Amit Shah On Jagadish Shettar: ಜಗದೀಶ್ ಶೆಟ್ಟರ್ ಸೋಲು ಖಚಿತ: ಭವಿಷ್ಯ ನುಡಿದ ಚುನಾವಣಾ ಚಾಣಕ್ಯ
ಎಲ್ಲಾ ಹುದ್ದೆಗಳನ್ನು ಕೊಟ್ಟ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಈ ಬಾರಿಯ ಚುನಾವಣೆಯಲ್ಲಿ ಸೋಲುತ್ತಾರೆ. ಬಿಜೆಪಿ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯವೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರಿದ್ದರಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ನಷ್ಟವಾಗಲ್ಲ. ಜಗದೀಶ್ ಶೆಟ್ಟರ್ ಅವರೊಬ್ಬರಿಗೇ ಟಿಕೆಟ್ ತಪ್ಪಿಸಿಲ್ಲ. ಹಲವು ಹಾಲಿ ಹಾಗೂ ಹಿರಿಯರಿಗೆ ಟಿಕೆಟ್ ನೀಡಿಲ್ಲ. ಅದಕ್ಕೆ ಕಾರಣವನ್ನು ಅವರಿಗೆ ಹೇಳಿದ್ದೇವೆ ಎಂದು ಚುನಾವಣಾ ಚಾಣಕ್ಯ ಅಮಿತ್ ಶಾ ಹೇಳಿದರು.

ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅಮಿತ್ ಶಾ, "ಜಗದೀಶ್ ಶೆಟ್ಟರ್‌ಗೆ ಮಾತ್ರ ಟಿಕೆಟ್ ಕೈತಪ್ಪಿಲ್ಲ. ಅವರಿಗೆ ಏಕೆ ಟಿಕೆಟ್ ನೀಡುತ್ತಿಲ್ಲ ಎಂಬುದನ್ನು ಮೊದಲೇ ತಿಳಿಸಿದ್ದೆವು, ಅದನ್ನು ಇಲ್ಲಿ ಬಹಿರಂಗಪಡಿಸಲ್ಲ. ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಮನವರಿಕೆ ಮಾಡಿಕೊಡುತ್ತೇವೆ".
"ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಖಂಡಿತವಾಗಿ ಜಗದೀಶ್ ಶೆಟ್ಟರ್ ಸೋಲುತ್ತಾರೆ," ಎಂದು ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ತಿಳಿಸಿದರು.

ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿ ಯಾರ ಕಪಿಮುಷ್ಟಿಯಲ್ಲಿತ್ತು? ಯಾರ ಕಪಿಮುಷ್ಟಿಯಲ್ಲೂ ಇಲ್ಲ, ಹಿಂದೆ ಹೇಗಿದೆಯೋ? ಈಗಲೂ ಹಾಗೆಯೇ ಇದೆ ಎಂದು ಅಮಿತ್ ಶಾ ಟಾಂಗ್ ನೀಡಿದರು.
ಲಿಂಗಾಯತರಿಗೆ ನಾಯಕರನ್ನು ಕಡೆಗಣಿಸಲಾಗುತ್ತದೆ ಎಂಬ ಆರೋಪಗಳಿಗೆ ಉತ್ತರಿಸಿದ ಅಮಿತ್ ಶಾ, "ಲಿಂಗಾಯತರನ್ನು ತೆಗೆದು ನಾವು ಲಿಂಗಾಯತರಿಗೇ ಟಿಕೆಟ್ ಕೊಟ್ಟಿದ್ದೇವೆ, ಬೇರೆಯವರಿಗೆ ಕೊಟ್ಟಿಲ್ಲ. ಈ ಹಿಂದೆ ಕಾಂಗ್ರೆಸ್ ಇಬ್ಬರು ಲಿಂಗಾಯತ ಮುಖ್ಯಮಂತ್ರಿಗಳಿಗೆ ಅಪಮಾನ ಮಾಡಿದೆ".
"ಬಿಜೆಪಿ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂದು ಹೇಳುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ. ಬಿಜೆಪಿ ಎಲ್ಲ ಸಮುದಾಯಕ್ಕೂ ಗೌರವ ಕೊಟ್ಟಿದೆ. ಜೆಡಿಎಸ್ ಪಕ್ಷದಲ್ಲಿ ಕುಮಾರಸ್ವಾಮಿ ಖಾಯಂ ಸಿಎಂ. ಆದರೆ ಬಿಜೆಪಿಯಲ್ಲಿ ಅಧ್ಯಕ್ಷರು, ಮುಖ್ಯಮಂತ್ರಿಗಳು, ಪದಾಧಿಕಾರಿಗಳು ಬದಲಾಗುತ್ತಾರೆ," ಎಂದು ವಾಗ್ದಾಳಿ ನಡೆಸಿದರು.

ಮಹದಾಯಿ ಹೋರಾಟಕ್ಕೆ ಕಾಂಗ್ರೆಸ್ ನ್ಯಾಯ ಒದಗಿಸಲಿಲ್ಲ; ಅಮಿತ್ ಶಾ
"ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಹದಾಯಿ ವಿವಾದವನ್ನು ಬಗೆಹರಿಸಬಹುದಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಮಹದಾಯಿ ವಿವಾದ ಬಗೆಹರಿಸಲಿಲ್ಲ. ನೀರು ಕೇಳಿದವರಿಗೆ ಕಾಂಗ್ರೆಸ್ ಸರ್ಕಾರ ಗುಂಡೇಟು, ಲಾಠಿ ಏಟು ನೀಡಿದೆ. ಕಿತ್ತೂರು ಕರ್ನಾಟಕಕ್ಕೆ ಕಾಂಗ್ರೆಸ್‌ನಿಂದ ಅಪಮಾನ ಮಾಡುವ ಕೆಲಸ ಆಗಿದೆ," ಎಂದು ಆರೋಪಿಸಿದರು.
"ಮಹದಾಯಿ ಹೋರಾಟಕ್ಕೆ ಕಾಂಗ್ರೆಸ್ ನ್ಯಾಯ ಒದಗಿಸಲಿಲ್ಲ. ಆದರೆ ಬಿಜೆಪಿ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಿದೆ. ಉತ್ತರ ಕರ್ನಾಟಕದ ಕೃಷ್ಣಾ ಮೇಲ್ದಂಡೆ, ತುಂಗಾ ಮೇಲ್ದಂಡೆ ಯೋಜನೆಗಳಿಗೂ ಆದ್ಯತೆ ನೀಡಿದೆ. ಕೆರೂರು ಏತ ನೀರಾವರಿ ಯೋಜನೆಗೆ ಆದ್ಯತೆ ನೀಡಿದ್ದೇವೆ. ಧಾರವಾಡ ಮತ್ತು ಬೆಳಗಾವಿ ನಡುವಿನ ರೈಲ್ವೆ ಯೋಜನೆಗೂ ಚಾಲನೆ ಸಿಗಲಿದೆ," ಎಂದು ಅಮಿತ್ ಶಾ ತಿಳಿಸಿದರು.
ಮುಸ್ಲಿಮರಿಗೇಕೆ ಟಿಕೆಟ್ ನೀಡಲ್ಲ?
ಸತತ ಎರಡನೇ ಬಾರಿಯೂ ಬಿಜೆಪಿ ಪಕ್ಷದಲ್ಲಿ ಯಾವುದೇ ಮುಸ್ಲಿಂ ಅಭ್ಯರ್ಥಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಅಮಿತ್ ಶಾ, ""ನಾವು ಗೆಲ್ಲುವ ಅರ್ಹತೆಯ ಆಧಾರದಲ್ಲಿ ಟಿಕೆಟ್ ನೀಡಿದ್ದೇವೆ. ಬಹುಸಂಖ್ಯಾತ, ಅಲ್ಪಸಂಖ್ಯಾತ ಎಂಬ ಆಧಾರದಲ್ಲಿ ಟಿಕೆಟ್ ನೀಡಿಲ್ಲ,'' ಎಂದು ಸ್ಪಷ್ಟಪಡಿಸಿದರು.












Click it and Unblock the Notifications