Sonia Gandhi: ಹುಬ್ಬಳ್ಳಿ ಜನರಿಗೆ ಸೋನಿಯಾ ಗಾಂಧಿ ಮಾಡಿದ ಮನವಿ ಏನು?
ಹುಬ್ಬಳ್ಳಿ, ಮೇ, 06: ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯ ನಾಯಕರ ಪರವಾಗಿ ರಾಷ್ಟ್ರೀಯ ನಾಯಕರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಹುಬ್ಬಳ್ಳಿಯಯಲ್ಲಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದರು. ಈ ವೇಳೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು ಸಹೋದರ, ಸಹೋದರಿಯರಿಗೆ ನಮಸ್ಕಾರ. ರಾಜ್ಯದ ಭವಿಷ್ಯ ಇನ್ನುಮುಂದೆ ಬದಲಾಗಲಿದೆ ಎಂದರು.
ಕರ್ನಾಟಕದ ಜನರು ವಿವಿಧ ಕ್ಷೇತ್ರಗಳಲ್ಲಿ ದೇಶದ ಹೆಸರನ್ನು ಬೆಳಗಿಸಿದ್ದೀರಿ. ಇಂದಿರಾ ಗಾಂಧಿಯವರು ರಾಜಕೀಯ ಜೀವನದಲ್ಲಿ ಹೋರಾಡುತ್ತಿದ್ದಾಗ ಚಿಕ್ಕಮಗಳೂರು ಜನರು ಕೈಹಿಡಿದಿದ್ದರು. ಇದೇ ರೀತಿ 24 ವರ್ಷಗಳ ಹಿಂದೆ ನನಗೂ ಬಳ್ಳಾರಿ ಜನರು ಬೆಂಬಲಿಸಿದ್ದರು. ಈ ಬಾರಿಯೂ ಕರ್ನಾಟಕದ ಅಭಿವೃದ್ಧಿಗಾಗಿ ನೀವು ಕಾಂಗ್ರೆಸ್ ಅನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ ತೊಲಗಿಸುವವರೆಗೆ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿಯವರು ದರೋಡೆಯನ್ನೇ ದಂಧೆಯಾಗಿ ಮಾಡಿಕೊಂಡಿದ್ದಾರೆ. 40 ಪರ್ಸೆಂಟ್ ಸರ್ಕಾರ ಜನರನ್ನು ಲೂಟಿ ಮಾಡುತ್ತಿದ್ದು, ಇದಕ್ಕೆ ಮುಂದಿನ ದಿನಗಳಲ್ಲಿ ಅವರಿಗೆ ಜನರೇ ಬುದ್ಧಿ ಕಲಸಲಿದ್ದಾರೆ. ಬಿಜೆಪಿಯವರು ಸಂವಿಧಾನಾತ್ಮಕ ಸಂಸ್ಥೆಗಳನ್ನು ತಮ್ಮ ಜೇಬಲ್ಲಿವೆ ಎಂದು ಭಾವಿಸುತ್ತಾರೆ. ಮತ್ತೊಂದೆಡೆ ಬಿಜೆಪಿ ಸೋತರೆ ಜಗಳವಾಗುತ್ತದೆ ಎಂದು ಧಮ್ಕಿ ಹಾಕುತ್ತಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಆಶಿರ್ವಾದ ಸಿಗಲ್ಲ ಅಂತಾರೆ. ಆದರೆ ಕರ್ನಾಟಕದ ಜನರನ್ನು ಇಷ್ಟೊಂದು ಕೇವಲವಾಗಿ ಭಾವಿಸಬೇಡಿ. ಕರ್ನಾಟಕದ ಜನರು ಯಾರದ್ದೋ ಆಶಿರ್ವಾದವನ್ನು ಬಯಸುವುದಿಲ್ಲ. ಇಲ್ಲಿನ ಜನರಿಗೆ ತಮ್ಮ ಶಕ್ತಿ, ಪರಿಶ್ರಮದ ಮೇಲೆ ವಿಶ್ವಾಸವಿದೆ. ಇಲ್ಲಿನ ಜನರು ಯಾರಿಗೂ ಹೆದರುವುದಿಲ್ಲ. ಚುನಾವಣೆಯಲ್ಲಿ ಮತದಾರರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಾಗೆಯೆ ಬಿಜೆಪಿಯವರು ನಂದಿನಿಯನ್ನು ಲೂಟಿ ಮಾಡಿ ಹಾಳು ಮಾಡುತ್ತಿದ್ದಾರೆ ಎಂದರು. ಇನ್ನು ಬಸವೇಶ್ವರರು ಎಲ್ಲರಿಗೂ ಸಮಾನತೆಯ ಸಂದೇಶ ಸಾರಿದ್ದರು. ಆದ್ದರಿಂದ ಕರ್ನಾಟಕ ಬಸವೇಶ್ವರರ ಪುಣ್ಯ ಭೂಮಿ ಆಗಿದೆ. ಅಲ್ಲದೆ ಮಹಾನ್ ಕವಿ ಕುವೆಂಪು ಅವರ ಜನ್ಮ ಭೂಮಿಯೂ ಆಗಿದೆ. ಆದರೆ ಬಿಜೆಪಿಯು ಅವರ ಭಾವನೆಯನ್ನು ಪ್ರತಿನಿತ್ಯ ಕದಡುವ ಕೆಲಸವನ್ನು ಮಾಡುತ್ತಿದೆ. ಏನೇ ಆಗಲಿ ನಿಮ್ಮ ಸ್ವಾರ್ಥಕ್ಕಾಗಿ ಕರ್ನಾಟಕವನ್ನು ಬಲಿ ಕೊಡಬೇಡಿ ಎಂದು ಮನವಿ ಮಾಡಿದರು.
ಲೂಟಿ, ಕಮೀಷನ್ ಮುಕ್ತವಾದ ಸರ್ಕಾರಕ್ಕಾಗಿ ಕಾಂಗ್ರೆಸ್ ಮೇಲೆ ಭರವಸೆ ಇಡಿ. ರಾಜಸ್ಥಾನ, ಹಿಮಾಚಲ, ಛತ್ತೀಸ್‌ಘಡದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಎಲ್ಲಾ ಭರವಸೆಯನ್ನು ಈಡೇರಿಸಿದೆ. ಕರ್ನಾಟಕ ಯಾವುದೇ ಸನ್ನಿವೇಶದಲ್ಲೂ ನಿಮ್ಮ ವಿಶ್ವಾಸ ಉಳಿಸಿಕೊಳ್ಳಲಿದೆ. ಎಲ್ಲಾ ಭಾಗ್ಯಗಳನ್ನು ಈಡೇರಿಸುತ್ತೇವೆ. ಬಿಜೆಪಿಯಿಂದ ಕರ್ನಾಟಕದ ಲೂಟಿ ತಡೆಯಲು ಕಾಂಗ್ರೆಸ್‌ನ ಅಭ್ಯರ್ಥಿಗಳನ್ನು ಗೆಲ್ಲಿಸಿ. ಈ ಮೂಲಕ ಪ್ರಗತಿಯ ಗ್ಯಾರಂಟಿ ಕೊಡುವ ಸರ್ಕಾರ ತರಲು ಆಶೀರ್ವದಿಸಿ ಎಂದರು.












Click it and Unblock the Notifications