂಧ ಕಾಂಗ್ರೆಸ್ ಮೇಲೆ ಆಕ್ರೋಶ ಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಿಗೆ ರಾಕೇಶ್ ಸಿದ್ದರಾಮಯ್ಯ ಅವರ ಸಾವಿನ ಘಟನೆ ನೆನಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಕೋರ್ ಕಮಿಟಿ ಸಭೆ ಬಳಿಕ ಮಾಜಿ ಸಚಿವ ಎಚ್‌ಎಂ ರೇವಣ್ಣ ಪುತ್ರ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ಕುರಿತು ಮಾತನಾಡಿದರು. ಈ ಪ್ರಕರಣದಲ್ಲಿ ಪ್ರಧಾನಿ ಮೋದಿಯವರ ಹೆಸರು ಥಳುಕು ಹಾಕುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್‌ಡಿಕೆ ತಿರುಗೇಟು ನೀಡಿದರು.

ತಮ್ಮ ಮನೆಯಲ್ಲಿ ನಡೆದ ವಿಚಾರ ಮರೆತಿದ್ದಾರೆ
ಪ್ರಕರಣದಲ್ಲಿ ದೇವೇಗೌಡರ ಕುಟುಂಬ ಮತ್ತು ಪ್ರಧಾನಿ ಮೋದಿ ವಿರುದ್ಧ ಆರೋಪಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಮನೆಯಲ್ಲಿ ನಡೆದಿದ್ದ ವಿಚಾರ ಮರೆತಿದ್ದಾರೆ ಎನ್ನಿಸುತ್ತದೆ. ಅದನ್ನು ಹೊರಗಡೆ ತರುತ್ತೇನೆ ಎಂದು ರಾಕೇಶ್ ಸಿದ್ದರಾಮಯ್ಯ ಸಾವಿನ ಸಂದರ್ಭದಲ್ಲಿ ನಡೆದ ವಿಚಾರವನ್ನು ಕುಮಾರಸ್ವಾಮಿ ಎಳೆದು ತಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದಲ್ಲಿ ಸಾವಿನ ಘಟನೆ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಅವರು ಅಂದು ಯಾವ ರೀತಿ ನಡೆದುಕೊಂಡಿದ್ದರು ಎಂಬುದನ್ನು ನೆನಪಿನಲ್ಲಿಡಬೇಕು. ಆ ಸಹಾಯ ಮರೆಯಬಾರದು. ಎಲ್ಲ ದಾಖಲೆಗಳನ್ನು ನಾವು ಹೊರಗಡೆ ತರುತ್ತೇವೆ.
ಸಿದ್ದರಾಮಯ್ಯನವರೇ ನಿಮ್ಮ ಕುಟುಂಬದಲ್ಲಿ ನಡೆದ ಘಟನೆ ಏನೇನಾಯಿತು? ಮಾಡಿದ ಸಹಾಯ ಎಲ್ಲವೂ ಹೊರಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದರು.

ಇದನ್ನು ಇಷ್ಟಕ್ಕೆ ಬಿಡುವುದಿಲ್ಲ: ಡಿಸಿಎಂಗೆ ಎಚ್ಚರಿಕೆ
ಪ್ರಕರಣ ಕುರಿತು ಒಂದು ವಾರದಿಂದ ಡಿಸಿಎಂ ಡಿಕೆ ಶಿವಕುಮಾರ್ ಅವರು ಏನೆಲ್ಲ ಮಾತನಾಡಿದ್ದಾರೆ ಎಂಬುದು ಗೊತ್ತಿದೆ. ಪ್ರಕರಣದ ಹಿಂದೆ ಇದೇ ಮಹಾನಾಯಕನ (ಡಿಕೆಶಿ) ಕೈವಾಡ ಇದೆ ಎಂದು ಆರೋಪಿಸಿದ ಕುಮಾರಸ್ವಾಮಿಯವರು ಇದನ್ನು ಇಷ್ಟಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಎಲ್ಲ ವಿಷಯಗಳು ತನಿಖೆ ಆಗಬೇಕು. 2012 ರಲ್ಲಿ ನಡೆದ ಪ್ರಕರಣಕ್ಕೆ ಜೀವ ಕೊಟ್ಟವರು ಇದೇ ಮಹಾನಾಯಕರು. ಮಹಿಳೆಯರ ಬಗ್ಗೆ ಮಾತಾಡೋ ಮಹಾನ್ ನಾಯಕನಿಂದ ಮಾನ ಹರಾಜು ಆಗಿದೆ. ಕಾಂಗ್ರೆಸ್‌ನವರು ನಮ್ಮ ಮನೆ ಬಳಿ ಬಂದು ಪ್ರತಿಭಟಿಸುತ್ತಿದ್ದಾರೆ. ನೀವು ಮೊದಲು ನಿಮ್ಮ ಮುಖಂಡರ ಮನೆ ಮುಂದೆ ಪ್ರತಿಭಟಿಸಿ ಎಂದು ಹೇಳಿದರು.
ನಾನು ಪಲಾಯನ ಮಾಡುವುದಿಲ್ಲ: ಎಚ್‌ಡಿಕೆ
ಎಚ್.ಡಿ. ರೇವಣ್ಣ ಕುಟುಂಬದ ವಿಷಯ ಕೆದಕಿದರೆ ನಾನು ಚರ್ಚೆ ಮಾಡಲು ಸಿದ್ಧ. ನಾನು ಪಲಾಯಾನ ಮಾಡುವುದಿಲ್ಲ. ಕಾಂಗ್ರೆಸ್ ನಾಯಕ ಮಹಾಪರಾಧ ಮಾಡಿದ್ದಾನೆ. ಎಷ್ಟು ತಿಂಗಳ ಹಿಂದೆ ಆ ಮಹಾನ್ ನಾಯಕನಿಗೆ ಗೊತ್ತಿತ್ತು. ಪೆನ್‌ಡ್ರೈವ್ ಯಾರು ಸರಬರಾಜು ಮಾಡಿದರು ಎಲ್ಲವೂ ಗೊತ್ತಿದೆ. ಈ ಮಹಾನ್ ನಾಯಕನ ನಡವಳಿಕೆಯ ಬಗ್ಗೆಯೂ ಚರ್ಚಿಸೋಣ ಎಂದು ತಿರುಗೇಟು ಕೊಟ್ಟರು.
ರಾಜ್ಯದಲ್ಲಿ ಸದ್ಯ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಎನ್ನಲಾದ ಪೆನ್‌ಡ್ರೈವ್ ಪ್ರಕರಣ ದಿನದಿಂದ ದಿನಕ್ಕೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು, ಜೆಡಿಎಸ್ ವಿರುದ್ಧ ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಹುಬ್ಬಳ್ಳಿಯ ಖಾಸಗಿ ಹೋಟೆಲ್ ಮುಂದೆ ಕುಮಾರಸ್ವಾಮಿ ಮೇಲೆ ದಾಳಿಗೆ ಕೈ ಕಾರ್ಯಕರ್ತರು ಯತ್ನಿಸಿದರು. ಈ ವೇಳೆ ಕೈ ಕೈ ಮಿಲಾಯಿಸುಷ್ಟರ ಮಟ್ಟಿಗೆ ಗಲಾಟೆ ನಡೆದಿದೆ.












Click it and Unblock the Notifications