NWKRTC: ಇಂದಿನಿಂದ 65 ವಿಶೇಷ ಬಸ್‌ಗಳ ಕಾರ್ಯಾಚರಣೆ: ಎಲ್ಲಿಗೆ? ಮಾರ್ಗಗಳ ಮಾಹಿತಿ
ಹುಬ್ಬಳ್ಳಿ, ಮಾರ್ಚ್ 27: ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಇಂದಿನಿಂದ ಐದು ದಿನಗಳ ಕಾಲ ಜಾತ್ರೆ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ.
ಹೌದು, ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಯಮನೂರು ಚಾಂಗದೇವರು ಉರ್ಫ ರಾಜಾ ಬಾಗಸವಾರ ದೇವರ ಜಾತ್ರೆ ನಡೆಯಲಿದೆ. ಈ ಸಂಬಂಧ ಅಪಾರ ಸಂಖ್ಯೆಯ ಭಕ್ತಾದಿಗಳು ಬರಲಿದ್ದಾರೆ. ಇವರಿಗೂ ಸೇರಿದಂತೆ ಇತರೆ ಪ್ರಯಾಣಿಕರ ಸಹಾಯವಾಗಲೆಂದು NWKRTC ಇಂದಿನಿಂದ (ಮಾರ್ಚ್ 27) ಏಪ್ರಿಲ್ 1ರ ಸೋಮವಾರದವರೆಗೆ ಜಾತ್ರೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಉರುಸಿನ ಕಾರ್ಯಕ್ರಮಗಳ ವಿವರ
ಯಮನೂರು ಚಾಂಗದೇವರು ಉರ್ಫ ರಾಜಾ ಬಾಗಸವಾರ ದೇವರ ಜಾತ್ರೆಯು ಮಾರ್ಚ್ 28 ಗುರುವಾರದಿಂದ ಏಪ್ರಿಲ್ 1 ಸೋಮವಾರದವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಮಾರ್ಚ್ 29 ರಂದು ಶುಕ್ರವಾರ ಗಂಧಾಭಿಷೇಕ (ಸಂದಲ್) ಕಾರ್ಯಕ್ರಮ ಹಾಗೂ 30ರಂದು ಶನಿವಾರ ಪುಣ್ಯತಿಥಿ, ಮುಖ್ಯ ಉರುಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
ಈ ಜಾತ್ರೆಗೆ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ಕಲಘಟಗಿ,ಕುಂದಗೋಳ ಮತ್ತಿತರ ಸ್ಥಳಗಳಿಂದ ಅಲ್ಲದೆ ದೂರದ ಜಿಲ್ಲೆಗಳಾದ ಕಲಬುರಗಿ,ಯಾದಗಿರಿ, ರಾಯಚೂರು,ಕೊಪ್ಪಳ, ವಿಜಯಪುರ,ಬಾಗಲಕೋಟೆ ಮತ್ತಿತರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ.
ಕಲ್ಯಾಣ ಕರ್ನಾಟಕದಿಂದ ಅಣ್ಣಿಗೇರಿಗೆ
ಕಲಬುರಗಿ, ಯಾದಗಿರಿ, ಸಿಂಧನೂರು, ರಾಯಚೂರು, ಕೊಪ್ಪಳ, ಗಂಗಾವತಿ ಕಡೆಗಳಿಂದ ಬರುವವರಲ್ಲಿ ಬಹಳಷ್ಟು ಜನರು ರೈಲುಗಳ ಮೂಲಕ ಹಾಗೂ ಬಸ್ಸುಗಳ ಅಣ್ಣಿಗೇರಿವರೆಗೆ ಬರುತ್ತಾರೆ. ಅಲ್ಲಿಂದ ಯಮನೂರಿಗೆ ಬಸ್ಸುಗಳ ಮೂಲಕ ಬರುತ್ತಾರೆ. ಅವರ ಅನುಕೂಲಕ್ಕಾಗಿ ರೈಲುಗಳ ಆಗಮನ ಸಮಯಕ್ಕೆ ಅಣ್ಣಿಗೇರಿ ರೈಲು ನಿಲ್ದಾಣದಿಂದ ಹಾಗೂ ನಿರಂತರವಾಗಿ ಬಸ್ ನಿಲ್ದಾಣದಿಂದ ಯಮನೂರಿಗೆ ನೇರ ಜಾತ್ರೆ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಧಾರವಾಡ ಜಿಲ್ಲೆಯ ವಿವಿಧ ಸ್ಥಳಗಳಿಂದ ಬರುವವರು ಹುಬ್ಬಳ್ಳಿಯಿಂದ ಬಸ್ಸುಗಳ ಮೂಲಕ ಯಮನೂರಿಗೆ ಆಗಮಿಸುತ್ತಾರೆ. ಅವರ ಅನುಕೂಲಕ್ಕಾಗಿ ಹೊಸೂರು ಬಸ್ ನಿಲ್ದಾಣದಿಂದ ಯಮನೂರಿಗೆ ನೇರವಾಗಿ ಜಾತ್ರಾ ವಿಶೇಷ ಬಸ್ಸುಗಳನ್ನು ಬಿಡಲಾಗಿದೆ ಎಂದರು.
ಮಾ.30 ರಿಂದ ಏ.1ರವರೆಗೆ ಹಿಂದಿರುವವರಿಗೆ ಅನುಕೂಲ
ಕೆಲವರು ಗಂಧಾಭಿಷೇಕ ಮುಗಿಸಿಕೊಂಡು ಹಿಂದಿರುಗುತ್ತಾರೆ. ಬಹಳಷ್ಟು ಜನರು ಉರುಸ್ ಮುಗಿಸಿಕೊಂಡು ಹಿಂದಿರುಗುತ್ತಾರೆ. ಅವರ ಅನುಕೂಲಕ್ಕಾಗಿ ಮಾರ್ಚ್ 30 ರಿಂದ ಏಪ್ರಿಲ್ 1ರ ವರೆಗೆ ಯಮನೂರಿನಿಂದ ಅಣ್ಣಿಗೇರಿ ರೈಲ್ವೆ ನಿಲ್ದಾಣ, ಹುಬ್ಬಳ್ಳಿ, ಕಲಬುರಗಿ, ಯಾದಗಿರಿ, ಸಿಂಧನೂರು, ರಾಯಚೂರು, ಕೊಪ್ಪಳ, ಗಂಗಾವತಿ, ವಿಜಯಪುರ, ಬಾಗಲಕೋಟೆ ಮತ್ತಿತರ ಪ್ರಮುಖ ಸ್ಥಳಗಳಿಗೆ ತೆರಳಲು ಈ ವಿಶೇಷ ಬಸ್‌ಗಳ ಮೂಲಕ ತೆರಳಬಹುದಾಗಿದೆ ಎಂದು ತಿಳಿಸಿದರು.
ಈ ಜಾತ್ರೆಗೆಂದೇ NWKRTC 65 ಬಸ್ಸುಗಳು ಹಾಗೂ 150 ಚಾಲಕರು, ನಿರ್ವಾಹಕರು, ಮೇಲ್ವಿಚಾರಣೆಗಾಗಿ 12 ಅಧಿಕಾರಿಗಳು ಹಾಗೂ 42 ಮೇಲ್ವಿಚಾರಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.












Click it and Unblock the Notifications