ಡಿಸೆಂಬರ್ 5ರಂದು ಧ್ರುವ ಜತ್ತಿ - ಅಮೋಘಾ ಶೆಟ್ಟರ್ ಮದುವೆ; ಎರಡು ರಾಜಕೀಯ ಕುಟುಂಬಗಳ ಸಮಾಗಮ
ರಾಜ್ಯ ರಾಜಕೀಯದಲ್ಲಿ ಪಕ್ಷಗಳನ್ನು ಮೀರಿ ಅನೇಕ ಕುಟುಂಬಗಳು ಸಂಬಂಧ ಬೆಳೆಸಿರುವ ಉದಾಹರಣೆಗಳಿವೆ. ಇದೀಗ ರಾಜ್ಯವನ್ನಾಳಿದ ಇಬ್ಬರು ಮುಖ್ಯಮಂತ್ರಿಗಳ ಕುಟುಂಬಗಳು ಕೌಟುಂಬಿಕ ನಂಟು ಬೆಳೆಸಲು ಸಜ್ಜಾಗಿವೆ. ಮಾಜಿ ಮುಖ್ಯಮಂತ್ರಿ ಬಿ.ಡಿ ಜತ್ತಿ ಮತ್ತು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಕುಟುಂಬ ಇದೀಗ ವೈವಾಹಿಕ ಸಂಬಂಧ ಬೆಳೆಸುತ್ತಿವೆ.
ರಾಷ್ಟಪತಿ ಹುದ್ದೆಯನ್ನು ಅಲಂಕರಿಸಿದ ಏಕೈಕ ಕನ್ನಡಿಗ ಬಿ.ಡಿ ಜತ್ತಿರವರ ಮರಿ ಮೊಮ್ಮಗ, ಕಾಂಗ್ರೆಸ್ ಪಕ್ಷದ ವಕ್ತಾರ ಧ್ರುವ ಜತ್ತಿಯವರೊಂದಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ್ ರವರ ತಮ್ಮನ ಮಗಳು ಅಮೋಘಾ ಪ್ರದೀಪ ಶೆಟ್ಟರ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಡಿಸೆಂಬರ್ 5 ರಂದು ಹುಬ್ಬಳ್ಳಿಯಲ್ಲಿ ಇವರಿಬ್ಬರ ವಿವಾಹ ಕಾರ್ಯಕ್ರಮ ನಡೆಯಲಿದೆ.

ಬಿ. ಡಿ ಜತ್ತಿರವರ ಕುಟುಂಬದಿಂದ 40 ವರ್ಷಗಳ ನಂತರ ರಾಜಕೀಯಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ಯುವ ನಾಯಕ ಧ್ರುವ ಜತ್ತಿ, "ಜತ್ತಿ ಫೌಂಡೇಶನ್ " ಮುಖಾಂತರ ಅನೇಕ ಹಾಗೂ ವಿನೂತನ ಸಮಾಜ ಸೇವೆಯನ್ನು ಮಾಡುತ್ತಾ ತಮ್ಮ ಮುತ್ತಾತ ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತಿದ್ದಾರೆ.
ಪ್ರದೀಪ್ ಶೆಟ್ಟರ್ ಎರಡು ಸಲಾ ಬಿಜೆಪಿಯಿಂದ ವಿಧಾನ ಪರಿಷತಗೆ ಆಯ್ಕೆಯಾಗಿದ್ದು ಇವರ ಹಿರಿಯ ಮಗಳು ಅಮೋಘಾ ಶೆಟ್ಟರ್. ಶೆಟ್ಟರ್ ಮತ್ತು ಜತ್ತಿ ಕುಟುಂಬ ಲಿಂಗಾಯತ ಸಮುದಾಯದಲ್ಲಿ ಪ್ರಮುಖ ರಾಜಕೀಯ ಕುಟುಂಬಗಳಾಗಿ ಗುರುತಿಸಿಕೊಂಡಿವೆ.
ಜಗದೀಶ ಶೆಟ್ಟರ್ ರವರು ತಾವು ಕಾಂಗ್ರೆಸ್ ಸೇರ್ಪಡೆಯಾದಾಗ ಧ್ರುವ ಜತ್ತಿರವರನ್ನು ಹುಬ್ಬಳ್ಳಿ ಯಲ್ಲಿ ಭೇಟಿಯಾಗಿದ್ದು, ನಂತರ ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದ ಕೆಲವೇ ತಿಂಗಳಲ್ಲಿ ಎರಡು ಕುಟುಂಬಗಳು ವೈವಾಹಿಕ ಸಂಬಂಧವನ್ನು ಬೆಳೆಸಿಕೊಂಡಿವೆ.
ಈಗ ಜಗದೀಶ ಶೆಟ್ಟರ್ ರವರು ಬಿಜೆಪಿ ಸಂಸದರು ಹಾಗೂ ಅವರ ಅಳಿಯ ಆಗುವ ಧ್ರುವ ಜತ್ತಿ ಕಾಂಗ್ರೆಸ್ ಪಕ್ಷದ ದೇಶದ ಯುವ ವಕ್ತಾರರಾಗಿದ್ದಾರೆ. ರಾಜಕೀಯವನ್ನು ಬದಿಗಿಟ್ಟು ಎರಡೂ ಕುಟುಂಬಗಳು ಸಂಬಂಧ ಬೆಳೆಸಿವೆ. ಡಿಸೆಂಬರ್ 5ರಂದು ನಡೆಯಲಿರುವ ಈ ಮದುವೆ ಕಾರ್ಯಕ್ರಮದಲ್ಲಿ ರಾಜ್ಯದ ಅನೇಕ ರಾಜಕೀಯ ನಾಯಕರು ಭಾಗವಹಿಸುವ ಸಾಧ್ಯತೆ ಇದೆ.












Click it and Unblock the Notifications