ಮನೆ ಮಾಲೀಕರನ್ನು ವಿವಸ್ತ್ರಗೊಳಿಸಿ ಹಲ್ಲೆ, ದರೋಡೆ ಕೇಸ್: ಓರ್ವ ಅರೆಸ್ಟ್
ಹುಬ್ಬಳ್ಳಿ, ಡಿಸೆಂಬರ್ 29: ವಾಣಿಜ್ಯ ನಗರಿ ಎಂದು ಜನಪ್ರಿಯತೆ ಪಡೆದಿದರುವ ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ನಟೋರಿಯಸ್ ಕ್ರಿಮಿನಲ್‌ಗಳ ಗುಂಪು ಒಂಟಿ ಮನೆಗೆ ನುಗ್ಗಿ ಮನೆಯ ಮಾಲೀಕರನ್ನು ವಿವಸ್ತ್ರಗೊಳಿಸಿ ಹಿಗ್ಗಾ ಮುಗ್ಗಾ ಥಳಿಸಿ ದರೋಡೆ ಮಾಡಿರುವ ಅಮಾನವೀಯ ಕೃತ್ಯದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
ಇದೀಗ ಆ ನಟೋರಿಯಸ್ ಗುಂಪಿನ ಒಬ್ಬ ಆರೋಪಿ ಪತ್ತೆಯಾಗಿದ್ದು, ಪೊಲೀಸರು ಫೈರಿಂಗ್ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಕಾಲು ಗಾಯಗೊಂಡಿರುವ ಆರೋಪಿಯನ್ನು ಸದ್ಯ ಚಿಕಿತ್ಸೆಗಾಗಿ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಫೈರಿಂಗ್ ವೇಳೆ ಪೊಲೀಸ್ ಸಿಬ್ಬಂದಿಗೂ ಕೂಡ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಹುಬ್ಬಳ್ಳಿ-ಧಾರವಾಡ ಅವಳಿನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಪೊಲೀಸ್ ಸಿಬ್ಬಂದಿ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ನವಲೂರಿನಲ್ಲಿ ಆರೋಪಿಗಳು ವಿಕಾಸ್ ಕುಮಾರ್ ಎನ್ನುವವರ ಮನೆ ದರೋಡೆಗೆ ಪ್ರಯತ್ನ ಪಟ್ಟಿದ್ದಾರೆ ಎಂದು ತಿಳಿಸಿದರು.
ವಿಕಾಸ್ ಕುಮಾರ್ ಎಸ್‌ಡಿಎಂನಲ್ಲಿ ಮೆಡಿಕಲ್ ಸ್ಟಾಫ್ ಆಗಿದ್ದಾರೆ. ಹೊರವಲಯದಲ್ಲಿರುವ ಅವರ ಮನೆಗೆ ನುಗ್ಗಿದ ಡಕಾಯಿತೆಗೆ ಯತ್ನಿಸಿದ್ದರು. ಈ ಘಟನೆ ನಡೆದ ಕೂಡಲೇ ರೌಂಡ್ಸ್ ನಲ್ಲಿದ್ದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದಾರೆ. ಆಗ ಪಾಲಾ ವೆಂಕಟೇಶ್ವರ ಅಲಿಯಾಸ್ ಕಲ್ಯಾಣ್ ಕುಮಾರ್ ಎಂಬಾತ ಸೆರೆ ಸಿಕ್ಕಿದ್ದಾನೆ. ಆತನೊಂದಿಗೆ ಮೂರನಾಲ್ಕು ಜನ ಬಂದಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ಬಹಿರಂಗವಾಗಿದೆ ಎಂದು ತಿಳಿಸಿದರು.
ಆರೋಪಿಗಳು ಸೇರುವ ಮಾಹಿತಿ ಮೇರೆಗೆ ಇಂಡಸ್ಟ್ರಿಯಲ್ ಏರಿಯಾಕ್ಕೆ ಹೋಗಿದ್ದೇವು. ಈ ವೇಳೆ ದರೋಡೆಕೋರರ ಗುಂಪು ಏಕಾಏಕಿ ಹಲ್ಲೆ ಮಾಡಲು ಯತ್ನಿಸಿ, ತಪ್ಪಿಸಿಕೊಂಡು ಹೋಗಲು ಪ್ರಯತ್ನ ಪಟ್ಟಿತು. ಆಗ ಸ್ಥಳದಲ್ಲೇ ಇದ್ದ ಪಿಎಸ್ಐ ಪ್ರಮೋದ್ ಆತ್ಮ ರಕ್ಷಣೆಗಾಗಿ ಎರಡು ಸುತ್ತಿನ ಫೈರಿಂಗ್ ಮಾಡಿದ್ದಾರೆ. ಈ ವೇಳೆ ದರೋಡೆಕೋರ ಪಾಲಾ ವೆಂಕಟೇಶ್ವರ ಅಲಿಯಾಸ್ ಕಲ್ಯಾಣ್ ಕುಮಾರ್‌ನ ಎರಡು ಕಾಲಿಗೆ ಗುಂಡು ತಾಗಿ ಸ್ಥಳದಲ್ಲೇ ಬಿದ್ದಿದ್ದಾನೆ. ಆತನನ್ನು ಕೂಡಲೇ ಅಲ್ಲಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು.

ಒಂಟಿ ಮನೆಗಳೇ ದರೋಡೆಕೋರರ ಟಾರ್ಗೆಟ್
ಜೂನ್ 6ರಂದು ಅಶೋಕ ಕದಂ ಮನೆಗೆ ನುಗ್ಗಿ ಅಟ್ಟಹಾಸ ಮೆರೆದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಟೋರಿಯಸ್ ಕ್ರಿಮಿನಲ್ ಪಾಲಾ ವೆಂಕಟೇಶ್ವರರಾವ್ ಮೂಲತಃ ಆಂಧ್ರಪ್ರದೇಶ ಮೂಲದವನು ಎಂದು ತಿಳಿದು ಬಂದಿದೆ. ಒಂಟಿ ಮನೆಗಳನ್ನೇ ಈ ದರೋಡೆಕೋರರು ಟಾರ್ಗೆಟ್ ಮಾಡಿ, ಮನೆಯವರನ್ನೆಲ್ಲಾ ಮನಸೋಇಚ್ಛೋ ಹೊಡೆದು ಹಲ್ಲೆ ಮಾಡುತ್ತಾರೆ ಆ ಬಳಿಕ ದರೋಡೆ ಮಾಡುತ್ತಾರೆ ಎಂದು ತಿಳಿದುಬಂದಿದೆ.
ನಟೋರಿಯಸ್ ಕ್ರಿಮಿನಲ್‌ಗಳ ಭಯಾನಕ ಕೃತ್ಯದ ದೃಶ್ಯಗಳು ಲಭ್ಯವಾಗಿವೆ. ಆರೋಪಿಗಳು ಕಳೆದ ಹಲವು ತಿಂಗಳುಗಳಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಭಯಾನಕತೆ ಸೃಷ್ಠಿ ಮಾಡಿದ್ದಾರೆ. ಇದನ್ನೇ ಕಸಬು ಮಾಡಿಕೊಂಡಿದ್ದ ಕ್ರಿಮಿನಲ್ ನಟೋರಿಯಸ್‌ಗಳ ಗ್ಯಾಂಗ್ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇದೇ ರೀತಿ ಭಯದ ವಾತಾವಾರಣ ಸೃಷ್ಟಿಸಿದ್ದಾರೆ. ಇವರೆಲ್ಲಾ ಒಂದೇ ಮನೆಯ ಸದಸ್ಯರು ಎಂದು ಹೇಳಲಾಗುತ್ತಿದ್ದು, ಸದ್ಯ ಓರ್ವ ದರೋಡೆಕೋರನ ಬಂಧನವಾಗಿದೆ.












Click it and Unblock the Notifications