ಹುಬ್ಬಳ್ಳಿ: ಅಕ್ರಮ ಮರಳು ಸಾಗಾಟದ ಟಿಪ್ಪರ್ ವಶಕ್ಕೆ ಪಡೆದ ಗಣಿ & ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು
ಹುಬ್ಬಳ್ಳಿ, ಆಗಸ್ಟ್, 03: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಅಡ್ಡೆ ಮೇಲೆ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಅದರಗುಂಚಿ, ಕೋಟಗೊಂಡಹುಣಸಿ, ನೂಲ್ವಿ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಯತ್ತಿತ್ತು. ಇನ್ನು ಈ ಬಗ್ಗೆ ಮಾಹಿತಿ ಕೆಲೆಹಾಕಿದ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿ ಬಿಂದನಾ ಪಾಟೀಲ್ ನೇತೃತ್ವದ ತಂಡ ಕಾರವಾರ ರಸ್ತೆಯಲ್ಲಿ ದಾಳಿ ಮಾಡಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ಟಿಪ್ಪರ್ ವಾಹನವನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಕರಣ ದಾಖಲು ಮಾಡಿದ್ದಾರೆ. ನಗರ ಸೇರಿದಂತೆ ನಗರದ ಹೊರವಲಯದಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ಅಡ್ಡೆಗಳು ನಾಯಿಕೊಡೆಯಂತೆ ಎದ್ದಿದ್ದು, ಅವುಗಳ ಮೇಲೆಯೂ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೋ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.
ಪೊಲೀಸ್ ಇಲಾಖೆಯೊಳಗೆ ಹೈಡ್ರಾಮ
ಮಂಡ್ಯ ಜಿಲ್ಲೆಯೊಳಗೆ ಅಕ್ರಮ ಮರಳು ಗಣಿಗಾರಿಕೆ ಸದ್ದಿಲ್ಲದೆ ನಡೆಯುತ್ತಿರುವ ಬೆನ್ನಲ್ಲೇ ಪೊಲೀಸ್ ಇಲಾಖೆಯೊಳಗೆ ಹೈಡ್ರಾಮವೊಂದು ನಡೆದಿರುವ ಸಂಗತಿ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು.
ನಗರದ ಅಗ್ನಿಶಾಮಕ ಠಾಣೆ ಎದುರು ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ತಡೆಹಿಡಿದ ಮಂಡ್ಯ ಪೂರ್ವ ಠಾಣೆ ಪಿಎಸ್‌ಐ ಆರ್.ಮಂಜುನಾಥ್ ಮೇಲೆ ಮರಳು ದಂಧೆಕೋರರು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆಂದು ಸ್ವತಃ ಪಿಎಸ್‌ಐ ಅವರೇ ದೂರು ನೀಡಿ ಎಫ್‌ಐಆರ್ ದಾಖಲಿಸಿದ್ದಾರೆ.
ಆದರೆ, ದೂರಿನಲ್ಲಿರುವಂತೆ ಪಿಎಸ್‌ಐ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆದಿದ್ದರೆ ದೊಡ್ಡ ಪ್ರಮಾಣದ ಗಾಯಗಳಾಗಬೇಕಿತ್ತು. ಯಾವುದೇ ಗಾಯದ ಗುರುತು ಕಂಡುಬರದ ಹಿನ್ನೆಲೆಯಲ್ಲಿ ಸುಳ್ಳು ದೂರು ನೀಡಿದ ಆರೋಪದ ಮೇಲೆ ಪಿಎಸ್‌ಐ ಆರ್.ಮಂಜುನಾಥ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಆದೇಶ ಹೊರಡಿಸಿದ್ದಾರೆ.
ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಪಿಎಸ್‌ಐ ಆರ್.ಮಂಜುನಾಥ್ ಅವರು ಜುಲೈ 28ರಂದು ರಾತ್ರಿ 9:30ರ ಸಮಯದಲ್ಲಿ ಜೀಪ್ ಚಾಲಕ ನಾಗರಾಜು ಜೊತೆ ಗುತ್ತಲು ರಸ್ತೆಯಲ್ಲಿ ಗಸ್ತಿನಲ್ಲಿದ್ದರು. ಇದೇ ವೇಳೆ ಮದ್ದೂರು ಕಡೆಯಿಂದ ಮಂಡ್ಯ ನಗರಕ್ಕೆ ಹೆದ್ದಾರಿ ರಸ್ತೆಯಲ್ಲಿ ಒಂದು ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಬಂದಿದೆ. ಈ ಮಾಹಿತಿಯನ್ನು ಆಧರಿಸಿ ರಾತ್ರಿ 9:50ಕ್ಕೆ ಅಗ್ನಿಶಾಮಕ ಠಾಣೆ ಎದುರು ಮದ್ದೂರು ಕಡೆಯಿಂದ ಒಂದು ಟಿಪ್ಪರ್ ಲಾರಿ ಬರುತ್ತಿದ್ದು, ಅನುಮಾನಗೊಂಡ ಪಿಎಸ್‌ಐ ಲಾರಿಯನ್ನು ತಡೆಹಿಡಿದು ನಿಲ್ಲಿಸಿದ್ದಾರೆ.
ಲಾರಿಯಲ್ಲಿ ಸಾಗಿಸುತ್ತಿರುವ ಸರಕಿನ ಬಗ್ಗೆ ಚಾಲಕನನ್ನು ವಿಚಾರಿಸಸುತ್ತಿದ್ದಾಗ, ಲಾರಿ ಚಾಲಕ ಮತ್ತು ಆತನ ಜೊತೆಯಲ್ಲಿದ್ದ ಇನ್ನೂ 3 ಜನರು ಕೆಳಗಿಳಿದು ಬಂದು ನನಗೆ ತಳ್ಳಾಡಲು ಶುರು ಮಾಡಿದರು. ಅದರಲ್ಲಿ ಒಬ್ಬ ವ್ಯಕ್ತಿ ತನ್ನ ಬಳಿ ಇದ್ದ ಒಂದು ಕಬ್ಬಿಣದ ರಾಡ್‌ನಿಂದ ನನ್ನ ಬೆನ್ನಿನ ಮೇಲೆ ಹಲ್ಲೆ ಮಾಡಿದನು. ನಾನು ಆತನನ್ನು ಹಿಡಿಯಲು ಹೋದಾಗ ಮತ್ತೆ ಕಬ್ಬಿಣದ ರಾಡ್‌ನಿಂದ ನನ್ನ ಎಡ ತೋಳಿನ ಮೇಲೂ ಸಹ ಹಲ್ಲೆ ನಡೆಸಿದನು.
ಅಷ್ಟರಲಲ್ಲಿ ಜೀಪ್ ಚಾಲಕ ನಾಗರಾಜು ಸ್ಥಳಕ್ಕೆ ಓಡಿಬರುತ್ತಿದ್ದಂತೆ ಗುಂಪಿನಲ್ಲಿದ್ದವರು ಅರ್ಜುನ್ ಓಡು, ಓಡು ಎಂದು ಹೇಳಿ ಎಲ್ಲರೂ ಲಾರಿಯನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದಾರೆ. ಆ ಸಮಯದಲ್ಲಿ ಹಲ್ಲೆ ನಡೆಸಿದ ವ್ಯಕ್ತಿ ಅರ್ಜುನ್ ಎಂದು ತಿಳಿದುಬಂದಿತು ಎಂದು ಪಿಎಸ್‌ಐ ದೂರಿನಲ್ಲಿ ತಿಳಿಸಿದ್ದರು. ಟಿಪ್ಪರ್ ಲಾರಿ (ಕೆಎ-19 ಎಬಿ-3736) ಬಾಡಿ ಮಟ್ಟಕ್ಕೆ ಮರಳು ತುಂಬಿದ್ದು, ಲಾರಿ ಚಾಲಕ ಮತ್ತು ಆತನ ಜೊತೆಯಲ್ಲಿದ್ದ ಮೂವರು ವ್ಯಕ್ತಿಗಳು ಎಲ್ಲಿಂದಲೋ ಮರಳನ್ನು ಕದ್ದುಕೊಂಡು ಬಂದು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಮರಳು ಸಾಗಿಸುತ್ತಿರುವುದಾಗಿ ಕಂಡುಬಂದಿದೆ ಎಂದು ಉಲ್ಲೇಖಿಸಿದ್ದಾರೆ.
ಮರಳು ತುಂಬಿದ್ದ ಲಾರಿಯನ್ನು ವಶಪಡಿಸಿಕೊಂಡು ಠಾಣೆಯ ಮುಂದೆ ನಿಲ್ಲಿಸಿ ಜೀಪ್ ಚಾಲಕ ನಾಗರಾಜು ಅವರೊಂದಿಗೆ ಜಿಲ್ಲಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ಪಿಎಸ್‌ಐ ತಿಳಿಸಿದ್ದರು. ಪಿಎಸ್‌ಐ ನೀಡಿದ ದೂರನ್ನು ದಾಖಲಿಸಿಕೊಂಡು ಆರೋಪಿಗಳಾದ ಅರ್ಜುನ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 379, 353, 324, 332, 34ರ ಪ್ರಕಾರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.












Click it and Unblock the Notifications