ಹುಬ್ಬಳ್ಳಿಯಲ್ಲಿ ಕರ್ನಾಟಕ ಬಂದ್ ಹೇಗಿದೆ?
ಹುಬ್ಬಳ್ಳಿ, ಮಾರ್ಚ್ 22: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಲವು ಕನ್ನಡ ಪರ ಸಂಘಟನೆಗಳು ಇಂದು ನೀಡಿರುವ ಕರ್ನಾಟಕ ಬಂದ್‌ಗೆ ಕರೆಗೆ ಹುಬ್ಬಳ್ಳಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕ ಬಂದ್‌ಗೆ ಬಹುತೇಕ ಸಂಘ ಸಂಸ್ಥೆಗಳು, ಸಾರ್ವಜನಿಕರು ವಿರೋಧ ವ್ಯಕ್ತವಾಗಿದ್ದು, ಬಂದ್ ತೀವ್ರತೆ ಕಡಿಮೆ ಇದೆ.
ಕೆಲ ಸಂಘಟನೆಗಳು ಸಾಂಕೇತಿಕ ಬಂದ್ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಹೀಗಾಗಿ, ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಬಸ್, ಆಟೋ ಸಂಚಾರ ಎಂದಿನಂತೆಯೇ ಇದ್ದು, ಮಾರುಕಟ್ಟೆ, ಹೊಟೇಲ್‌ನಲ್ಲಿ ದೈನಂದಿನ ವ್ಯವಹಾರ ಚಟುವಟಿಕೆ ನಡೆಯುತ್ತಿದೆ. ಆಟೋ ಚಾಲಕರ ಸಂಘ, ಲಾರಿ ಮಾಲೀಕರ ಅಸೋಸಿಯೇಶನ್, ಕಟ್ಟಡ ಕಾರ್ಮಿಕರು, ಟಾಟಾ ಎಸಿ ಚಾಲಕರ ಹಾಗೂ ಮಾಲೀಕರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಕರ್ನಾಟಕ ಬಂದ್‌ಗೆ ಬೆಂಬಲ ನೀಡಿಲ್ಲ.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸರ್ಕಾರದಿಂದ ನಮಗೆ ಯಾವುದೇ ಸೂಚನೆಗಳು ಬಂದಿಲ್ಲ. ನಾವು ಎಂದಿನಂತೆ ಕಾರ್ಯಾಚರಣೆ ಮಾಡುತ್ತಿದ್ದೇವೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವಾಕರಸಾ ಸಂಸ್ಥೆಯಿಂದ ಕಾರ್ಯಾಚರಣೆ ಮಾಡಲು ತೀರ್ಮಾನಿಸಲಾಗಿದೆ. ಪೊಲೀಸ್ ಇಲಾಖೆ ಸಲಹೆ ಸೂಚನೆಯಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ವಾಕರಸಾ ಸಂಸ್ಥೆಯ ನಿರ್ದೇಶಕಿ ಪ್ರಿಯಾಂಗ್ ಎಂ. ತಿಳಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ 25 ಸಾವಿರ ಆಟೋಗಳಿವೆ. ಅವುಗಳು ಎಂದಿನಂತೆ ಕಾರ್ಯಾಚರಣೆ ಮಾಡಲಿವೆ. ಮಕ್ಕಳ ಪರೀಕ್ಷೆ ಹಿನ್ನೆಲೆಯಲ್ಲಿ ಬಂದ್‌ಗೆ ಬೆಂಬಲ ನೀಡುವುದಿಲ್ಲ. ಎಲ್ಲವೂ ಆಟೋಗಳು ಕಾರ್ಯಾಚರಣೆ ಮಾಡುತ್ತಿವೆ ಎಂದು ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ತಿಳಿಸಿದ್ದಾರೆ.

ಇನ್ನು ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಿದ್ದು, ಏಕಾಏಕಿ ಬೀದಿಗೀಳಿದ ವಿವಿಧ ಕನ್ನಡ ಪರ ಹೋರಾಟಗಾರರು ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದರು. ಚೆನ್ನಮ್ಮ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ ಹೋರಾಟಗಾರರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಂದ್‌ಗೆ ಬೆಂಬಲ ನೀಡಿದ ವಿಜಯ ಸೇನೆ ಮತ್ತು ಇನ್ನಿತರ ಸಂಘಟನೆಗಳ ಮುಖಂಡರು ಮೇಕೆದಾಟು, ಮಹದಾಯಿ ಯೋಜನೆ ಜಾರಿಗೆ ಸರ್ಕಾರವನ್ನು ಆಗ್ರಹಿಸಿದರು. ಅಲ್ಲದೇ ಬೆಳಗಾವಿಯಲ್ಲಿ ಮರಾಠ ಪುಂಡರ ಹಾವಳಿ ತಡೆಗೆ ಬಂದ್ ಕರೆ ನೀಡಿದ್ದು ಸ್ವಾಗತಾರ್ಹ ಎಂದರು.












Click it and Unblock the Notifications