ನನ್ನ ಕಚೇರಿಯಲ್ಲಿರುವ ಪ್ರಧಾನಿ ಮೋದಿ, ಅಮಿತ್ ಶಾ ಫೋಟೋ ತೆಗೆಯಲ್ಲ; ಜಗದೀಶ್ ಶೆಟ್ಟರ್
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಕಾರಣ ಜಗದೀಶ್ ಶೆಟ್ಟರ್ ಅವರು ಹಲವು ದಶಕಗಳ ಕಾಲದ ಸಂಬಂಧವನ್ನು ಕಳೆದುಕೊಂದು ಬಿಜೆಪಿ ತೊರೆದಿದ್ದಾರೆ. ಬಳಿಕ ಕಾಂಗ್ರೆಸ್ ಪಕ್ಷ ಸೇರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.
ತಾವು ಬೆಳೆದು ಬಂದ ಸಂಘ ಪರಿವಾರ, ಜನ ಸಂಘ ಮತ್ತು ಬಿಜೆಪಿ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಕಾಂಗ್ರೆಸ್ ಪಕ್ಷ ಸೇರಿರುವ ಜಗದೀಶ್ ಶೆಟ್ಟರ್, ಇದೀಗ ಬಿಜೆಪಿ ಪಕ್ಷದ ವಿರುದ್ಧವೇ ತೊಡೆ ತಟ್ಟಿದ್ದಾರೆ. ಇದೇ ಕೊನೆಯ ಚುನಾವಣೆ ಎಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರಿದ ನಂತರವೂ ಜಗದೀಶ್ ಶೆಟ್ಟರ್ ಕಚೇರಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ತೆಗೆದಿಲ್ಲ. ಫೋಟೋ ತೆಗೆಯುವುದು ನನ್ನ ಸಂಸ್ಕೃತಿ ಅಲ್ಲ, ನನ್ನ ಜಾಯಮಾನಕ್ಕೆ ಬಂದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬಿಜೆಪಿ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಕಾಂಗ್ರೆಸ್ ಪಕ್ಷ ಸೇರಿದರೂ ಜಗದೀಶ್ ಶೆಟ್ಟರ್ ಅವರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿರುವ ಫೋಟೋಗಳು ಈಗಲೂ ಗೋಡೆಯ ಮೇಲೆ ನೇತಾಡುತ್ತಿವೆ. ಇದು ಸದ್ಯ ರಾಜ್ಯದಲ್ಲಿ ಭಾರೀ ಸುದ್ದಿಯಾಗಿದೆ.
ಸಾಮಾನ್ಯವಾಗಿ ರಾಜಕೀಯ ನಾಯಕರು ಪಕ್ಷ ಬದಲಾಯಿಸುತ್ತಿದ್ದಂತೆ ಅವರವರ ಕಚೇರಿಯಲ್ಲಿ ಕಣ್ಣಿಗೆ ಕುಕ್ಕುವಂತೆ ರಾರಾಜಿಸುವ ಫೋಟೋಗಳನ್ನು ತೆರವುಗೊಳಿಸಿ ಹಾಲಿ ಪಕ್ಷದ ನಾಯಕರ ಫೋಟೋ ಹಾಕುವುದು ಸರ್ವೇ ಸಾಮಾನ್ಯ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್, "ಈಗಿಂದೀಗಲೇ ನಾನು ನನ್ನ ಕಾಂಗ್ರೆಸ್ ಪಕ್ಷದ ನಾಯಕರ ಭಾವಚಿತ್ರಗಳನ್ನು ನನ್ನ ಕಚೇರಿಯಲ್ಲಿ ಹಾಕಬಹುದು, ಆದರೆ ಅದು ನನಗೆ ಇಷ್ಟವಿಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ," ಎಂದು ಹೇಳಿದ್ದಾರೆ.
ಜಗದೀಶ್ ಶೆಟ್ಟರ್ 1994ರಿಂದಲೂ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಶಾಸಕ, ಮಂತ್ರಿ, ಮುಖ್ಯಮಂತ್ರಿ ಹುದ್ದೇಗೇರಿದವರು ಜಗದೀಶ್ ಶೆಟ್ಟರ್. ಟಿಕೆಟ್ ನೀಡದ ಕಾರಣದಿಂದ ಬಿಜೆಪಿ ಜೊತೆಗಿನ ದೀರ್ಘಕಾಲದ ಸಂಬಂಧ ಮುರಿದುಕೊಂಡು ಕಾಂಗ್ರೆಸ್ ಸೇರಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಜಗದೀಶ್ ಶೆಟ್ಟರ್ ವಿಧಾನಸಭಾ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಗೃಹ ಕಚೇರಿಯ ಸೋಫಾದಲ್ಲಿ ಕುಳಿತು ತನ್ನ ಬೆಂಬಲಿಗರು ಮತ್ತು ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ. ಅವರು ಕುಳಿತುಕೊಳ್ಳುವ ತಲೆಯ ಮೇಲೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಭಾವಚಿತ್ರಗಳಿವೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವ ಸೂಚಿಸುವುದರ ಬಗ್ಗೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, "ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಬದಲಾದ ತಕ್ಷಣ ಹಿಂದಿನ ನಾಯಕರ ಭಾವಚಿತ್ರಗಳನ್ನು ತೆಗೆಯುವುದು ಒಳ್ಳೆಯ ಸಂಪ್ರದಾಯವಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ, ಇದನ್ನೂ ಈ ಹಿಂದೆಯೂ ಹೇಳಿದ್ದೇನೆ," ಎಂದರು.
ಈ ಚುನಾವಣೆ ನನ್ನ ಸ್ವಾಭಿಮಾನದ ಹೋರಾಟವೇ ಹೊರತು ರಾಜಕೀಯ ಆಕಾಂಕ್ಷೆಗಾಗಿ ಅಲ್ಲ ಎಂದು ಮಾರ್ಮಿಕವಾಗಿ ಹೇಳಿದ ಜಗದೀಶ್ ಶೆಟ್ಟರ್, ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಯಿತು. ಹಾಗಾಗಿ ಬಿಜೆಪಿ ತೊರೆದು ಬೇಷರತ್ತಾಗಿ ಕಾಂಗ್ರೆಸ್ ಪಕ್ಷ ಸೇರಿದ್ದೇನೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಅವರ ಎದುರಾಳಿಯಾಗಿ ಅವರ ಮಾಜಿ ಶಿಷ್ಯ ಮಹೇಶ್ ಟೆಂಗಿನಕಾಯಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ರಾಜ್ಯದ ಹೈ-ವೋಲ್ಟೇಜ್ ಕ್ಷೇತ್ರಗಳಲ್ಲಿ ಇದೂ ಒಂದಾಗಿದೆ.












Click it and Unblock the Notifications