ಜಗದೀಶ್ ಶೆಟ್ಟರ್‌ಗೆ ಸೋಲು ಬಿಜೆಪಿಗೆ ಜಯ- ಹುಬ್ಬಳ್ಳಿಯಲ್ಲಿ ಅಮಿತ್ ಶಾ ವಿಶ್ವಾಸ
ಹುಬ್ಬಳ್ಳಿ ಏಪ್ರಿಲ್ 25: ಇತ್ತೀಚೆಗೆ ಬಿಜೆಪಿ ತೊರೆದಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಚುನಾವಣೆಯಲ್ಲಿ ಸೋಲುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ. ಜೊತೆಗೆ ಹುಬ್ಬಳ್ಳಿ ಜನ ಯಾವಾಗಲೂ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹಿತನುಡಿಯನ್ನಾಡಿದ್ದಾರೆ.
ಇಂದು ಹುಬ್ಬಳ್ಳಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, ಜಗದೀಶ್ ಶೆಟ್ಟರ್ ಪಕ್ಷ ತೊರೆದಿರುವುದರಿಂದ ಬಿಜೆಪಿಗೆ ನಷ್ಟವಿಲ್ಲ. ಜಗದೀಶ್ ಶೆಟ್ಟರ್ ಅವರೇ ಚುನಾವಣೆಯಲ್ಲಿ ಸೋಲುತ್ತಾರೆ, ಹುಬ್ಬಳ್ಳಿ ಜನ ಯಾವಾಗಲೂ ಬಿಜೆಪಿಗೆ ಮತ ಹಾಕಿದ್ದಾರೆ ಮತ್ತು ಬಿಜೆಪಿಯ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದ ನಂತರ ಕಾಂಗ್ರೆಸ್ ಸೇರಿದರು ಮತ್ತು ಹುಬ್ಬಳ್ಳಿ-ಧಾರವಾಡ-ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ, ಅವರು ಹಲವಾರು ಬಾರಿ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಇವರೊಂದಿಗೆ ಲಕ್ಷ್ಮಣ ಸವದಿ ಕೂಡ ಬಿಜೆಪಿ ತೊರೆದರು. ಬಳಿಕ ಬಿಜೆಪಿ ಮೇಲೆ ಹಲವಾರು ಆರೋಪಗಳನ್ನು ಶೆಟ್ಟರ್ ಮಾಡಿರುವ ಲಿಂಗಾಯತ ಸಮುದಾಯದ ಮತಗಳು ಕೈ ತಪ್ಪುವ ಭೀತಿ ಬಿಜೆಪಿಗೆ ಎದುರಾಗಿದೆ. ಇದರಿಂದಾಗಿ ರಾಜ್ಯ ನಾಯಕರು ಮಾತ್ರವಲ್ಲದೆ ಕೇಂದ್ರ ನಾಯಕರ ಮೂಲಕ ಲಿಂಗಾಯತ ಮತಗಳನ್ನು ಸೆಳೆಯುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಇದರ ಬೆನ್ನಲ್ಲೇ ಹುಬ್ಬಳ್ಳಿಗೆ ಅಮಿತ್ ಶಾ ಭೇಟಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ಧರ್ಮಾಧಾರಿತ ಮೀಸಲಾತಿ ಅಸಂವಿಧಾನಿಕವಾಗಿದೆ. ಕಾಂಗ್ರೆಸ್ ನಾಯಕರು ಮುಸ್ಲಿಮರಿಗೆ ಮೀಸಲಾತಿಯನ್ನು ಜಾರಿಗೆ ತರುವುದಾಗಿ ಹೇಳುತ್ತಿದ್ದಾರೆ. ಹಾಗಾದರೆ ಅವರು ಯಾರ ಮೀಸಲಾತಿಯನ್ನು ಕಡಿಮೆ ಮಾಡುತ್ತಾರೆ ಎಂದು ಶಾ ಪ್ರಶ್ನೆ ಮಾಡಿದರು.

ಈ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದರು. ಬಿಜೆಪಿಯಿಂದ ರೈತರಿಗೆ ಏನು ಆಗಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ ಹೇಳಿಕೆಗೆ ಶಾ ಪ್ರತಿಕ್ರಿಯೆ ನೀಡಿದರು. ನೇರ ಲಾಭ ವರ್ಗಾವಣೆಯಡಿ 56 ಲಕ್ಷ ರೈತರು ಪ್ರತಿ ವರ್ಷ ₹10,000 ಪಡೆಯುತ್ತಿದ್ದಾರೆ. ಇಷ್ಟು ರೈತರು ಎರಡು-ಮೂರು ಕುಟುಂಬದವರು ಎಂದು ರಾಹುಲ್ ಗಾಂಧಿ ಭಾವಿಸುತ್ತಾರೆಯೇ..? ಎಂದು ಶಾ ಹೇಳಿದರು.
ಆಡಳಿತಾರೂಢ ಬಿಜೆಪಿ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದು, ಮೋದಿ ಸರ್ಕಾರ ಐದು ವರ್ಷಗಳಲ್ಲಿ ರಾಜ್ಯಕ್ಕೆ ತೆರಿಗೆ ಹಂಚಿಕೆ ಮತ್ತು ಅನುದಾನದಲ್ಲಿ ಶೇ 140 ರಷ್ಟು ಹೆಚ್ಚು ಹಣವನ್ನು ನೀಡಿದೆ ಎಂದು ಅವರು ಹೇಳಿದರು. ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ, ಕರ್ನಾಟಕವು 2009 ಮತ್ತು 2014 ರ ನಡುವೆ ತೆರಿಗೆ ಹಂಚಿಕೆ ಮತ್ತು ಅನುದಾನದ ವಿಷಯದಲ್ಲಿ ಸುಮಾರು ₹ 94,224 ಕೋಟಿಗಳನ್ನು ಪಡೆದುಕೊಂಡಿದೆ. ಮೋದಿ ಸರ್ಕಾರವು 2014 ರಿಂದ 2019 ರ ನಡುವೆ ₹ 2,26,418 ಕೋಟಿಗಳನ್ನು ನೀಡಿದೆ. ಇದು ಶೇ 140 ರಷ್ಟು ಹೆಚ್ಚು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಣ ಕಳುಹಿಸಲಾಗಿದೆ ಎಂದು ಶಾ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ 55 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದರು.
ಸಂಪರ್ಕ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ರಾಜ್ಯವನ್ನು ಮತ್ತಷ್ಟು ಕೊಂಡೊಯ್ಯಲು ಸೇರಿದಂತೆ ಬಿಜೆಪಿ ಸರ್ಕಾರದ ವಿವಿಧ ಅಭಿವೃದ್ಧಿ ಉಪಕ್ರಮಗಳನ್ನು ಅಮಿತ್ ಶಾ ಪಟ್ಟಿ ಮಾಡಿದರು. ಬಿಜೆಪಿ ಸರ್ಕಾರ ಜನಸಾಮಾನ್ಯರಿಗಾಗಿ ಕೆಲಸ ಮಾಡುತ್ತಿಲ್ಲ ಎಂಬ ರಾಹುಲ್ ಗಾಂಧಿ ಆರೋಪವನ್ನು ತಳ್ಳಿಹಾಕಿದರು.
ನೇರ ಲಾಭ ವರ್ಗಾವಣೆಯಿಂದ ರೈತರು ಲಾಭ ಪಡೆಯುತ್ತಿದ್ದಾರೆ ಎಂದ ಶಾ, ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಪಿಎಫ್‌ಐಗೆ ಮುಕ್ತ ಚಾಲನೆ ನೀಡಲಾಯಿತು ಮತ್ತು ಅದರ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಸಂಘಟನೆಯನ್ನು ನಿಷೇಧಿಸಿದೆ ಮತ್ತು ಅದರ ಪ್ರಮುಖ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಶಾ ಹೇಳಿದರು.
ಏಪ್ರಿಲ್ 29 ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದು, ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಮತ್ತಷ್ಟು ಬಲ ಸಿಗುವ ಸಾಧ್ಯತೆ ಇದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಕಾರ, ಪ್ರಧಾನಿ ಮೋದಿ ಬೆಳಗಾವಿಯಿಂದ ಪ್ರಚಾರ ಆರಂಭಿಸಲಿದ್ದಾರೆ. ಅವರು ಕರ್ನಾಟಕದ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಬೆಳಗಾವಿಯ ಚಿಕ್ಕೋಡಿ, ಕಿತ್ತೂರು ಮತ್ತು ಕುಡಚಿಗೆ ಭೇಟಿ ನೀಡಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೂ ಪ್ರಧಾನಿ ಭೇಟಿ ನೀಡಲಿದ್ದಾರೆ. ಪ್ರಧಾನಿಯವರು ಮತ್ತೆ ಮೇ 3 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.












Click it and Unblock the Notifications