Jagadish Shettar vs BL Santosh: ಬಿಎಲ್ ಸಂತೋಷ್ ವಿರುದ್ಧ ಗುರುತರ ಆರೋಪ ಮಾಡಿದ ಜಗದೀಶ್ ಶೆಟ್ಟರ್
ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯೊಂಡ ಜಗದೀಶ್ ಶೆಟ್ಟರ್ ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅವರು ಹಲವಾರು ವಿಚಾರಗಳನ್ನು ಹಂಚಿಕೊಂಡರು. ಶೆಟ್ಟರ್ ಅವರು ಬಿಎಲ್ ಸಂತೋಷ್ ವಿರುದ್ಧ ಶೆಟ್ಟರ್ ಗುರುತರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್, 'ನನಗೆ ಹಾಗೂ ರಾಮದಾಸ್ ಅವರಿಗೆ ಟಿಕೆಟ್ ಕೈತಪ್ಪುವಂತೆ ಮಾಡಿದ್ದೇ ಬಿಎಲ್ ಸಂತೋಷ್' ಎಂದು ಹೇಳಿದ್ದಾರೆ.

'ನಾನು ಹಲವಾರು ದಿನಗಳಿಂದ ವೇದನೆ ಪಡುತ್ತಿದ್ದೇನೆ. ಹಲವು ನಾಯಕರ ಬಗ್ಗೆ ನಾನು ಮಾತನಾಡಬೇಕಿದೆ. ಬಿಜೆಪಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ನಾನು ಮಾತನಾಡದೇ ಇದ್ದರೆ ಮುಂದೆ ಸಮಸ್ಯೆ ಎದುರಾಗಲಿದೆ' ಎಂದರು.
ನನ್ನನ್ನು ಕರೆದು ಸೌಜನ್ಯದಿಂದ ಮಾತನಾಡಲಿಲ್ಲ. ಚಿಕ್ಕ ಹುಡುಗನಿಗೆ ಹೇಳಿದಂತೆ ಟಿಕೆಟ್ ಇಲ್ಲ ಎಂದು ನನಗೆ ಹೇಳಿದರು...
— oneindiakannada (@OneindiaKannada) April 18, 2023
-ಜಗದೀಶ್ ಶೆಟ್ಟರ್#jagadishshettar #bjp #congress #karnatakaelections2023 pic.twitter.com/yS69mgKzRH
'ಅಲ್ಪ ಅವಧಿಯಲ್ಲಿ ಸಮಸ್ಯೆಗಳನ್ನು ನಿವಾರಣೆ ಮಾಡಿ ಪಕ್ಷಕ್ಕಾಗಿ ದುಡಿದಿದ್ದೇನೆ. ಹೀಗಾಗಿ ಉತ್ತರ ಕರ್ನಾಟಕದಲ್ಲಿ ಬಹಳ ದೊಡ್ಡ ಶಕ್ತಿ ಹೊಂದಿದ್ದೇನೆ. ನನಗೆ ಟಿಕೆಟ್ ತಪ್ಪಲು ಕೆಲವರು ಕಾರಣರಾಗಿದ್ದಾರೆ. ಇದಕ್ಕೆಲ್ಲ ಬಿಎಲ್ ಸಂತೋಷ್ ಪ್ರಮುಖ ಕಾರಣ. ಯಾವುದೇ ಕಪ್ಪು ಚುಕ್ಕೆ ಆಪಾದನೆ ನನ್ನ ಮೇಲೆ ಇಲ್ಲ. ಬೊಮ್ಮಾಯಿ ಸರ್ಕಾರದಲ್ಲಿ ನಾನು ಮಂತ್ರಿಯಾಗಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಲು ನಾನು ಶ್ರಮಿಸಿದ್ದೇನೆ. ನನಗೆ ಕಲ್ಯಾಣ ಕರ್ನಾಟಕ ಸೇರಿ ಹಲವಾರು ಜವಬ್ದಾರಿ ಕೊಟ್ಟಿದ್ದಾರೆ. ನಾನು ಅದನ್ನು ಚೆನ್ನಾಗಿ ನಿಭಾಯಿಸಿದ್ದೇನೆ. ಪಕ್ಷದ ಸೇವೆಯನ್ನು ನಿಷ್ಠೆಯಿಂದ ಮಾಡಿದ್ದೇನೆ. ಉತ್ತರ ಕರ್ನಾಟಕದಲ್ಲಿ ಮೂರನೇ ಸ್ಥಾನದಲ್ಲಿ ಬಿಜೆಪಿ ಇತ್ತು. ಎಲ್ಲಾ ಜವಬ್ದಾರಿಗಳನ್ನು ಅಚ್ಚುಕಟ್ಟಾಗಿ ಮಾಡಿದ್ದೇನೆ. ಆದರೂ ಪಕ್ಷ ನನ್ನನ್ನು ಕಡೆಗಣಿಸಿದ ರೀತಿ ನನಗೆ ಬೇಸರ ತಂದಿದೆ ಎಂದರು.

'ನನ್ನನ್ನು ಕರೆದು ಸೌಜನ್ಯದಿಂದ ಮಾತನಾಡಲಿಲ್ಲ. ಚಿಕ್ಕ ಹುಡುಗನಿಗೆ ಹೇಳಿದಂತೆ ಟಿಕೆಟ್ ಇಲ್ಲ ಎಂದು ನನಗೆ ಹೇಳಿದರು. ಶೆಟ್ಟರ್ ಲಿಂಗಾಯತ ಅಲ್ಲ ಅಂತ ಕೆಲವರು ಮಾತನಾಡುತ್ತಾರೆ. ಟಿಕೆಟ್ ತೆಗೆದುಕೊಳ್ಳುವುದು ಮುಖ್ಯ ಅಲ್ಲ. ನನ್ನನ್ನು ಕಡೆಗಣಿಸಿದ ರೀತಿ ನನಗೆ ಸರಿ ಎನಿಸಲಿಲ್ಲ. ನನಗೆ ಟಿಕೆಟ್ ತಪ್ಪಿಸಲು ಕೆಲ ನಾಯಕರಿಂದ ಷಡ್ಯಂತ್ರ ನಡೆದಿದೆ' ಎಂದು ಶೆಟ್ಟರ್ ಕಿಡಿ ಕಾರಿದರು.
'ನಾನು ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ತೆಂಗಿನಕಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ಮೇಲೆ ಪಕ್ಷಕ್ಕೆ ಅಷ್ಟು ಗೌರವವಿದ್ದರೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಬಹುದಿತ್ತು ಅಥವಾ ಕೇಂದ್ರಕ್ಕೆ ತೆಗೆದುಕೊಳ್ಳಬಹುದಾಗಿತ್ತು.ನನ್ನನ್ನು ಪದೇ ಪದೇ ಅವಮಾನಿಸಿದರು. ಅಪಪ್ರಚಾರ ನಡೆಸಿದರು. ಕಡೆಗೆ ಟಿಕೆಟ್ ಕೊಡದೇ ಸತಾಯಿಸಿದರು' ಎಂದು ಆರೋಪಿಸಿದ್ದಾರೆ.
ಈಗ ರಾಜ್ಯಪಾಲರನ್ನಾಗಿಸುತ್ತಿದ್ದೆವು, ರಾಜ್ಯಸಭೆಗೆ ಆರಿಸುತ್ತಿದ್ದೆವು ಎಂದೆಲ್ಲಾ ಹೇಳುತ್ತಾರೆ. ಅವೆಲ್ಲಾ ನಾವು ಪಕ್ಷ ಬಿಟ್ಟ ಮೇಲೆ ಬರ್ತಾ ಇರೋ ಮಾತುಗಳು. ಇದೇ ಮಾತುಗಳನ್ನು ನನ್ನನ್ನು ಸೌಜನ್ಯದಿಂದ ಕರೆಯಿಸಿ ಏಕೆ ಮಾತನಾಡಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಇನ್ನು, ನನಗೆ ಮುಖ್ಯಮಂತ್ರಿ ಅಧಿಕಾರ ಕೊಟ್ಟಿದ್ದಕ್ಕೆ ನಾನು ಬಿಜೆಪಿಗೆ ಧನ್ಯವಾದ ಅರ್ಪಿಸುತ್ತೇನೆ. ಆದರೆ, 10 ತಿಂಗಳ ಕಾಲವಷ್ಟೇ ಅಧಿಕಾರ ಕೊಟ್ಟಿದ್ದು. ನನಗಿಂತಲೂ ಕಿರಿಯರಾದ ಬೊಮ್ಮಾಯಿಯವರಿಗೆ ಈಗಾಗಲೇ ಸುಮಾರು 2 ವರ್ಷಗಳಿಂದ ಸಿಎಂ ಪದವಿ ಕೊಟ್ಟಿದ್ದೀರಲ್ಲವೇ? ನನಗೆ ಅದಕ್ಕಿಂತಲೂ ಕಡಿಮೆ ಅವಧಿಗೆ ಕೊಡಲಾಗಿದೆ'' ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಸಂತೋಷ್ ಅವರ ಮಾನಸಪುತ್ರರು ಕೆಲವರಿದ್ದಾರೆ. ಅವರಿಗೆ ಒಳ್ಳೆಯದು ಮಾಡುವ ಉದ್ದೇಶದಿಂದಾಗಿ ನನ್ನನ್ನು ದೂರ ತಳ್ಳಬೇಕಿತ್ತು. ಅವರಿಗೆ, ಅವರಿಗೆ ನನ್ನನ್ನು ದೂರ ತಳ್ಳಲು ಯಾವುದೇ ಕಾರಣಗಳು ಇರಲಿಲ್ಲ. ನಾನು ಪಕ್ಷಕ್ಕೆ ನಿಷ್ಠಾವಂತ, ಶುದ್ಧಹಸ್ತನೆಂಬುದು ಅವರಿಗೆ ಗೊತ್ತಿತ್ತು. ಹಾಗಾಗಿ, ನನ್ನ ವಿರುದ್ಧ ಕಿತಾಪತಿಗಳನ್ನು ಶುರು ಮಾಡಿದರು.












Click it and Unblock the Notifications