ಕಾಂಗ್ರೆಸ್ ಸೇರಿ ಹುಬ್ಬಳ್ಳಿಗೆ ಆಗಮಿಸಿದ ಜಗದೀಶ್ ಶೆಟ್ಟರ್: ಪತಿಯನ್ನು ತಬ್ಬಿ ಕಣ್ಣೀರಿಟ್ಟ ಶಿಲ್ಪಾ ಶೆಟ್ಟರ್
ಹುಬ್ಬಳ್ಳಿ, ಏಪ್ರಿಲ್ 17: ಸುಮಾರು ಮೂವತ್ತು ವರ್ಷಗಳ ಬಿಜೆಪಿ ನಂಟನ್ನು ಕಳೆದುಕೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಬಿಜೆಪಿಯಿಂದಲೇ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಜಗದೀಶ್ ಶೆಟ್ಟರ್ ಇಂದು( ಏಪ್ರಿಲ್ 17) ರಂದು ತಮ್ಮ ಮೊದಲ ಪಕ್ಷವನ್ನು ತೊರೆದಿದ್ದಾರೆ.
ಟಿಕೆಟ್ ವಿಳಂಬ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದ ಜಗದೀಶ್ ಶೆಟ್ಟರ್ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದಿದ್ದಾರೆ. ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದ ಜಗದೀಶ್ ಶೆಟ್ಟರ್ ತಮ್ಮ ನಿವಾಸಕ್ಕೆ ಬರುತ್ತಿದ್ದಂತೆ ಪತಿ ಶೆಟ್ಟರ್‌ನ್ನು ತಬ್ಬಿಕೊಂಡು ಪತ್ನಿ ಶಿಲ್ಪಾ ಶೆಟ್ಟರ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಜಗದೀಶ್ ಶೆಟ್ಟರ್ ನಿವಾಸದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಜಮಾಯಿಸಿದ್ದು, ಹೂವಿನ ಮಳೆ ಸುರಿಸಿ ಸ್ವಾಗತಿಸಿಕೊಂಡಿದ್ದಾರೆ. ಈ ವೇಳೆ ಶಿಲ್ಪಾ ಶೆಟ್ಟರ್ ಭಾವುಕರಾಗಿದ್ದು, ಜಗದೀಶ್ ಶೆಟ್ಟರ್ ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಪತ್ನಿ ಭಾವುಕರಾದನ್ನು ಕಂಡು ಜಗದೀಶ್ ಶೆಟ್ಟರ್ ಕೂಡ ಕಣ್ಣೀರಾಗಿದ್ದಾರೆ.
ಇನ್ನು ಈ ಹಿಂದೆ ಪತಿಗೆ ಟಿಕೆಟ್ ನೀಡಲು ಮೀನಾಮೇಷ ಎಣಿಸುತ್ತಿದ್ದ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಶಿಲ್ಪಾ ಶೆಟ್ಟರ್, 'ಯಾವುದು ಅಪರಾಧ ಇಲ್ಲದ ವ್ಯಕ್ತಿಗೆ ಕೈ ಕಾಲು ಕಟ್ಟಿ ಮನೆಯಲ್ಲಿ ಕುಳಿತುಕೊಳ್ಳಿ, ಅಧಿಕಾರ ನಿನ್ನ ಹೆಂಡತಿ ಮಾಡಲಿ, ನೀನು ಮನೆಯಲ್ಲಿ ಕೂರು ಎಂದರೆ ಅವರು ಮನೆಯಲ್ಲಿ ಕುಳಿತು ಅಡುಗೆ ಮಾಡಬೇಕಾ? ನಾನು ವಿಧಾನಸೌಧಕ್ಕೆ ಹೋಗಬೇಕಾ' ಎಂದು ಪ್ರಶ್ನಿಸಿದ್ದರು.

ನನ್ನ ಗಂಡನನ್ನು ಮೆಟ್ಟಿ ನಾನು ವಿಧಾನಸೌಧ ಹತ್ತಬೇಕಾ- ಶಿಲ್ಪಾ ಶೆಟ್ಟರ್
'ನನ್ನ ಗಂಡನನ್ನು ಮೆಟ್ಟಿ ನಾನು ವಿಧಾನಸೌಧ ಹತ್ತಬೇಕಾ ಎಂದು ಬಿಜೆಪಿ ನಾಯಕರು ಹೇಳಬೇಕು. ಇದರಿಂದ ನನ್ನ ಮನಸ್ಸು ನೊಂದಿದೆ. ಹೀಗಾಗಿ ಜಗದೀಶ್ ಶೆಟ್ಟರ್ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧಳಾಗಿದ್ದೇನೆ. ಮೂವತ್ತು ವರ್ಷಗಳಿಂದ ಮತದಾರರು ನನ್ನ ಗಂಡನನ್ನು ಬೆಳೆಸಿದ್ದಾರೆ. ಜಗದೀಶ್ ಶೆಟ್ಟರ್ ಅವರ ನಿರ್ಧಾರಕ್ಕೆ ನಾನು ಸಾಥ್ ನೀಡುತ್ತೇನೆ' ಎಂದು ಹೇಳಿದ್ದರು.
ಕಾಂಗ್ರೆಸ್ ಸೇರ್ಪಡೆಗೊಂಡ ಜಗದೀಶ್ ಶೆಟ್ಟರ್‌ಗೆ ಹುಬ್ಬಳ್ಳಿಯಲ್ಲಿ ಅದ್ಧೂರಿ ಸ್ವಾಗತ
ಇನ್ನು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಹುಬ್ಬಳ್ಳಿಗೆ ಆಗಮಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಹಾಗೂ ಪಕ್ಷದ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ಜಗದೀಶ್ ಶೆಟ್ಟರ್ ಅವರನ್ನು ಸನ್ಮಾನಿಸಿ ಶೆಟ್ಟರ್ ಶೆಟ್ಟರ್ ಜಗದೀಶ್ ಶೆಟ್ಟರ್ ಎಂದು ಘೋಷಣೆ ಮೂಲಕ ಸಂಭ್ರಮಿಸಿದ್ದರು. ಮೂವತ್ತು ವರ್ಷಗಳ ಕಾಲ ಬಿಜೆಪಿ ಕಟ್ಟಿ ಬೆಳೆಸಿರುವ ಜಗದೀಶ್ ಶೆಟ್ಟರ್ ಈಗ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ.












Click it and Unblock the Notifications