National Youth Festival 2023: ಹುಬ್ಬಳ್ಳಿಗೆ ಆಗಮಿಸಲಿರುವ ಪ್ರಧಾನಿ ಮೋದಿ; ಭದ್ರತೆ ಹೇಗಿದೆ?, ಇಲ್ಲಿದೆ ವಿವರ
ಹುಬ್ಬಳ್ಳಿ, ಜನವರಿ, 11: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಜನವರಿ 12ರಿಂದ ನಡೆಯಲಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 2900 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ರೈಲ್ವೆ ಮೈದಾನದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, 7 ಜನ ಎಸ್‌ಪಿ ದರ್ಜೆ ಅಧಿಕಾರಿಗಳು, 25 ಡಿವೈಎಸ್‌ಪಿಗಳು, 60 ಪಿಐ, 18 ಕೆಎಸ್‌ಆರ್‌ಪಿ ಸೇರಿದಂತೆ ಗರುಡಾ, ಸಿಎಆರ್, ಡಿಎಆರ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಜರುಗಿಸಲಾಗಿದೆ ಎಂದರು.
ಬೆಂಗಳೂರಿನ ಟ್ರಾಫಿಕ್ ಸಿಬ್ಬಂದಿ ನಿಯೋಜನೆ
ಸುಗಮ ಸಂಚಾರಕ್ಕೆ ಬೆಂಗಳೂರಿನ ಟ್ರಾಫಿಕ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಬರುವ ಮಾರ್ಗದ ಉದ್ದಕ್ಕೂ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ರೈಲ್ವೆ ಮೈದಾನದ ಮುಖ್ಯ ವೇದಿಕೆಯ ಸುತ್ತಲೂ ಭಾರಿ ಭದ್ರತೆ ಮಾಡಲಾಗಿದ್ದು, ಮುಂಜಾನೆ 10 ಗಂಟೆ ನಂತರ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.

ಟ್ರಾಫಿಕ್ ನಿಯಂತ್ರಣಕ್ಕೆ ಪರ್ಯಾಯ ಮಾರ್ಗ
ಟ್ರಾಫಿಕ್ ನಿಯಂತ್ರಣಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಮಾಡಲಾಗಿದೆ. ಜನರಿಗೆ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮಕ್ಕೆ ಸಹ ಸೂಚನೆ ನೀಡಲಾಗಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ ಒಂದು ಗಂಟೆ ಸಂಚಾರಕ್ಕೆ ನಿರ್ಬಂಧ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ವಹಿಸಲಾಗಿದೆ. ಯಾವ ಸಂಘಟನೆ, ಯಾರಾದರೂ ಮನವಿ ಕೊಡುವುದಾದರೆ ಪೊಲೀಸ್ ಕಮೀಷನರ್, ಜಿಲ್ಲಾಧಿಕಾರಿಗೆ ಮಾತ್ರ ಮನವಿ ನೀಡಬಹುದು ಎಂದರು.
ಮೋದಿಗಾಗಿ ಸಿದ್ಧವಾದ ವಿಶೇಷ ಉಡುಗೊರೆಗಳು
ಇನ್ನು ಪ್ರಧಾನಿ ಅವರಿಗೆ ಬಿದರಿ ಕಲೆಯಲ್ಲಿ ಅರಳಿದ ಸ್ವಾಮಿ ವಿವೇಕಾನಂದರ ಮನಮೋಹಕ ಮೂರ್ತಿಯನ್ನು ಸ್ಮರಣಿಯಾಗಿ ನೀಡಿ ಗೌರವಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಗುರುವಾರ ಸಂಜೆ 4 ಗಂಟೆಗೆ ಯುವಜನೋತ್ಸವವನ್ನು ಉದ್ಘಾಟಿಸಲಿರುವ ಗೌರವಾನ್ವಿತ ಪ್ರಧಾನಮಂತ್ರಿ ಅವರನ್ನು ಜಿಲ್ಲಾಡಳಿತದಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಗುತ್ತಿದೆ. ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮ ದಿನವೂ ಸಹ ಆಗಿರುವುದರಿಂದ ಅವರ ಸ್ಮರಣಾರ್ಥ ಬೀದರ್ ಜಿಲ್ಲೆಯ ಖ್ಯಾತಿಯನ್ನು ಜಗತ್‌ಪ್ರಸಿದ್ಧವಾಗಿಸಿದ ಬಿದರಿ ಕಲೆಯಲ್ಲಿ ನಿರ್ಮಿಸಿದ ಸುಂದರ ಮೂರ್ತಿಯನ್ನು ನೀಡಲಾಗುತ್ತಿದೆ.
ಹಾವೇರಿ ಜಿಲ್ಲೆ ಏಲಕ್ಕಿ ಬೆಳೆಯಲು ಪ್ರಸಿದ್ಧಿ ಪಡೆದಿದ್ದು, ಹಾವೇರಿಯಲ್ಲಿ ವಿಶೇಷವಾಗಿ ಏಲಕ್ಕಿ ಹಾರವನ್ನು ಸಿದ್ಧಪಡಿಸಲಾಗಿದೆ. ಏಲಕ್ಕಿ ಪೇಟ್ ಹೊಂದಿರುವ ಇದು ಏಲಕ್ಕಿಯ ಸುವಾಸನೆಯನ್ನು ಬೀರುತ್ತದೆ. ಧಾರವಾಡದಲ್ಲಿ ಪ್ರಧಾನಿ ಅವರಿಗೆ ಹೊದಿಸಲೆಂದೇ ವಿಶೇಷವಾಗಿ ನೇಯಲಾದ ಕಸೂತಿ ಕಲೆ ಹೊಂದಿರುವ ಹಾಂಡ್ ಲೂಮ್ ಶಾಲು ಮತ್ತು ಧಾರವಾಡ ಜಿಲ್ಲೆಯ ಗರಗ ಹಾಗೂ ಬೆಂಗೇರಿಯಲ್ಲಿ ತಯಾರಿಸಲಾದ ಧ್ವಜವನ್ನು, ಟೀಕ್ ವುಡ್‌ನಲ್ಲಿ ಧ್ವಜಕ್ಕೆ ಚೌಕಟ್ಟು ಹಾಕಿರುವ ಫ್ರೇಮ್ ಅನ್ನು ಉಡುಗೊರೆಯಾಗಿ ನೀಡಿ ಗೌರವಿಸಲಾಗುತ್ತಿದೆ.












Click it and Unblock the Notifications