NWKRTC jog falls: ಜೋಗ್ ಫಾಲ್ಸ್ ಪ್ಯಾಕೇಜ್ ಟೂರ್‌ಗೆ ಉತ್ತಮ ಪ್ರತಿಕ್ರಿಯೆ
ಹುಬ್ಬಳ್ಳಿ: ರಾಜ್ಯದ ಹಲವು ಭಾಗದಲ್ಲಿ ಮಳೆ ತನ್ನ ನರ್ತನ ಮುಂದುವರೆಸಿದೆ. ಈ ಮಳೆಗಾಲದ ಸಮಯದಲ್ಲಿ ಪ್ರಕೃತಿ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು ಜನ ಸಹ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಇವರಿಗೆ ವಾಯುವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಈ ನಿಟ್ಟಿನಲ್ಲಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ. ಭೋರ್ಗರೆಯುವ ಜೋಗ್ ಫಾಲ್ಸ್‌ನ್ನು ಕುಟುಂಬಸ್ಥರ ಸಮೇತ ಕಣ್ಣು ತುಂಬಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರಸ್ತುತ ಮಳೆಗಾಲದ ದಿನಗಳು ಪ್ರಾರಂಭವಾಗಿರುವುದರಿಂದ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಆರಂಭಿಸಿದ ಜೋಗ್ ಫಾಲ್ಸ್ ಪ್ಯಾಕೇಜ್ ಟೂರ್ ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹುಬ್ಬಳ್ಳಿ ಗ್ರಾಮೀಣ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಹೇಳಿದರು.

ಇಂದು ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಜೋಗ ಫಾಲ್ಸ್ ಪ್ಯಾಕೇಜ್ ಟೂರ್ ಬಸ್ ಗಳಿಗೆ ಚಾಲನೆ ನೀಡಿ, ಅವರು ಮಾತನಾಡಿದರು. ಭಾನುವಾರ ಮತ್ತು ರಜಾ ದಿನಗಳಂದು ವಿಶೇಷ ಪ್ಯಾಕೇಜ ಟೂರ್ ಸಾರಿಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ವಿಶೇಷ ಸಾರಿಗೆಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ಸಾರ್ವಜನಿಕರು ಹುಬ್ಬಳ್ಳಿಯಿಂದ ಜೋಗ್ ಫಾಲ್ಸ್ ಗೆ ವಿಶೇಷ ಬಸ್ ಗಳನ್ನು ಆರಂಭಿಸಲಾಗಿದೆ. ಅಲ್ಲದೇ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಸಹ ಬಸ್ ಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಎಷ್ಟು ಬಸ್ ವ್ಯವಸ್ಥೆ ಮಾಡಲಾಗಿದೆ?
3 ರಾಜಹಂಸ ಹಾಗೂ 2 ಐರಾವತ ಬಸ್ ಗಳು ಜೋಗ್ ಫಾಲ್ಸ್ ಗೆ ಹೊರಟಿವೆ. ಎನ್.ಜಿ.ಒ ಹಾಗೂ ಸಂಘ ಸಂಸ್ಥೆಗಳು 30 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಲು ಸಿದ್ಧರಿದ್ದಾರೆ. ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗುವುದು. ಜೋಗ್ ಫಾಲ್ಸ್ ಜೊತೆಗೆ ಶಿರಸಿಯ ಮಾರಿಕಾಂಬಾ ದೇವಿಯ ದರ್ಶನವನ್ನು ಪ್ಯಾಕೇಜ್ ಟೂರ್ ಒಳಗೊಂಡಿದೆ. ಮಳೆಗಾಲವಿರುವುದರಿಂದ ಸಾರ್ವಜನಿಕರು ಪ್ಯಾಕೇಜ್ ಟೂರ್ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಎಷ್ಟೊತ್ತಿಗೆ ಬಸ್ ಹೊರಡುತ್ತದೆ?
ಹುಬ್ಬಳ್ಳಿ ಗೋಕುಲ ರಸ್ತೆಯ ಹೊಸ ಕೇಂದ್ರ ಬಸ್ ನಿಲ್ದಾಣದಿಂದ ಜೋಗಫಾಲ್ಸ್ ಗೆ ಬೆಳಿಗ್ಗೆ 07.30 ಕ್ಕೆ ರಾಜಹಂಸ 08:00 ಗಂಟೆಗೆ ವೋಲ್ವೋ ಮಲ್ಟಿ ಆಕ್ಸೆಲ್ ಸಾರಿಗೆ ಬಸ್‌ಗೆ ಸಂಚಾರ ಆರಂಭಿಸಲಿವೆ.. ಜೋಗಫಾಲ್ಸ್ ವೀಕ್ಷಿಸಿ ಮರಳಿ 21:30 ಮತ್ತು 21:00 ಗಂಟೆಗೆ ಹುಬ್ಬಳ್ಳಿಗೆ ಹಿಂತಿರುಗಲಿವೆ.

ಹುಬ್ಬಳ್ಳಿಯಿಂದ ಜೋಗ್ ಫಾಲ್ಸ್ ಗೆ ವಿಶೇಷ ಸಾರಿಗೆ ಆರಂಭಿಸಿರುವುದು ಖುಷಿ ನೀಡಿದೆ. ಮೊದಲ ಬಾರಿಗೆ ಆನ್ ಲೈನ್ ಬುಕಿಂಗ್ ಮಾಡಿ, ಜೋಗ್ ಫಾಲ್ಸ್ ವೀಕ್ಷಿಸಲು ತೆರಳುತ್ತಿದ್ದೇನೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಈ ಬಸ್ ಗಳು ಮಾರ್ಗ ಮಧ್ಯದಲ್ಲಿ ಶಿರಸಿ ಶ್ರೀ ಮಾರಿಕಾಂಬ ದೇವಸ್ಥಾನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ:7760991682, 7760991674 ಗೆ ಸಂಪರ್ಕಿಸಬಹುದಾಗಿದೆ. ವಿಶೇಷ ಪ್ಯಾಕೇಜ್ ಸಾರಿಗೆಗಳ ಮುಂಗಡ ಟಿಕೇಟ ಬುಕಿಂಗಗಾಗಿ www.ksrtc.in ವೆಬ್ ಸೈಟ್ ಅಥವಾ ಬಸ್ ನಿಲ್ದಾಣ ರಿಸರ್ವೇಶನ್ ಕೌಂಟರಗಳ ಮೂಲಕ ಆಸನಗಳನ್ನು ಕಾಯ್ದಿರಿಸಬಹುದಾಗಿರುತ್ತದೆ ಎಂದರು.












Click it and Unblock the Notifications