ಬಿಜೆಪಿ ನಾಯಕರ ನಡೆ ಖಂಡಿಸಿ ಡಿ. 27ರಂದು ಉತ್ತರ ಕರ್ನಾಟಕ ಬಂದ್
ಹುಬ್ಬಳ್ಳಿ, ಡಿಸೆಂಬರ್ 22: ಬಿಜೆಪಿ ನಾಯಕರ ನಡೆಯನ್ನು ಖಂಡಿಸಿ ಡಿಸೆಂಬರ್ 27ರಂದು ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.
ಬಹುದಿನಗಳ ನಿರೀಕ್ಷೆಯ ಮಹಾದಾಯಿ ವಿವಾದ ಇತ್ಯರ್ಥಪಡಿಸುವ ನಿರೀಕ್ಷೆ ಕೊನೆಗೂ ಹುಸಿಗೊಳಿಸಿ, ಉತ್ತರಕರ್ನಾಟಕದ ಭಾಗದ ಜನರ ಮೂಗಿಗೆ ತುಪ್ಪ ಸವೆರಿದ ಬಿಜೆಪಿ ನಾಯಕರ ನಡೆಯನ್ನು ಖಂಡಿಸಿ ಈ ಬಂದ್ ಗೆ ಕರೆ ನೀಡಲಾಗಿದೆ.
ಶುಕ್ರವಾರ ಹುಬ್ಬಳ್ಳಿಯ ಪರಿವೀಕ್ಷಣಾ ಮಂದಿರದಲ್ಲಿ ಸಭೆ ನಡೆಸಿದ ಕಳಸಾ ಬಂಡೂರಿ, ಮಹಾದಾಯಿ ಹೋರಾಟ ಸಮಿತಿ ಮತ್ತು ವಿವಿಧ ಕನ್ನಡ ಪರ ಸಂಘಟನೆಯ ಸದಸ್ಯರು ಈ ನಿರ್ಧಾರ ಕೈಗೊಂಡಿದ್ದಾರೆ.

ಗುರುವಾರ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಹಾದಾಯಿ ಮತ್ತು ಕಳಸಾ ಬಂಡೂರಿ ಯೋಜನೆಯ ಘೋಷಣೆ ಮಾಡುವುದಾಗಿ ಬಿಎಸ್ ಯಡಿಯೂರಪ್ಪ ಹೇಳಿದ್ದರು. ಆದರೆ ಬಿಜೆಪಿ ನಾಯಕರು ಕೊಟ್ಟ ಮಾತಿಗೆ ತಪ್ಪಿದ್ದಾರೆ. ಹೀಗಾಗಿ 27 ರಂದು ಬಂದ್ ಗೆ ಕರೆ ನೀಡಲಾಗಿದೆ.
ಇನ್ನು, "ಮಹಾದಾಯಿ ವಿವಾದ ಇತ್ಯರ್ಥ ಪಡಿಸುವುದಾಗಿ ಬಿಜೆಪಿ ನಾಯಕರು ಮಹಾ ನಾಟಕ ಮಾಡಿದ್ದಾರೆ," ಎಂದು ಬಿಜೆಪಿ ನಾಯಕರ ವಿರುದ್ಧ ಮಹಾದಾಯಿ ಹೋರಾಟಗಾರರ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ವಿವಾದ ಇತ್ಯರ್ಥಪಡಿಸಬೇಕು. ಅಲ್ಲಿಯವರೆಗೂ ಹೋರಾಟವನ್ನು ಮುಂದುವರಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ. ಇನ್ನು 27ರಂದು ನಡೆಯುವ ಬಂದ್ ಗೆ ಎಪಿಎಂಸಿ ವರ್ತಕರ ಸಂಘ, ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಹಾಗೂ ಹಲವಾರು ಸಂಘಟನೆಗಳು ಬೆಂಬಲ ನೀಡಿವೆ.












Click it and Unblock the Notifications