ಮೂರು ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲು ಒತ್ತಡವಿದೆ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಮಾರ್ಚ್ 12: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಇಂದು ಇಲ್ಲವೇ, ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದೆ. ಇದರಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೂ ಟಿಕೆಟ್ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಪಟ್ಟಿ ಪ್ರಕಟ ಮುನ್ನ ಮಾತನಾಡಿರುವ ಶೆಟ್ಟರ್ ಅವರು, ಬಿಜೆಪಿಗೆ ಬಂದ ಮೇಲೆ ಯಾವ ಕ್ಷೇತ್ರವನ್ನೂ ಕೇಳಿಲ್ಲ. ನನ್ನ ಮೇಲೆ ಒತ್ತಡವಿದೆ ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರ ಜತೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ನಾನು ಭಾರತೀಯ ಜನತಾ ಪಾರ್ಟಿಗೆ (ಬಿಜೆಪಿ) ಬಂದ ಬಳಿಕ ಲೋಕಸಭಾ ಚುನಾವಣೆ ಪ್ರಯುಕ್ತ ಯಾವ ಕ್ಷೇತ್ರವನ್ನೂ ಕೇಳಿಲ್ಲ. ಪಕ್ಷದ ತೀರ್ಮಾನವೇ ಅಂತಿಮ ಎಂದು ಅವರು ಪ್ರತಿಕ್ರಿಯಿಸಿದರು.

ಅವಕಾಶ ಸಿಕ್ಕಾಗಲೂ ಹೋಗಿಲ್ಲ
ಹಾವೇರಿ ಕ್ಷೇತ್ರ ಹಾಗೂ ಬೆಳಗಾವಿ ಲೋಸಕಭಾ ಕ್ಷೇತ್ರದಿಂದ ಕಣಕ್ಕೆ ಇಳಿಯುವಂತೆ ಕಾರ್ಯಕರ್ತರು ನನ್ನನ್ನು ಆಹ್ವಾನಿಸಿದ್ದಾರೆ.
ಆದರೆ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನ್ನ ಮೇಲೆ ಬಹಳ ಒತ್ತಡವಿದೆ. ನನಗೆ ಲೋಕಸಭೆಗೆ ಅವಕಾಶ ಸಿಕ್ಕರೂ ಹೋಗಿರಲಿಲ್ಲ. ಈ ಹಿಂದೆ ಮೂರು ಭಾರಿ ಅವಕಾಶ ಬಂದಿತ್ತು ಎಂದರು.
ಮೂರು ಭಾರಿ ಲೋಕಸಭೆಗೆ ಆಯ್ಕೆಯಾಗುವ ಅವಕಾಶ ಬಂದರೂ ಸಹಿತ ನನಗೆ ಆಸಕ್ತಿ ಇಲ್ಲದ ಕಾರಣ ನಾನು ಹೋಗಿರಲಿಲ್ಲ. ಆದರೆ ಈ ಭಾರಿ ಆ ರೀತಿ ಇಲ್ಲ. ಜನರು, ಕಾರ್ಯಕರ್ತರ ಒತ್ತಡ ನನ್ನ ಮೇಲೆ ಹೆಚ್ಚಿದೆ.

ವರಿಷ್ಠರು ಸೂಚಿಸಿದ ಕಡೆ ಸ್ಪರ್ಧೆ
ಒತ್ತಡ ಇದ್ದರೂ ಸಹ ಬಿಜೆಪಿ ಪಕ್ಷದ ವರಿಷ್ಠರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧ. ಬಿಜೆಪಿ ನಾಯಕರು ಹೇಳಿದರೆ ನಾನು ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
ನಾನು ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಅನೇಕ ಜನರ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ನಾನು ಯಾವ ಅಭ್ಯರ್ಥಿಯ ಪರವಾಗಿ ಮಾತನಾಡುವುದಿಲ್ಲ. ಇನ್ನೂ ಪ್ರಹ್ಲಾದ್ ಜೋಶಿಯವರಿಗೂ ಮತ್ತು ನನಗೂ ಮುನಿಸಿನ ಕುರಿತು ಮಾತನಾಡಿದ ಅವರು, ಎಲ್ಲಿ ಏನು ಹೇಳಬೇಕು ಅದನ್ನು ಮಾತ್ರ ಹೇಳಿದ್ದೇನೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಬಿಜೆಪಿ ಆಮಿಷ ಆರೋಪ ಅವರೇ ತಳ್ಳಿ ಹಾಕಿದ್ದಾರೆ
ಬಿಜೆಪಿ ಆಮಿಷ ಒಡ್ಡುತ್ತಿದೆ ಎಂಬ ವಿಚಾರ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಳ್ಳು ಹೇಳುತ್ತಿದಾರೆ. ಅವರು ಸುಳ್ಳು ಆಪಾದನೆ ನಿಲ್ಲಿಸಬೇಕು. ಈ ಬಗ್ಗೆ ಸ್ವತಃ ಶಾಮನೂರು ಶಿವಶಂಕರಪ್ಪ ಅವರೇ ಆಮಿಷದ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ ಎಂದು ಅವರು ಶೆಟ್ಟರ್ ಅವರು ಸ್ಪಷ್ಟಪಡಿಸಿದರು.
ಬೆಳಗಾವಿ ಇಲ್ಲವೇ ಧಾರವಾಡದಿಂದ ಬಿಜೆಪಿ ಸೂಚನೆ ಮೇರೆಗೆ ನಾನು ಸ್ಪರ್ಧಿಸಲು ಸಿದ್ಧ ಎಂದಿರುವ ಜಗದೀಶ್ ಶೆಟ್ಟರ್ ಅವರ ಹೆಸರು ಕೇಳಿ ಬರುತ್ತಿವೆ. ಬಿಜೆಪಿ ಮೊದಲ ಪಟ್ಟಿಯಲ್ಲಿ ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಮಾತು ಬಲವಾಗಿ ಕೇಳಿ ಬಂದಿವೆ.
ಕಾಂಗ್ರೆಸ್ ನಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡುವ ವಿಚಾರ ಸಿದ್ದರಾಮಯ್ಯನವರು ಪ್ರಸ್ತಾಪಿಸಿದ್ದರು. ಈ ಬಗ್ಗೆ ಪಕ್ಷದ ಹೈಕಮಾಂಡ್‌ಗೆ ಶಿಫಾರಸು ಸಹ ಹೋಗಿತ್ತು ಎನ್ನಲಾಗಿದೆ.ಒಂದು ವೇಳೆ ಕಾಂಗ್ರೆಸ್‌ನಿಂದ ಧಾರವಾಡದಲ್ಲಿ ಶೆಟ್ಟರ್ ಅವರು ಕಣಕ್ಕಿಳಿದಿದ್ದರೆ ಅಲ್ಲಿ ಸೋಲುವ ಸಾಧ್ಯತೆ ಇತ್ತು. ಇನ್ನೂ ಬೆಳಗಾವಿಯ ಟಿಕೆಟ್ ಅಲ್ಲಿನ ಪ್ರಭಾವಿ ಕಾಂಗ್ರೆಸ್ ನಾಯಕರ ಸೂಚನೆ ಮೇರೆಗೆ ಅಂತಿಮಗೊಳ್ಳುವ ಸಾಧ್ಯತೆ ಹೆಚ್ಚು. ಬೇರೆ ಕ್ಷೇತ್ರಗಳು ಸಿಗುವುದು ಅನುಮಾನ ಇತ್ತು. ಹೀಗಾಗಿ ಭವಿಷ್ಯದ ರಾಜಕೀಯ ಲೆಕ್ಕಾಚಾರ ಮೇಲೆ ಜಗದೀಶ್ ಶೆಟ್ಟರ್ ಬಿಜೆಪಿ ಬಂದರೆಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ.












Click it and Unblock the Notifications