NWKRTC: ನೌಕರರಿಗಾಗಿ 'ಸಾರಿಗೆ ಸಂಜೀವಿನಿ'ಗೆ ಚಾಲನೆ
ಹುಬ್ಬಳ್ಳಿ, ಮಾರ್ಚ್ 07: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ನೌಕರರಿಗೆ ಇಂದಿನಿಂದ ನಗದು ರಹಿತ ವೈದ್ಯಕೀಯ ಸೇವೆ ಕಲ್ಪಿಸಲು 'ಸಾರಿಗೆ ಸಂಜೀವಿನಿ' ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಯಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು 'ಸಾರಿಗೆ ಸಂಜೀವಿನಿ' ಯೋಜನೆಗೆ ಬುಧವಾರ ಚಾಲನೆ ನೀಡಿದರು.

ಈ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಸಿಬ್ಬಂದಿಯ ಹಿತದೃಷ್ಟಿಯಿಂದ ಹುಬ್ಬಳ್ಳಿಯ ಪ್ರತಿಷ್ಠಿತ 'ಕಿಮ್ಸ್' ಸಹಯೋಗದಲ್ಲಿ 'ಸಾರಿಗೆ ಸಂಜೀವಿನಿ' ನಗದು ರಹಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಸಂಬಂಧ ಸಾರಿಗೆ ಸಂಸ್ಥೆಯು ವೈದ್ಯಕೀಯ ಸಂಸ್ಥೆ ಜತೆಗೆ ಒಡಂಬಡಿಕೆ ಮಾಡಿಕೊಂಡು ಅಂಕಿತ ಹಾಕಲಾಯಿತು ಎಂದು ಅವರು ತಿಳಿಸಿದರು.
380ಕ್ಕೂ ಹೆಚ್ಚಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ನೌಕರರಿಗೆ ಉತ್ತಮ ಆರೋಗ್ಯ ಮತ್ತು ಉತ್ತಮ ದರ್ಜೆಯ ಚಿಕಿತ್ಸೆಗಾಗಿ 106 ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಸರ್ಕಾರವು ಗುರುತಿಸಿರುವ 380ಕ್ಕೂ ಹೆಚ್ಚಿನ ಆಸ್ಪತ್ರೆಗಳಿಗೆ ಮಾನ್ಯತೆ ನೀಡಿ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.
ಉತ್ತರ ಕರ್ನಾಟಕ ಭಾಗದ NWKRTC ಸಂಸ್ಥೆಯು ವ್ಯಾಪ್ತಿಯಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಕಾರವಾರ (ಉತ್ತರ ಕನ್ನಡ) ಜಿಲ್ಲೆಗಳಿಗೆ ಸಾರಿಗೆ ಸೇವಾ ಕಾರ್ಯ ನಿರ್ವಹಿಸಲಾಗುತ್ತಿದೆ. ಈ ಸಂಸ್ಥೆಯಲ್ಲಿ ಒಟ್ಟು 21,120 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಸುಮಾರು 15,000 ನೌಕರರು ಚಾಲಕ-ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಆರ್ಥಿಕ ತೊಂದರೆಯ ನೌಕರರಿಗೆ ಆರೋಗ್ಯ ಸೇವೆ
ಈ ವೇಳೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ಅವರು ಮಾತನಾಡಿ, ಸಂಸ್ಥೆಯ ಅನಾರೋಗ್ಯ ನೌಕರರು ಹಣಕಾಸಿನ ತೊಂದರೆಯಿಂದ ಬಳಸುತ್ತಿದ್ದರೆ ಅಂತವರಿಗೆ ಈ ಸಾರಿಗೆ ಸಂಜೀವಿನಿ ನಗರ ರಹಿತ ಆರೋಗ್ಯ ಸೇವೆ ನೀಡಲಿದೆ. ಈ ಉದ್ದೇಶದಿಂದ ಹುಬ್ಬಳ್ಳಿಯ ಕೀಮ್ಸ್ ಸಹಯೋಗದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಕಿಮ್ಸ್ ನಿರ್ದೇಶಕರಾದ ಡಾ, ಎಸ್. ಎಫ್.ಕಮ್ಮಾರ, ಕಿಮ್ಸ್ ಪ್ರಾಂಶುಪಾಲ ಡಾ. ಈಶ್ವರ ಹೊಸಮನಿ, ಡಾ. ಲಕ್ಷ್ಮೀಕಾಂತ ಲೋಕರೆ ಸೇರಿದಂತೆ ಕಿಮ್ಸ್ ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳು, ಸಿಬ್ಬಂದಿ ಮತ್ತಿತರರು ಪಾಲ್ಗೊಂಡಿದ್ದರು.
NWKRTC: ಉಜ್ಜಯಿನಿಗೆ ಸೇವೆ ಆರಂಭ
ಇದೇ ಮಾರ್ಚ್ 8 ಶಿವರಾತ್ರಿ ದಿನದಿಂದ ವಿದ್ಯಾಕಾಶಿ ಧಾರವಾಡದ ಹೊಸ ಬಸ್ ನಿಲ್ದಾಣದಿಂದ ವಿಜಯನಗರ ಜಿಲ್ಲೆಯ ಪಂಚಪೀಠದ ಉಜ್ಜಯಿನಿ ಧಾರ್ಮಿಕ ಕ್ಷೇತ್ರಕ್ಕೆ ಬಸ್ ಗಳು ಕಾರ್ಯಾಚರಣೆ ಆರಂಭವಾಗಲಿದೆ. ಪ್ರತಿದಿನ ಬೆಳಗ್ಗೆ 7.15 ರಿಂದ ಧಾರವಾಡದಿಂದ ಪ್ರಯಾಣ ಆರಂಭಿಸಿ ಮಧ್ಯಾಹ್ನ 12.30ಕ್ಕೆ ಉಜ್ಜಯಿನಿ ತಲುಪಲಿದೆ. ಭಕ್ತರಿಗೆ ದೇವರ ಪೂಜೆ, ದರ್ಶನ ಅನುಕೂಲವಾಗುವಂತೆ ನಿಗಮವು ಈ ಬಸ್ ಸೇವೆ ಆರಂಭಿಸಿದೆ.
ಅಲ್ಲಿಂದ ಮರಳಿ ಮಧ್ಯಾಹ್ನ 2 ಗಂಟೆಗೆ ಹೊರಟು ಅದೇ ದಿವಸ ಸಂಜೆ 6.30ಕ್ಕೆ ಧಾರವಾಡದ ಹೊಸ ಬಸ್ ನಿಲ್ದಾಣ ತಲುಪಲಿದೆ. ಹುಬ್ಬಳ್ಳಿ, ಗದಗ, ಮುಂಡರಗಿ, ಹಡಗಲಿ ಮೂಲಕ ಬಸ್‌ಗಳು ಉಜ್ಜಯಿನಿ ತಲುಪಲಿವೆ. ಸಾರ್ವಜನಿಕರು ಈ ಸೇವೆಯ ಸದುಪಯೋಗ ಮಾಡಿಕೊಳ್ಳಬೇಕಿದೆ.
ವಿಜಯನಗರ ಜಿಲ್ಲೆಯ ಪಂಚಪೀಠದ ಉಜ್ಜಯಿನಿ ಶ್ರೀ ಕ್ಷೇತ್ರಕ್ಕೆ ತೆರಳುವ ಭಕ್ತಾಧಿಗಳು ಮತ್ತು ಸಾರ್ವಜನಿಕ ಈ ವಿಶೇಷ ಬಸ್ ಸೌಲಭ್ಯದ ವ್ಯವಸ್ಥೆಯನ್ನು ಸುದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಚನ್ನಪ್ಪಗೌಡರ ವಿನಂತಿಸಿದ್ದಾರೆ.












Click it and Unblock the Notifications