ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯ: ಎಲ್ ಅಂಡ್ ಟಿ ಕಂಪನಿಗೆ ಬರೋಬ್ಬರಿ 1 ಕೋಟಿ ರೂ. ದಂಡ ವಿಧಿಸಿದ ಹುಬ್ಬಳ್ಳಿ-ಧಾರವಾಡ ಪಾಲಿಕೆ
ಧಾರವಾಡ, ಮಾರ್ಚ್, 28: ಸೋಮವಾರ ಧಾರವಾಡದ ಪಾಲಿಕೆ ಸಭಾ ಭವನದಲ್ಲಿ ಸಾಮಾನ್ಯ ಸಭೆಯನ್ನು ನಡೆಸಲಾಗಿತ್ತು. ಈ ವೇಳೆ ಪಾಲಿಕೆಯ ಸದಸ್ಯರು ಹಾಗೂ ಸಾರ್ವಜನಿಕರು ಎಲ್ ಅಂಡ್ ಟಿ ಕಂಪನಿ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ದೂರಿದ್ದರು. ನಂತರ ಮೇಯರ್ ಈರೇಶ ಅಂಚಟಗೇರಿಯವರು L & T ಸಂಸ್ಥೆಯವರು ನೀಡುತ್ತಿರುವ ಸೇವೆ ಮತ್ತು ಕಾಮಗಾರಿಗಳನ್ನು ಗುತ್ತಿಗೆ ಕರಾರಿನಂತೆ ನಿರ್ವಹಿಸಲಾಗಿದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸಿದ್ದು, ಕಂಪನಿಗೆ 1 ಕೋಟಿ ರೂ. ದಂಡ ವಿಧಿಸಿದ್ದಾರೆ.
ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯ
ಪಾಲಿಕೆ ಆಯುಕ್ತರು ಕೂಡ ಕಂಪನಿಗೆ ನೀರಿನ ಅಸಮರ್ಪಕ ನಿರ್ವಹಣೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ನೀರಿನ ನಿರ್ವಹಣೆ ದೃಢೀಕರಣ ಮಾಡುವ ಕಾರ್ಯವನ್ನು ಕೆಯುಐಡಿಎಫ್‌ಸಿ ಮತ್ತು ಪಿಎಂಸಿ ಸಂಸ್ಥೆಯವರು ಸಮರ್ಪಕವಾಗಿ ಮಾಡುತ್ತಿಲ್ಲ. ನೀರು ಸರಬರಾಜು ಕಾಮಗಾರಿಗಳನ್ನು ನಿರ್ವಹಣೆ ವ್ಯವಸ್ಥೆ ಬಗ್ಗೆ ಅನುಭವವಿರುವ ಸಮರ್ಥ ಅಧಿಕಾರಿಗಳನ್ನು ಸಹ ನಿಯೋಜನೆ ಮಾಡಿಲ್ಲ.

ಆದ್ದರಿಂದ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ವಿಫಲರಾದ ಕಾರಣಗಳನ್ನು ಪರಿಗಣಿಸಿದ್ದು, ಸಂಬಂಧಪಟ್ಟ ಕೆಯುಐಡಿಎಫ್‌ಸಿ ಮತ್ತು ಪಿಎಂಸಿ ಅಧಿಕಾರಿಗಳ ಮಟ್ಟದಲ್ಲಿ ವಿಷಯಗಳನ್ನು ಚರ್ಚಿಸಲಾಯಿತು. ಆದರೂ ಯಾವುದೇ ರೀತಿಯ ಪರಿಣಾಮ ಆಗದೇ, ಸಾರ್ವಜನಿಕರಿಂದ ನಿರಂತರವಾಗಿ ನೀರಿನ ಸಮಸ್ಯೆಗಳ ಬಗ್ಗೆ ದೂರುಗಳು ಬರುತ್ತಲೇ ಇವೆ.
L & T ಕಂಪನಿಗೆ ಒಂದು ಕೋಟಿ ರೂ. ದಂಡ
ಈ ಸಮಸ್ಯೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಯಾವ ಅಧಿಕಾರಿಗಳು ಜವಾಬ್ದಾರಿಯುತ ಕಾರ್ಯವನ್ನು ಮಾಡಿರಲಿಲ್ಲ. ಇದನ್ನು ಗಮನಿಸಿದ ಮೇಯರ್, L & T ಕಂಪನಿಗೆ ಒಂದು ಕೋಟಿ ರೂಪಾಯಿ ದಂಡಗಳನ್ನು ವಿಧಿಸಿ ಆದೇಶ ಹೊರಡಿಸಿದರು. ಅಲ್ಲದೇ ಮುಂಬರುವ 15 ದಿನಗಳ ಒಳಗೆ ಅವಳಿ ನಗರದ ಎಲ್ಲಾ ಬೋರ್‌ವೆಲ್‌ಗಳನ್ನು ದುರಸ್ತಿಗೊಳಿಸಿ, ನೀರಿನ ಸರಬರಾಜು ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸೂಚನೆ ನೀಡಿದರು.

ನಗರದಲ್ಲಿ ನೀರಿಗಾಗಿ ಹಾಹಾಕಾರ
ಇನ್ನು ಇತ್ತೀಚೆಗಷ್ಟೇ ನಗರದ ಕೇಲಗೇರಿ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ತಡರಾತ್ರಿ ರಸ್ತೆ ಸಂಚಾರ ಸ್ಥಗಿತಗೊಳಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಬೇಸಿಗೆ ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಆರಂಭವಾಗಿದ್ದು, ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಮೊದಲು ವಾರಕ್ಕೊಮ್ಮೆ ಬರುತ್ತಿದ್ದ ನೀರು ಈಗ 16 ದಿನಗಳಿಗೊಮ್ಮೆ, ಒಂದೊಂದು ಕಡೆ ತಿಂಗಳಿಗೊಮ್ಮೆ ಬರುವಂತಾಗಿದೆ. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮಸ್ಯೆಯ ಗಂಭೀರತೆ ಅರಿತು ಅದನ್ನು ನಿವಾರಿಸಬೇಕಾದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಕಾರರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಕುಡಿಯಲು ನೀರು ಸರಬರಾಜು ಮಾಡುವವರೆಗೂ ರಸ್ತೆ ತಡೆ ನಡೆಸುವುದಾಗಿ ಪ್ರತಿಭಟನಾಕಾರರು ಪಟ್ಟುಹಿಡಿದಿದ್ದರು.
ಸಾರ್ವಜನಿಕರು ಪಿಬಿ ರಸ್ತೆಯ ಮೇಲೆ ಕುಳಿತು ರಸ್ತೆ ತಡೆ ಮಾಡಿದ್ದರಿಂದ ರಸ್ತೆ ಸಂಚಾರಕ್ಕೆ ತಡೆ ಉಂಟಾಗಿತ್ತು. ಅದರಿಂದಾಗಿ ಸುಮಾರು ಎರಡು ಗಂಟೆಗೂ ಅಧಿಕ ಕಾಲ ನೂರಾರು ವಾಹನಗಳು ರಸ್ತೆಯ ಮೇಲೆ ಕಾದು ನಿಂತಿದ್ದು, ವಾಹನ ದಟ್ಟಣ ಹೆಚ್ಚಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದ್ದರು. ಪೊಲೀಸರ ಮನವಿಗೆ ಸ್ಪಂದಿಸದ ಪ್ರತಿಭಟನಾಕಾರರು, ನೀರು ಬಿಡುವವರೆಗೂ ರಸ್ತೆತಡೆ ನಡೆಸುವುದಾಗಿ ಮಹಾನಗರ ಪಾಲಿಕೆ ಹಾಗೂ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.












Click it and Unblock the Notifications